ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸರ್ವೆ ಇಲಾಖೆ, ಕಂದಾಯ ಇಲಾಖೆಯಲ್ಲಿ ರೈತರ ಶೋಷಣೆ ನಡೆಯುತ್ತಿದೆ. ಲಂಚಕ್ಕಾಗಿ ಕಿರುಕುಳ ನೀಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಕೆ.ಅರುಣ್ ಕುಮಾರ್ ಎಚ್ಚರಿಸಿದರು.ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿಯ ವತಿಯಿಂದ ಕಂದಾಯ ಇಲಾಖೆಗೆ ತೆರಳಿ ಶಿರಸ್ತೇದಾರ್ ರಮೇಶ್ ಅವರಿಗೆ ರೈತರಿಗೆ ಆಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಿ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು.
ತಾಲೂಕಿನ ಕಂದಾಯ ಗ್ರಾಮಗಳ ವಿಸ್ತೀರ್ಣ, ಗ್ರ್ಯಾಂಟ್, ದುರಸ್ತಿಯಾಗಿರುವ ಜಾಗ, ಖಾಲಿಯಿರುವ ಜಾಗದ ವಿಸ್ತೀರ್ಣವನ್ನು ಎಕರೆಯಲ್ಲಿ ನೀಡಬೇಕು ಎಂದು ಮನವಿ 2 ತಿಂಗಳ ಹಿಂದೆ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕೆಲಸವಾಗಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.ಜನಸಾಮಾನ್ಯರ ರೈತರಿಗೆ ಹಣದಿಂದ ನೌಕರರು ಜೀವನ ಸಾಗಿಸುತ್ತಿರುವುದು. ಕೈತುಂಬಾ ಸಂಬಳ ತೆಗೆದುಕೊಳ್ಳುತ್ತಿರುವ ನೌಕರರು ನಿಯತ್ತಿನಿಂದ ಕೆಲಸ ಮಾಡಬೇಕು. ಅಧಿಕಾರಿಗಳು ನಿಯಮದಂತೆ ತಾಲೂಕು ವ್ಯಾಪ್ತಿಯಲ್ಲಿ ಸಿಗಬೇಕು. ಬೇರೆ ಜಿಲ್ಲೆಯಿಂದ ಓಡಾಡಿಕೊಂಡವರು, ಜಿಲ್ಲೆ ಬಿಟ್ಟು ತೊಲಗಬೇಕು. ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಡಬೇಕು. ಸಿ.ಸಿ.ಕ್ಯಾಮೆರಾ ಕಣ್ಗಾವಲಿನಲ್ಲಿ ಕೆಲಸ ಕಾರ್ಯಗಳು ನಡೆಯಬೇಕು. ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯವಾಗಬೇಕು. ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ಸಮಸ್ಯೆಗಳು ಬಗೆಹರಿಯದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅರುಣ್ ಕುಮಾರ್ ಎಚ್ಚರಿಸಿದರು.
ಪೊಲೀಸ್ ಠಾಣೆಗೆ ತೆರಳಿದ ಸಮಿತಿ ಪದಾಧಿಕಾರಿಗಳು ಟ್ರಾಫಿಕ್ ಸಮಸ್ಯೆ ಬಗ್ಗೆ ಠಾಣಾಧಿಕಾರಿಗಳಾದ ರಮೇಶ್ ಕುಮಾರ್, ಪ್ರಹ್ಲಾದ್ ಅವರೊಂದಿಗೆ ಚರ್ಚಿಸಿದರು.ಹಿಂದೆಲ್ಲಾ ಟ್ರಾಫಿಕ್ ವ್ಯವಸ್ಥೆ ಸರಿಯಿತ್ತು. ಇತ್ತೀಚಿನ ದಿನಗಳಲ್ಲಿ ವ್ಯವಸ್ಥೆ ಹಾಳಾಗಿದೆ. ಎಲ್ಲೆಂದರಲ್ಲೆ ವಾಹನಗಳು ನಿಂತಿರುತ್ತವೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸಲಾಗುತ್ತಿದೆ. ಸಾರ್ವಜಿನಿಕ ಸ್ಥಳದಲ್ಲಿ ಧೂಮಪಾನ ಮುಂದುವರಿದಿದೆ. ಬೈಕ್ ವ್ಹೀಲಿಂಗ್ ಮಾಡುವವರು ಕಾಣ ಸಿಗುತ್ತಿದ್ದಾರೆ ಎಂಬ ದೂರಿದರು.2 ತಿಂಗಳ ಹಿಂದೆ ಇಲ್ಲಿನ ಠಾಣೆಗೆ ಇನ್ಪೆಕ್ಟರ್ ಬಂದಿದ್ದಾರೆ. ಜನರಿಗೆ ಅವರು ಸಿಗುತ್ತಿಲ್ಲ. ಜನರಿಗೆ ಕಾನೂನಿನ ಅರಿವು ಮರೆಯಲು ಇಂತಹ ಅಧಿಕಾರಿಗಳು ಕಾರಣರಾಗುತ್ತಾರೆ. ಪೊಲೀಸ್ ಅಧಿಕಾರಿಗಳು ಎಂದರೆ ಜನರಿಗೆ ಭಯಮಿಶ್ರಿತ ಗೌರವ ಇರಬೇಕು. ಅದನ್ನು ಅಧಿಕಾರಿಗಳು ಉಳಿಸಿಕೊಳ್ಳಬೇಕು ಎಂದು ಹೇಳಿದರು. ಗ್ರಾಮೀಣ ಭಾಗದಲ್ಲೂ ಪೊಲೀಸ್ ಬೀಟ್ ಹಾಕಬೇಕು. ಗ್ರಾಮಸಭೆ ನಡೆಸಿ ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ಬೇರೆ ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಠಾಣಾಧಿಕಾರಿ ರಮೇಶ್ ಕುಮಾರ್ ಭರವಸೆ ನೀಡಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯಕ್ ಅವರೊಂದಿಗೆ ಟ್ರಾಫಿಕ್ ಸಮಸ್ಯೆ ಬಗ್ಗೆ ಚರ್ಚಿಸಿದರು. ಶೌಚಗೃಹ ಸರಿಪಡಿಸುವಂತೆ ಆಗ್ರಹಿಸಿದರು. ತಾಲೂಕು ಕಚೇರಿಯ ಮುಂಭಾಗದ ರಸ್ತೆ ಬದಿಯಲ್ಲಿ ಮಣ್ಣು ಸುರಿದಿರುವುದರಿಂದ ವಾಹನ ನಿಲ್ಲಿಸಲು ಸಮಸ್ಯೆಯಾಗಿದೆ. ಅದನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದರು.
ಶೌಚಗೃಹದ ಸ್ವಚ್ಛತೆ ಹಾಗು ದುರಸ್ತಿ ಕಾಮಗಾರಿಯನ್ನು ಕೂಡಲೆ ಕೈಗೊಳ್ಳಲಾಗುವುದು. ರಸ್ತೆ ಬದಿಯ ಮಣ್ಣು ತೆರವುಗೊಳಿಸಿ, ಇಂಟರ್‍ಲಾಕ್ ಅಳವಡಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಕಸವಿಲೇವಾರಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಆರೋಗ್ಯ ನಿರೀಕ್ಷಕ ಜಾಸಿಂ ಖಾನ್ ಭರವಸೆ ನೀಡಿದರು.ಸಮಿತಿ ಉಪಾಧ್ಯಕ್ಷ ಕೆ.ಎನ್.ದೀಪಕ್, ಪದಾಧಿಕಾರಿಗಳಾದ ಎಚ್.ಕೆ.ತ್ರಿಶೂಲ್, ಕೆ.ಎ.ಪ್ರಕಾಶ್, ಜಿ.ಎಂ.ಹೂವಯ್ಯ, ಆದರ್ಶ್, ಸಂದೀಪ್, ರಕ್ಷಿತ್, ಭರತ್, ಗೌತಮ್ ಕಿರಗಂದೂರು ಮತ್ತಿತರರು ಇದ್ದರು.