ಮಾನವ ಕಳ್ಳ ಸಾಗಾಣಿಕೆಗೆ ಶೋಷಿತ ವರ್ಗ ಹೆಚ್ಚು ಬಲಿ

| Published : Jul 31 2025, 12:46 AM IST

ಸಾರಾಂಶ

ಮಾನವ ಕಳ್ಳ ಸಾಗಾಣಿಕೆ ಎಂಬುದು ಸಮಾಜಕ್ಕೆ ಅಂಟಿದ ಪಿಡುಗು. ಇದರ ನಿವಾರಣೆಗೆ ಜಾಗೃತಿ ಅಗತ್ಯವಾಗಿದೆ

ಗದಗ: ಮಾನವ ಕಳ್ಳ ಸಾಗಾಣಿಕೆವೆಂದರೆ ವ್ಯಕ್ತಿಯನ್ನು ಬಲವಂತ, ಮೋಸದಿಂದ ಅಥವಾ ಶೋಷಣೆಗೆ ಗುರಿಪಡಿಸುವ ಉದ್ದೇಶದಿಂದ ಸ್ಥಳಾಂತರಿಸುವುದು. ಇದಕ್ಕೆ ಮಹಿಳೆಯರು, ಮಕ್ಕಳು ಹಾಗೂ ಶೋಷಿತ ವರ್ಗದವರು ಹೆಚ್ಚು ಬಲಿಯಾಗುತ್ತಾರೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನಾಗವೇಣಿ ಹೇಳಿದರು.

ನಗರದ ಜಿಪಂ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾರ್ಮಿಕ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಬುಧವಾರ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಜಾಗೃತಿ, ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಕಳ್ಳ ಸಾಗಾಣಿಕೆ ಎಂಬುದು ಸಮಾಜಕ್ಕೆ ಅಂಟಿದ ಪಿಡುಗು. ಇದರ ನಿವಾರಣೆಗೆ ಜಾಗೃತಿ ಅಗತ್ಯವಾಗಿದೆ. ಮಾನವ ಕಳ್ಳ ಸಾಗಾಣಿಕೆ ಮಾಡುವುದು ಅಕ್ಷಮ್ಯ ಅಪರಾಧ. ದೇಶ ವಿದೇಶಗಳಿಂದ ಆಗಮಿಸಿ ಹೆಣ್ಣು ಮಕ್ಕಳನ್ನು ಹಣ ಕೊಟ್ಟು ಮದುವೆ ಮಾಡಿಕೊಂಡು ಹೋಗುವವರ ಮೇಲೆ ನಿಗಾ ವಹಿಸಬೇಕು. ಇದು ಮೋಸದ ಜಾಲವಾಗಿರುವದು ಅಧಿಕವಾಗಿದೆ ಎಂದರು.

ಮಾನವ ಕಳ್ಳ ಸಾಗಾಣಿಕೆ ಮಾಡುವುದರ ಮೂಲಕ ಮಾನವರ ಅಂಗಾಂಗ ತೆಗೆದು ಇತರರಿಗೆ ಮಾರುವುದು,ಇದರಿಂದ ಸಮಾಜ ಘಾತಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಅಪರಾಧವೆಸಗುತ್ತಾರೆ. ಈ ಜಾಲವನ್ನು ಸಾರ್ವಜನಿಕರು ಗಮನಿಸಿ ಮಾಹಿತಿಯನ್ನು ಹತ್ತಿರದ ಪೊಲೀಸ್‌ ಠಾಣೆಗೆ ನೀಡುವ ಮೂಲಕ ಮಾನವ ಕಳ್ಳ ಸಾಗಾಣಿಕೆ ತಡೆಯಲು ಸಾರ್ವಜನಿಕರು ಭಾಗಿಯಾಗಬೇಕೆಂದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಮಾನವನ ಹಕ್ಕು ವಂಚಿಸಿ ಕಳ್ಳ ಸಾಗಾಣಿಕೆ ಮಾಡುವುದು, ಶೋಷಣೆ ಮಾಡುವುದು ಅಕ್ಷಮ್ಯ ಅಪರಾಧ. ಇಂದಿನ ಸಮಾಜವನ್ನು ಬಾಧಿಸುತ್ತಿರುವ ಅತ್ಯಂತ ಭೀಕರ ಹಾಗೂ ಅಮಾನವೀಯ ಅಪರಾಧ ಇದಾಗಿದೆ. ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಸಮೂಹ ಚಟುವಟಿಕೆಗಳು ಶಾಲಾ ಮಟ್ಟದಿಂದಲೇ ಶಿಕ್ಷಣ ಹಾಗೂ ಕಟ್ಟುನಿಟ್ಟಾದ ಕ್ರಮಗಳ ಮೂಲಕ ಈ ಅಪರಾಧ ತಡೆ ಹಿಡಿಯಲು ಸಾಧ್ಯ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ಕಲ್ಲೂರ ಮಾತನಾಡಿ, ಸಮಾಜದಲ್ಲಿ ಹಲವರು ತಮ್ಮ ಮಕ್ಕಳನ್ನು ಬಿಕ್ಷಾಟನೆ ಮಾಡಿಸುವುದು, ಗೃಹ ಕೆಲಸ, ಮಾದಕ ವಸ್ತು ಸಾಗಾಣಿಕೆ ಮಾಡುವ ಮೂಲಕ ಅಪರಾಧ ಎಸಗುತ್ತಾರೆ.ಅವರಿಗೆ ಸರಿಯಾಗಿ ಜ್ಞಾನ ಒದಗಿಸುವ ಮೂಲಕ ಮಾನವ ಕಳ್ಳ ಸಾಗಾಣಿಕೆ ನಿಯಂತ್ರಿಸಬೇಕಿದೆ ಎಂದರು.

ಡಿವೈಎಸ್‌ಪಿ ಮಹಾಂತೇಶ ಸಜ್ಜನರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಜಿಪಂ ಸಿಇಒ ಭರತ್.ಎಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿದೇಶಕಿ ನಂದಾ ಹಣಬರಟ್ಟಿ, ಡಾ.ವೈ.ಕೆ. ಭಜಂತ್ರಿ, ಶಿಕ್ಷಣ ಇಲಾಖೆಯ ಉಪಸಮನ್ವಯಾಧಿಕಾರಿ ಎಂ.ಎಚ್. ಕಾಂಬ್ಳಿ ಇದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಕಾನೂನು ಅಭಿರಕ್ಷಕ ಗುರುರಾಜ ಗೌರಿ ಹಾಗೂ ಗದಗ ಸಿವಿಲ್ ಪೊಲೀಸ್‌ ಎಂ.ಎಫ್. ಅಸೂಟಿ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ ಸ್ವಾಗತಿಸಿದರು.