ಸಾರಾಂಶ
ಕನಕಪುರ: ಶಿಕ್ಷಣ ದೊರೆಯದ ಕಾರಣ ಎಷ್ಟೋ ಜನರು ಸರಿಯಾದ ಯೋಚನೆ-ಯೋಜನೆಗಳಿಲ್ಲದೆ ಸಂಪತ್ತು ಗಳಿಕೆ, ಉನ್ನತ ಹುದ್ದೆಗಳಿಂದ ವಂಚಿತರಾದರು. ಇದನ್ನೇ ಉಪಯೋಗಿಸಿಕೊಂಡು ಹಿಂದೆ ರಾಜ-ಮಹಾರಾಜರು ನಮ್ಮನ್ನು ನಿರಂತರವಾಗಿ ವಿದ್ಯೆಯಿಂದ ವಂಚಿಸುತ್ತಾ, ಶೋಷಿಸುತ್ತಾ ಸಾಗಿದರು ಎಂದು ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಾತೆ ಸಾವಿತ್ರಿ ಬಾಪುಲೆ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಎರಡೂವರೆ ಸಾವಿರ ವರ್ಷಗಳಿಂದ ನಡೆದು ಬರುತ್ತಿರುವ ಅನಿಷ್ಠ ಗುಲಾಮಗಿರಿಯನ್ನು ತೊಡೆದು ತುಳಿತಕ್ಕೊಳಗಾದ ಮಹಿಳೆಯರಿಗೂ ಶಿಕ್ಷಣ ನೀಡಬೇಕೆಂದು ಸಾವಿತ್ರಿ ಬಾಪುಲೆ ಶ್ರಮಿಸಿದರು ಎಂದು ಹೇಳಿದರು.ಸಾವಿತ್ರಿ ಬಾಪುಲೆ ಮಹಿಳೆಯರಿಗೆ ಶಿಕ್ಷಣ ನೀಡಬೇಕು ಎಂದು ಶ್ರಮಿಸಿದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಕೆಳಸ್ತರದ ಜನರನ್ನು ಮೇಲೆತ್ತಬೇಕು ಎಂದು ಶ್ರಮಿಸಿದರು. ಅದಕ್ಕಾಗಿ ವಿಶ್ವದಲ್ಲೇ ಬಲಿಷ್ಠವಾದ ಸಂವಿಧಾನವನ್ನು ನಮ್ಮ ದೇಶಕ್ಕೆ ಕೊಟ್ಟರು ಎಂದು ಸ್ಮರಿಸಿದರು.
ದೇಶದಲ್ಲಿ ಸಂವಿಧಾನ ರಚನೆಗೆ ಮೊದಲು ಇದ್ದ ಮನುಸೃತಿ ಸಮಯದಲ್ಲಿ ಸಾವಿತ್ರಿ ಬಾಪುಲೆ ಇದ್ದು ಅದನ್ನು ಎದುರಿಸಿ ವಿದ್ಯೆಯಿಂದ ವಂಚಿತ ಸಮುದಾಯಕ್ಕೆ ಶಿಕ್ಷಣ ನೀಡಿದರು. ಅವರು ನೀಡಿದ ಶಿಕ್ಷಣ ಹಾಗೂ ಡಾ. ಬಾಬಾ ಸಾಹೇಬ ಅಂಬೇಡ್ಕರ್ ನೀಡಿದ ಬಲಿಷ್ಠ ಸಂವಿಧಾನದಿಂದಾಗಿ ಎಲ್ಲ ಸ್ತರದ ಜನರು ಅಧಿಕಾರ ಪಡೆಯುವುದು ಸಾಧ್ಯವಾಗಿದೆ. ಪ್ರತಿಯೊಬ್ಬರು ಉತ್ತಮ ಶಿಕ್ಷಣದಿಂದ ಎಲ್ಲಾ ರಂಗಗಳಲ್ಲೂ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು.ದಮ್ಮದೀವಿಗೆ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಟ್ರಸ್ಟ್‌ನಿಂದ ಸಾವಿತ್ರಿ ಬಾಪುಲೆಯವರ ಜನ್ಮದಿನಾಚರಣೆಯನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂತಹ ಧೀಮಂತ ಮಹಿಳೆಯನ್ನು ಟ್ರಸ್ಟ್ ಮೂಲಕ ಈ ಸಮಾಜಕ್ಕೆ ಪರಿಚಯಿಸಿ ಅವರ ತತ್ವಾದರ್ಶಗಳನ್ನೂ ಸಹ ಒಪ್ಪಿಕೊಂಡು ಅವರ ದಿನಾಚರಣೆ ಆಚರಿಸಲು ಸರ್ಕಾರ ಆದೇಶ ಮಾಡಿದೆ ಎಂದು ತಿಳಿಸಿದರು.
ಪುಲೆ ದಂಪತಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ನಗರದ ಅಡ್ವೆಂಚರ್ ಅಥ್ಲೆಟಿಕ್ಸ್ ಅಕಾಡೆಮಿಯ ಮಕ್ಕಳು ಎರಡರಿಂದ ಏಳನೇ ಸ್ಥಾನ ಗಳಿಸುವ ಮೂಲಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.ಬೀದರ್‌ನ ದಮ್ಮದರ್ಶನ ಕೇಂದ್ರದ ಬಂತೇ ವರಜ್ಯೋತಿ, ಹಿರಿಯ ಸಾಹಿತಿ ಹಾಗೂ ಬೌದ್ಧ ಚಿಂತಕ ಡಾಕ್ಟರ್ ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಕವಿ ಸುಬ್ಬು ಹೊಲೆಯರ್, ಹೃದಯರೋಗ ತಜ್ಞ ಡಾ.ಬಿ.ಸಿ. ಬೊಮ್ಮಾಯ, ಎಂ.ಸಿ.ನಾಗರಾಜು, ಸಿದ್ದರಾಜು ಮುಂತಾದವರು ಉಪಸ್ಥಿತರಿದ್ದರು.ಪೊಟೋ೫ಸಿಪಿಟಿ೭:
ಕನಕಪುರದ ಅಂಬೇಡ್ಕರ್ ಭವನದಲ್ಲಿ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಪುಲೆ ಜನ್ಮದಿನಾಚರಣೆಯನ್ನು ರಾಜರತ್ನ ಅಂಬೇಡ್ಕರ್ ಉದ್ಘಾಟಿಸಿದರು.