ಧ್ವಜಸ್ತಂಭ ತೆರವು ವಿಚಾರ: ಗ್ರಾಮಸ್ಥರ ಪ್ರತಿಭಟನೆ

| Published : Jan 28 2024, 01:20 AM IST

ಧ್ವಜಸ್ತಂಭ ತೆರವು ವಿಚಾರ: ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಕಾಡಾನೆ ಸೆರೆಹಿಡಿಯುವ ಕಾರ್‍ಯಾಚರಣೆ ವೇಳೆ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಸಾವಿಗೀಡಾಗಿದ್ದು, ಅದರ ನೆನಪಿಗಾಗಿ ಶ್ರೀ ಆಂಜನೇಯ ಅರ್ಜುನ ಧ್ವಜಸ್ತಂಭ ಎಂದು ನಾಮಕರಣ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

108 ಅಡಿ ಎತ್ತರ ಶ್ರೀ ಆಂಜನೇಯ ಅರ್ಜುನ ಧ್ವಜಸ್ತಂಭ ತೆರವು ವಿಚಾರವಾಗಿ ತಾಲೂಕಿನ ಕೆರಗೋಡು ಗ್ರಾಮದ ಅಂಗಡಿಗಳನ್ನು ಬಂದ್ ಮಾಡಿ ಗ್ರಾಮಸ್ಥರು ಶನಿವಾರ ಪ್ರತಿಭಟನೆ ನಡೆಸಿದರು.

ಗೌರಿಶಂಕರ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದ ಎದುರು ಸ್ವಗ್ರಾಮ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ಸುಮಾರು 3.50 ಲಕ್ಷ ರು. ವೆಚ್ಚದಲ್ಲಿ ಧ್ವಜಸ್ತಂಭ ನಿರ್ಮಾಣ ಮಾಡಲಾಗಿದೆ. ಈಗ ಏಕಾಏಕಿ ತೆರವು ಮಾಡುವಂತೆ ತಾಪಂ ಇಒ ಸೂಚಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಕಾಡಾನೆ ಸೆರೆಹಿಡಿಯುವ ಕಾರ್‍ಯಾಚರಣೆ ವೇಳೆ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಸಾವಿಗೀಡಾಗಿದ್ದು, ಅದರ ನೆನಪಿಗಾಗಿ ಶ್ರೀ ಆಂಜನೇಯ ಅರ್ಜುನ ಧ್ವಜಸ್ತಂಭ ಎಂದು ನಾಮಕರಣ ಮಾಡಲಾಗಿದೆ. ರಾಷ್ಟ್ರೀಯ ಮತ್ತು ನಾಡಹಬ್ಬಗಳ ವೇಳೆ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಮತ್ತು ನಾಡ ಧ್ವಜ ಹಾರಿಸುವುದು, ಉಳಿದ ದಿನಗಳಲ್ಲಿ ಕೇಸರಿ ಬಣ್ಣದ ಹನುಮ ಧ್ವಜ ಹಾರಿಸಲು ನಿರ್ಧರಿಸಲಾಗಿತ್ತು ಎಂದು ಹೇಳಿದರು.

ಅದರಂತೆ ಕಳೆದ ಜ.20 ರಂದು ಗ್ರಾಮದಲ್ಲಿ ಸರಳ ಸಮಾರಂಭದ ಮೂಲಕ ಧ್ವಜಸ್ತಂಭ ಉದ್ಘಾಟಿಸಿ ಆಂಜನೇಯಸ್ವಾಮಿ ಧ್ವಜ ಹಾರಿಸಲಾಗಿತ್ತು. ನಿನ್ನೆಯ ಗಣರಾಜ್ಯೋತ್ಸವ ವೇಳೆ ರಾಷ್ಟ್ರಧ್ವಜವನ್ನು ಹಾರಿಸಿ, ಸಂಜೆ ಮತ್ತೆ ಆಂಜನೇಯಸ್ವಾಮಿ ಧ್ವಜ ಹಾರಿಸಲಾಯಿತು ಎಂದು ತಿಳಿಸಿದರು.

ಇದನ್ನು ಸಹಿಸದ ಕೆಲವರು ಪಿತೂರಿ ನಡೆಸಿ ತಾಪಂ ಇಒಗೆ ದೂರು ನೀಡಿದ್ದಾರೆ. ದೂರಿನನ್ವಯ ಇಂದು ತಾಪಂ ಇಒ ವೀಣಾ ಸ್ಥಳ ಪರಿಶೀಲನೆ ನಡೆಸಿ ಧ್ವಜಸ್ತಂಭವನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಧ್ವಜಸ್ತಂಭ ತೆರವು ಮಾಡಬಾರದು ಎಂದು ಗ್ರಾಮಸ್ಥರು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದರು.

ಧ್ವಜ ಸ್ತಂಭ ನಿರ್ಮಾಣಕ್ಕೆ ಸ್ಥಳೀಯ ಪಂಚಾಯಿತಿಯಿಂದ ಅರ್ಜಿ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ. ಬಹುಮತದ ಆಧಾರದ ಮೇರೆಗೆ ಧ್ವಜ ಸ್ತಂಭ ಸ್ಥಾಪನೆ ಮಾಡಲಾಗಿದೆ. ಸ್ಥಳೀಯ ಶಾಸಕ ಪಿ.ರವಿಕುಮಾರ್ ರಂಗಮಂದಿರ ಆವರಣದಲ್ಲಿ ಧ್ವಜಸ್ತಂಭ ನಿರ್ಮಿಸುವಂತೆ ತಿಳಿಸಿದ್ದರು. ಶಾಸಕರ ಸಲಹೆ ಮೇರೆಗೆ ಟ್ರಸ್ಟ್ ವತಿಯಿಂದ ಧ್ವಜಸ್ತಂಭ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಕೆಲವರು ಧ್ವಜಸ್ಥಂಭ ವಿಚಾರವಾಗಿ ಗ್ರಾಮದಲ್ಲಿ ಅಶಾಂತಿ ಉಂಟು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಯಾವುದೇ ಕಾರಣಕ್ಕೂ ಧ್ವಂಜಸ್ತಂಭ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.

ಗ್ರಾಮಸ್ಥರು, ಅಧಿಕಾರಿಗಳ ಸಭೆ

ಪ್ರತಿಭಟನೆ ವಿಷಯ ತಿಳಿದ ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಮತ್ತು ತಾಪಂ ಇಒ ವೀಣಾ ಗ್ರಾಮಕ್ಕೆ ಆಗಮಿಸಿ ಗ್ರಾಪಂ ಕಚೇರಿಯಲ್ಲಿ ಗ್ರಾಮಸ್ಥರು, ಗ್ರಾಪಂ ಸದಸ್ಯರೊಂದಿಗೆ ಸಭೆ ನಡೆಸಿದರು. ನಂತರ ಗ್ರಾಮಸ್ಥರು, ಗ್ರಾಪಂ ಸದಸ್ಯರ ಮೇರೆಗೆ ಧ್ವಜಸ್ತಂಭ ತೆರವು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡರು.

ನಂತರ ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಈ ತಿಳಿಸಿ ಅವರ ಸೂಚನೆ ಮೇರೆಗೆ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಮನ್ಮುಲ್ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಉಪಾಧ್ಯಕ್ಷ ರಘುನಂದನ್, ಬಿಜೆಪಿ ಮುಖಂಡರಾದ ಜಗದೀಶ್, ಹರೀಶ್, ರವಿ, ವಿನೋಭ, ವಿಜಯಕುಮಾರ್, ಶಿವು, ಪ್ರಸಾದ್, ನವನೀತ್‌ಗೌಡ, ಕ್ರಾಂತಿ ಮಂಜು, ಅಜಯ್, ಶಿವಕುಮಾರ್ ಆರಾಧ್ಯ, ಹರ್ಷ ಅಂಚೆದೊಡ್ಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.