ಚಿತ್ರದುರ್ಗದಲ್ಲಿಂದು ಶೋಷಿತರ ಜಾಗೃತಿ ಸಮಾವೇಶ

| Published : Jan 28 2024, 01:20 AM IST

ಸಾರಾಂಶ

ಎಲ್ಲಾ ಶೋಷಿತರಿಗೂ ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ, ಸಹಬಾಳ್ವೆ, ಸ್ವಾಭಿಮಾನ ತಲುಪಬೇಕು ಎಂಬುವುದು ನಮ್ಮ ಒತ್ತಾಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಆಯೋಜಿಸಿದ್ದೇವೆ ಎಂದು ಆರ್.ಪ್ರಸನ್ನಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟ ಸಹಯೋಗದಲ್ಲಿ ಜ.28ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗದ ಶ್ರೀಬಸವಮೂರ್ತಿ ಮಾದಾರ ಚೆನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ ನಡೆಯಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಒಕ್ಕೂಟದ ಸಂಚಾಲಕ ಆರ್.ಪ್ರಸನ್ನಕುಮಾರ್ ಹೇಳಿದರು.ಇಲ್ಲಿನ ಪ್ರೆಸ್‌ಟ್ರಸ್ಟ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅವಕಾಶ ವಂಚಿತ ಜಾತಿಗಳಿಗೆ ಮೀಸಲಾತಿ ನೀಡಿ ಸಾಮಾಜಿಕ ಸಮಾನತೆ ಸಾರಿದ ರಾಜ್ಯ ನಮ್ಮ ಕರ್ನಾಟಕ. ಹಲವು ಹಿಂದುಳಿದ ವರ್ಗಗಳ ಆಯೋಗಗಳು ವೈಜ್ಞಾನಿಕ ಅಧ್ಯಯನ ನಡೆಸಿ ಮೀಸಲಾತಿ ಜಾರಿ ಮಾಡಿದೆ. ಬಲಾಢ್ಯರು ಶೋಷಿತರ ಪಾಲನ್ನು ಕಬಳಿಸುತ್ತಿದ್ದಾರೆ ಎಂದರು.ಹಾಗಾಗಿ ಈ ಅಧ್ಯಯನಗಳನ್ನೆಲ್ಲ ಪರಿಶೀಲಿಸಿ ಎಲ್ಲಾ ಜಾತಿಯವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಎಲ್ಲರಿಗೂ ಸಂವಿಧಾನದ ಆಶಯಗಳಾದ ಸಾಮಾಜಿಕ ನ್ಯಾಯ, ಸಹಬಾಳ್ವೆ, ಸ್ವಾಭಿಮಾನ ತಲುಪಬೇಕು ಎಂಬುವುದು ನಮ್ಮ ಒತ್ತಾಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕು ಎಂಬ ಹಿನ್ನೆಲೆಯಲ್ಲಿ ಈ ಸಮಾವೇಶವನ್ನು ಆಯೋಜಿಸಿದ್ದೇವೆ ಎಂದರು.

ಕಾಂತರಾಜ್ ವರದಿಯನ್ನು ಜಾರಗೊಳಿಸಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು. ಈ ಡಬ್ಲ್ಯೂಎಸ್ ಶೇ.10ರಂದು ಮೀಸಲಾತಿಯನ್ನು ರದ್ದುಪಡಿಸಬೇಕು. ಮಹಿಳಾ ಮೀಸಲಾತಿ ಕಾಯ್ದೆ ಜಾರಿಯಾಗಬೇಕು. ಅಲ್ಪಸಂಖ್ಯಾತ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಬೇಕು. ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ವಿಸ್ತರಿಸಬೇಕು. ಮುಸ್ಲಿಂ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ರಾಜೇಂದ್ರ ಸಾಚಾರ್ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂಬುವುದು ಸೇರಿದಂತೆ ಹಲವು ಒತ್ತಾಯಗಳನ್ನು ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮುಂದೆ ನೀಡುತ್ತೇವೆ ಎಂದರು.

ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಶೋಷಿತ ಸಮುದಾಯದ ಸಚಿವರುಗಳು, ಎಲ್ಲಾ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲಗೋಡು ರತ್ನಾಕರ್, ಕಲೀಂ ಪಾಶಾ, ಕೆ.ರಂಗನಾಥ್, ಶಿವಕುಮಾರ್, ಎಂ.ಪ್ರವೀಣ್‍ಕುಮಾರ್, ಗಣಪತಿ, ಶಿವಣ್ಣ, ಎಚ್.ಪಿ.ಗಿರೀಶ್, ಎಸ್.ಬಿ.ಅಶೋಕ್ ಕುಮಾರ್, ಎಸ್.ಕುಮಾರೇಶ್ ಮುಂತಾದವರು ಇದ್ದರು.ಶಾಮನೂರು ಹೇಳಿಕೆಗೆ ಪ್ರಸನ್ನ ಖಂಡನೆ ಶಿವಮೊಗ್ಗದಲ್ಲಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸುವಂತೆ ಕರೆ ನೀಡಿರುವ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಖಂಡನೀಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆರ್‌.ಪ್ರಸನ್ನಕುಮಾರ್‌ ಅಸಮಾಧಾನ ಹೊರಹಾಕಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಕ್ಕಿನ ಕಲ್ಮಠದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಭಾವೈಕ್ಯ ಸಮ್ಮೇಳನ ಹಾಗೂ ಗುರು ಬಸವಶ್ರೀ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸುವಂತೆ ಕರೆ ನೀಡಿರುವುದು ಸರಿಯಲ್ಲ ಎಂದು ಆಪಾದಿಸಿದರು.ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ, ಮಾಜಿ ಖಜಾಂಚಿಯಂತಹ ಮಹತ್ವದ ಸ್ಥಾನದಲ್ಲಿದ್ದಾರೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ಎದುರಾಳಿ ಮಾತುಗಳನ್ನಾಡಿರುವುದು ಪಕ್ಷದ ಸಂಘಟನೆಯ ಮನೋಬಲಕ್ಕೆ ಪೆಟ್ಟುಬಿದ್ದಂತಾಗಿದೆ. ಪಕ್ಷದ ಕಾರ್ಯಕರ್ತರನ್ನು ಗೊಂದಲಗೊಳಿಸಿದೆ. ಶಾಮನೂರು ಅವರ ಹೇಳಿಕೆ ಅತ್ಯಂತ ಖಂಡನೀಯ. ಬಿಜೆಪಿ ಅಭ್ಯರ್ಥಿ ಪರವಾದ ಇಂತಹ ಹೇಳಿಕೆಗಳಲ್ಲಿ ಪಕ್ಷ ವಿರೋಧಿ ಧೋರಣೆಯಂತೆ ಕಾಣುತ್ತದೆ. ಮತ್ತು ಇಂತಹ ಹೇಳಿಕೆಗಳ ಔಚಿತ್ಯವೇನು? ಶಾಮನೂರು ಅವರಿಗಿರುವ ಪಕ್ಷದ ಬದ್ಧತೆಯಾದರೂ ಏನು ? ಎಂಬ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಟೀಕಿಸಿದರು. 27ಎಸ್‌ಎಂಜಿಕೆಪಿ03: ಶಿವಮೊಗ್ಗದ ಪ್ರೆಸ್‌ಟ್ರಸ್ಟ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಆರ್‌.ಪ್ರಸನ್ನಕುಮಾರ್‌ ಮಾತನಾಡಿದರು.