ಸಾರಾಂಶ
ರಾಜ್ಯದ ಸಾವಿರಾರು ರೈತರಿಗೆ ವಕ್ಫ್ ನಿಂದ ನೋಟಿಸ್ ಜಾರಿಯಾಗಿದ್ದು, ರೈತರು ಸೇರಿದಂತೆ ನೋಟೀಸ್ ಪಡೆದವರು ತೀವ್ರ ಆತಂಕದಲ್ಲಿದ್ದಾರೆ
ಬಳ್ಳಾರಿ: ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್ ಬೋರ್ಡ್ ನಿಂದ ರೈತರು, ಮಠ-ಮಾನ್ಯಗಳು, ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ವಕ್ಫ್ ಬೋರ್ಡ್‌ನ ಕರಾಳ ಕಾನೂನಿನಿಂದಾಗಿ ಹಿಂದೂಗಳಿಗೆ ಸೇರಿದ ನಿವೇಶನಗಳು, ಖಾಸಗಿ ಜಮೀನುಗಳು ಹಾಗೂ ಸರ್ಕಾರದ ಹೆಸರಿನಲ್ಲಿರುವ ಅಪಾರ ಪ್ರಮಾಣದ ಆಸ್ತಿಯನ್ನು ಕಬಳಿಸಲಾಗುತ್ತಿದೆ. ರಾಜ್ಯದ ಸಾವಿರಾರು ರೈತರಿಗೆ ವಕ್ಫ್ ನಿಂದ ನೋಟಿಸ್ ಜಾರಿಯಾಗಿದ್ದು, ರೈತರು ಸೇರಿದಂತೆ ನೋಟೀಸ್ ಪಡೆದವರು ತೀವ್ರ ಆತಂಕದಲ್ಲಿದ್ದಾರೆ ಎಂದು ದೂರಿದ ಪ್ರತಿಭಟನಾಕಾರರು, ಕಾಂಗ್ರೆಸ್ ನ ದುರಾಡಳಿತ ನೀತಿಯಿಂದಾಗಿಯೇ ಹಿಂದೂಗಳಿಗೆ ರಾಜ್ಯದಲ್ಲಿ ಸಂಕಷ್ಟ ಬಂದೊದಗಿದೆ ಎಂದು ತಿಳಿಸಿದರು.ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಜಮಾಯಿಸಿದ ಸಂಘಟನೆಯ ಸದಸ್ಯರು ಕೆಲ ಹೊತ್ತು ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಕೂಡಲೇ ವಕ್ಫ್ ಬೋರ್ಡ್ ರೈತರು ನೀಡಿರುವ ನೋಟಿಸ್‌ಗಳನ್ನು ಹಿಂದಕ್ಕೆ ಪಡೆಯಬೇಕು. ಯಾವುದೇ ಕಾರಣಕ್ಕೂ ಹಿಂದೂಗಳಿಗೆ ಸಂಬಂಧಿಸಿದ ಆಸ್ತಿಯನ್ನು ವಕ್ಫ್‌ಗೆ ವರ್ಗಾವಣೆ ಆಗಲು ಬಿಡಬಾರದು ಎಂದು ಆಗ್ರಹಿಸಿದರು. ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಕ್ಫ್ ಬೋರ್ಡ್‌ನಿಂದ ಹಿಂದೂಗಳ ಆಸ್ತಿ ಕಬಳಿಸಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.