ಶೋಷಿತ ಸಮುದಾಯಗಳು ಸಂಘಟಿತರಾಗಬೇಕು- ಯಾವಗಲ್

| Published : Jan 26 2024, 01:50 AM IST

ಸಾರಾಂಶ

ದೇಶದಲ್ಲಿ ಹಲವಾರು ವರ್ಷಗಳಿಂದ ಶೋಷಿತ ಸಮುದಾಯಗಳು ತುಳತಕ್ಕೆ ಒಳಗಾಗಿವೆ, ಈ ಸಮುದಾಯದವರು ಸಂಘಟಿತರಾಗಬೇಕೆಂದು ನರಗುಂದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಯಾವಗಲ್ ಹೇಳಿದರು.

ನರಗುಂದ: ದೇಶದಲ್ಲಿ ಹಲವಾರು ವರ್ಷಗಳಿಂದ ಶೋಷಿತ ಸಮುದಾಯಗಳು ತುಳತಕ್ಕೆ ಒಳಗಾಗಿವೆ, ಈ ಸಮುದಾಯದವರು ಸಂಘಟಿತರಾಗಬೇಕೆಂದು ನರಗುಂದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪ್ರವೀಣ ಯಾವಗಲ್ ಹೇಳಿದರು.

ಅವರು ಗುರುವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ಶೋಷಿತರ ಜಾಗೃತಿ ಸಮಾವೇಶದ ನಿಮಿತ್ತ ತಾಲೂಕು ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಕೆಲವು ಮೇಲ್ವರ್ಗಗಳ ಸಮುದಾಯ ತಮ್ಮ ಸ್ವಾರ್ಥಕ್ಕೆ ಶೋಷಿತ ಸಮುದಾಯಗಳನ್ನು ತುಳಿದಿದ್ದಾರೆ. ಹಾಗಾಗಿ ಈ ಸಮುದಾಯಗಳಗೆ ನ್ಯಾಯ ಸಿಗಬೇಕೆಂದು ಜ. 28ರಂದು ಚಿತ್ರದುರ್ಗದಲ್ಲಿ ಶೋಷಿತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ನಾಡಿನ ಶೋಷಿತ ಸಮುದಾಯಗಳು, ಹಿಂದುಳಿದ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಂವಿಧಾನದಲ್ಲಿರುವ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗುವದು ಅವಶ್ಯವಿದೆ. ಈ ಸಮುದಾಯಗಳಗೆ ಎಚ್. ಕಾಂತರಾಜು ವರದಿಯನ್ನು ಜಾರಿಗೊಳಿಸಬೇಕು, ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಿಸಬೇಕು, ಎ.ಡಬ್ಲ್ಯೂ ಎಸ್ ಶೇ.10ರಷ್ಟು ಮೀಸಲಾತಿ ರದ್ದುಪಡಿಸುವಂತೆ ಒತ್ತಾಯಿಸಬೇಕು, ಮಹಿಳಾ ರಾಜಕೀಯ ಮೀಸಲಾತಿ ಜಾರಿಯಾಗಬೇಕು, ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ, ಖಾಸಗಿ ಕ್ಷೇತ್ರಕ್ಕೂ ಮೀಸಲಾತಿಯನ್ನು ಸರ್ಕಾರ ವಿಸ್ತರಿಸಬೇಕೆಂದು ಹೇಳಿದರು. ಎಚ್.ಬಿ.ಅಸೂಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಈ ನಮ್ಮ ಹಕ್ಕೋತ್ತಾಯಗಳನ್ನು ಶೀಘ್ರವಾಗಿ ಈಡೇರಿಸುವಂತೆ ಒತ್ತಾಯಿಸಲು ಪರಿಶಿಷ್ಟ ಜಾತಿ, ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ, ಅಲ್ಪ ಸಂಖ್ಯಾತ ಮತ್ತು ಅಸಂಘಟಿತ ಶೋಷಿತ ಸಮುದಾಯಗಳು ಸಂಘಟಿತರಾಗಲೇಬೇಕಾದ ಅನಿವಾರ್ಯತೆ ಇದೆ, ಆದ್ದರಿಂದ ಜ.28ರಂದು ಚಿತ್ರದುರ್ಗದಲ್ಲಿ ಜರುಗುವ ಶೋ಼ಷಿತರ ಜಾಗೃತಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುವದು ಅವಶ್ಯವಿದೆ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ನೀಲಪ್ಪ ಗುಡದಣ್ಣವರ, ದ್ಯಾಮಣ್ಣ ಕಾಡಪ್ಪನವರ, ಬಸಪ್ಪ ನರಗುಂದ, ಜಿ.ಬಿ. ತಳವಾರ, ಎಸ್.ಬಿ. ದಂಡಿನ, ಸಿಕಂದರ ಪಠಾಣ, ರಾಮಕೃಷ್ಣ ಗೊಂಬಿ, ಶಿವಾನಂದ ಮಾಯಣ್ಣವರ, ಶಿವಾನಂದ ಬನಹಟ್ಟಿ, ವಿ.ಕೆ.ತಳವಾರ, ನಾಗಪ್ಪ ದೊಡ್ಡಮನಿ, ನಬಿಸಾಬ ಕಿಲ್ಲೇದಾರ, ದ್ಯಾಮಣ್ಣ ಮೇಗಲಮನಿ, ಚನ್ನಬಸಪ್ಪ ಪೂಜಾರ, ಚನ್ನಬಸು ಹುಲಜೋಗಿ, ಪ್ರಕಾಶ ಹಡಗಲಿ, ಸೇರಿದಂತೆ ಮುಂತಾದವರು ಇದ್ದರು.