ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಶೋಷಿತ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದತ್ತವಾಗಿ ಕಲ್ಪಿಸಿರುವ ಮೀಸಲಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ ಕೆಲವೇ ಕೆಲವು ಜಾತಿಗಳು ಸಿಂಹಪಾಲು ಪಡೆದು, ಮಾದಿಗ ಸೇರಿದಂತೆ ಇತರೆ ಜಾತಿಗಳನ್ನು ವಂಚಿಸುತ್ತಿವೆ ಎಂದು ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ. ಕೃಷ್ಣಮೂರ್ತಿ ಆರೋಪಿಸಿದ್ದಾರೆ.ನಗರದ ಎಂಪ್ರೆಸ್ ಶಾಲೆ ಆಡಿಟೋರಿಯಂನಲ್ಲಿ ನಡೆದ ಮಾದಿಗರ ಮುನ್ನಡೆ ಆತ್ಮಗೌರವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಮಾದಿಗ ಮತ್ತು ಅದರ ಉಪಜಾತಿಗಳಿಗೆ ಮೀಸಲಾತಿಯಲ್ಲಿ ವಂಚನೆಯಾಗಿದ್ದರೂ ಕಾಂಗ್ರೆಸ್ ಪಕ್ಷ ಇಷ್ಟು ವರ್ಷಗಳ ಕಾಲ ಮೌನವಹಿಸಿ, ನಮ್ಮನ್ನು ಮತ್ತಷ್ಟು ಆಳಕ್ಕೆ ತುಳಿಯುವ ಪ್ರಯತ್ನ ಮಾಡಿದೆ ಎಂದರು.
ಮಾದಿಗರು ಕೇಳುತ್ತಿರುವ ಒಳಮೀಸಲಾತಿ, ಇನ್ನೊಂದು ಸಮುದಾಯದ ಮೇಲೆ ಸವಾರಿ ಮಾಡುವುದಕ್ಕಲ್ಲ. ಬದಲಾಗಿ ನ್ಯಾಯಯುತವಾಗಿ ನಮಗೆ ಬರಬೇಕಿರುವ ಹಕ್ಕನ್ನು ಪ್ರತಿಪಾದಿಸುತ್ತಿದ್ದು, ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಒಳಮೀಸಲಾತಿ ವಿಚಾರ ಒಂದು ತಾರ್ಕಿಕ ಅಂತ್ಯ ಕಾಣಲಿದೆ ಎಂಬ ನಂಬಿಕೆ ನಮಗಿದೆ. ಕಾಂಗ್ರೆಸ್ ಪಕ್ಷದಿಂದ ಎಂದಿಗೂ ಒಳಮೀಸಲಾತಿ ಜಾರಿ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವ ಮಾದಿಗ ಸಮುದಾಯದ ಸಚಿವರು, ಶಾಸಕರು ಈ ವಿಚಾರದಲ್ಲಿ ಮಾತನಾಡು ವಂತೆಯೇ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ನ್ಯಾಯಕ್ಕೆ ಅವಕಾಶವೇ ಇಲ್ಲ. ಹಾಗಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದೆ ಎಂದು ಕೆ.ಬಿ. ಕೃಷ್ಣಮೂರ್ತಿ ತಿಳಿಸಿದರು.ಶಾಸಕ ಬಿ. ಸುರೇಶಗೌಡ ಮಾತನಾಡಿ, ಸದಾಶಿವ ಆಯೋಗಕ್ಕೆ ಅನುದಾನ ನೀಡಬಾರದು ಎಂಬ ಯಡಿಯೂರಪ್ಪ ಅವರ ಮೇಲೆ ಸಾಕಷ್ಟು ಒತ್ತಡ ತರಲಾಗಿತ್ತು. ಆದರೂ ಅನುದಾನ ನೀಡಿದರು. ಹಾಗೆಯೇ 2012ರಲ್ಲಿ ವರದಿಯನ್ನು ಸ್ವೀಕರಿಸದಂತೆ ಸಹ ಅಂದಿನ ಮುಖ್ಯಮಂತ್ರಿ ಡಿ. ಸದಾನಂದಗೌಡ ಮೇಲೂ ಒತ್ತಡವಿತ್ತು. ಎಲ್ಲ ಒತ್ತಡಗಳನ್ನು ಮೀರಿ ಬಿಜೆಪಿ ನಾಯಕರು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸ್ವೀಕರಿಸಿದರು. ಒಂದು ವೇಳೆ ಅಂದು ಬಿಜೆಪಿ ನಾಯಕರು ಮನಸ್ಸು ಮಾಡದಿದ್ದರೆ, ಇಂದಿನ ಕಾಂತರಾಜು ವರದಿಯ ಸ್ಥಿತಿಯೇ ಸದಾಶಿವ ಆಯೋಗದ ವರದಿಗೂ ಬರುತ್ತಿತ್ತು. ಬಿಜೆಪಿ ಪಕ್ಷ ಮಾದಿಗರ ಪರವಾಗಿದೆ. ಎಂತಹದ್ದೇ ಕಷ್ಟಕಾಲದಲ್ಲಿಯೂ ನಿಮ್ಮೊಂದಿಗೆ ನಾನೂ ನಿಲ್ಲುತ್ತೇನೆ ಎಂಬ ಭರಸವೆಯನ್ನು ನೀಡಿದರು.
ಸಾಮರಸ್ಯ ವೇದಿಕೆ ಮುಖಂಡ ವಾದಿರಾಜ್ ಮಾತನಾಡಿ, ಎ.ಜೆ. ಸದಾಶಿವ ಆಯೋಗವನ್ನು ರಚನೆ ಮಾಡಿದಷ್ಟೇ ಕಾಂಗ್ರೆಸ್ ಪಕ್ಷದ ಸಾಧನೆ, ಒಳ ಮೀಸಲಾತಿಗಾಗಿ 20 ವರ್ಷಗಳಿಂದ ಯಾವ ಪ್ರಯತ್ನ ಮಾಡದೇ ರಾಜಕಾರಣ ಮಾಡಿಕೊಂಡು ಬರುತ್ತಿದೆ. 2008 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆಯೋಗಕ್ಕೆ 11 ಕೋಟಿ ಅನುದಾನ ನೀಡಿದ್ದರಿಂದ ಆಯೋಗ ವರದಿಯನ್ನು ಸಿದ್ಧಪಡಿಸಿ 2012ರಲ್ಲಿ ಸಲ್ಲಿಸಿದ ನಂತರ 2013-18 ರವರೆಗೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಳ ಮೀಸಲಾತಿ ಜಾರಿಗೆ ಪ್ರಯತ್ನಿಸಲಿಲ್ಲ. ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ಅವರು ಮೂರು ತಿಂಗಳು ಅಧ್ಯಯನ ನಡೆಸಿ ಮೀಸಲಾತಿ ವರ್ಗೀಕರಣ ಮಾಡಿದ್ದು, ಜನಸಂಖ್ಯೆ ಆಧಾರಿತವಾಗಿ ವರ್ಗೀಕರಣ ಗೊಂಡಿರುವ ಒಳ ಮೀಸಲಾತಿಯನ್ನು ಮೋದಿ ಅವರ ಭರವಸೆಯಂತೆ ಸುಪ್ರೀಂಕೋರ್ಟ್ ನ ಏಳು ನ್ಯಾಯಾಧೀಶರ ಮುಂದೆ ಕೇಂದ್ರ ಸರಕಾರ ಒಳ ಮೀಸಲಾತಿ ಪರ ವಾದ ಮಂಡನೆ ಮಾಡಲಿದೆ ಎಂದರು.ಬಿಜೆಪಿ ಮುಖಂಡ ಡಾ. ಲಕ್ಷ್ಮಿಕಾಂತ್ ಮಾತನಾಡಿ, ಕಾಂಗ್ರೆಸ್ ಪಕ್ಷ ಇದುವರೆಗೂ ಬಿಜೆಪಿ ಮತ್ತು ಆರ್‌ಎಸ್ಎಸ್ ಬಗ್ಗೆ ಇಲ್ಲ, ಸಲ್ಲದ ಹೇಳಿಕೆಗಳನ್ನು ನೀಡಿ ನಮ್ಮ ದಾರಿ ತಪ್ಪಿಸಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಿಜವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ಬದ್ಧತೆ ಇದ್ದರೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಂದಿನ ಸಮಾಜ ಕಲ್ಯಾಣ ಸಚಿವರು, ಸರಕಾರದ ಮೇಲೆ ಒತ್ತಡ ತಂದು, ಒಳಮೀಸಲಾತಿ ಜಾರಿ ಮಾಡಿಸಲಿ ಎಂದು ಸವಾಲು ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್ ಮಾತನಾಡಿ, ಬೊಮ್ಮಾಯಿ ನೇತೃತ್ವದ ಸರಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯನ್ನು ಬ್ರಹ್ಮನಿಂದಲೂ ತಡೆಯಲು ಸಾಧ್ಯವಿಲ್ಲ, ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಲು ಹೋರಾಟ ಮಾಡಬೇಕಿದೆ ಅಷ್ಟೇ. ಬಿಜೆಪಿ ಸರಕಾರ ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಳ ಮಾಡಿದಂತೆಯೇ ಇಂದು ನೇಮಕಾತಿ ಮತ್ತು ವಿದ್ಯಾರ್ಥಿಗಳಿಗೆ ಪ್ರವೇಶ ದೊರಕುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆ ಒಳಗೆ ಕೇಂದ್ರ ಸರಕಾರದಿಂದ ಒಳ ಮೀಸಲಾತಿ ಜಾರಿಗೊಳಿಸಿ ಆದೇಶ ಹೊರಡಿಸಲಿದ್ದು, ಮಾದಿಗ ಸಮುದಾಯದ ಮುಖಂಡರು ಅರಿವು ಹೊಂದುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಬಿಎಸ್‌ಪಿಯ ಅರಕಲವಾಡಿ ನಾಗೇಂದ್ರ ಮಾತನಾಡಿದರು. ವೇದಿಕೆಯಲ್ಲಿ ಸೂರನಹಳ್ಳಿ ಶ್ರೀನಿವಾಸ್, ನರಸಿಂಹಮೂರ್ತಿ, ಕೃಷ್ಣಮೂರ್ತಿ, ಸೋರೆಕುಂಟೆ ಯೋಗೀಶ್, ಯಲ್ಲಾಪುರ ರಮೇಶ್, ಬಿಎಸ್ಪಿಯ ಅರಕಲವಾಡಿ ನಾಗೇಂದ್ರ, ಹೊಸಕೋಟೆ ನಟರಾಜು, ಶಿವಕುಮಾರ್ ಸಾಕೇಲ, ನಾಗೇಶ್, ಹನುಮಂತರಾಯಪ್ಪ, ಕಂಬದ ರಂಗಪ್ಪ ಹಲವರು ಪಾಲ್ಗೊಂಡಿದ್ದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ ಪ್ರಸಾದ್, ಮುಖಂಡರಾದ ಟಿ.ಜಿ. ನರಸಿಂಹರಾಜು, ಲಕ್ಷ್ಮಣ, ಮುರಳೀಧರ್, ಅರ್ಚಕ ಯದುನಂದನ್ ಇತರರು ಕಾರ್ಯಕ್ರಮ ನೇತೃತ್ವ ವಹಿಸಿದ್ದರು.ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀನಿವಾಸ ಪ್ರಸಾದ್, ಮುಖಂಡರಾದ ಟಿ.ಜಿ.ನರಸಿಂಹರಾಜು, ಲಕ್ಷ್ಮಣ, ಮುರಳೀಧರ್, ಅರ್ಚಕ ಯದುನಂದನ್ ಇತರರು ಕಾರ್ಯಕ್ರಮ ನೇತೃತ್ವ ವಹಿಸಿದ್ದರು.
ಫೋಟೊನಗರದ ಎಂಪ್ರೆಸ್ ಶಾಲೆ ಆಡಿಟೋರಿಯಂನಲ್ಲಿ ನಡೆದ ಮಾದಿಗರ ಮುನ್ನಡೆ ಆತ್ಮಗೌರವ ಸಮಾವೇಶವನ್ನು ರಾಜ್ಯಸಭೆಯ ಮಾಜಿ ಸದಸ್ಯ ಕೆ.ಬಿ. ಕೃಷ್ಣಮೂರ್ತಿ ಉದ್ಘಾಟಿಸಿದರು. ಜತೆಗೆ ಶಾಸಕ ಬಿ. ಸುರೇಶಗೌಡ ಮುಂತಾದವರು ಇದ್ದರು.