ವಕ್ಫ್‌ ಹೆಸರಿನಲ್ಲಿ ಆಸ್ತಿ ಕಬಳಿಕೆ, ಸರ್ಕಾರದ ವಿರುದ್ಧ ಬಿಜೆಪಿ ಘಟಕದಿಂದ ಆಕ್ರೋಶ

| Published : Nov 22 2024, 01:20 AM IST / Updated: Nov 22 2024, 06:58 AM IST

ಸಾರಾಂಶ

ವಕ್ಫ್‌ ಹೆಸರಿನಲ್ಲಿ ರೈತರ ಭೂಮಿ, ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಗಳನ್ನು ವಶಕ್ಕೆ ಪಡೆಯುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಕ್ರಮವನ್ನು ವಿರೋಧಿಸಿ, ಜಿಲ್ಲಾ ಬಿಜೆಪಿ ಘಟಕದಿಂದ ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ವಕ್ಫ್‌ ಹೆಸರಿನಲ್ಲಿ ರೈತರ ಭೂಮಿ, ಮಠ ಮಂದಿರ, ಸರ್ಕಾರಿ ಶಾಲೆಯ ಭೂಮಿಗಳನ್ನು ವಶಕ್ಕೆ ಪಡೆಯುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಕ್ರಮವನ್ನು ವಿರೋಧಿಸಿ, ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿ ಬಡವರಿಗೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಗುರುವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಕಾಗಿನೆಲೆ ವೃತ್ತದಲ್ಲಿರುವ ಬಿಜೆಪಿ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಆಗಮಿಸಿದ ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್‌ಅಹ್ಮದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದಪ್ಪ ವೃತ್ತದಲ್ಲಿ ಸಂಚಾರಕ್ಕೆ ತಡೆಯೊಡ್ಡಿ ಒಂದು ತಾಸಿಗೂ ಹೆಚ್ಚುಕಾಲ ಪ್ರತಿಭಟಿಸಿದರು. ಪ್ರತಿಭಟನೆ ತೀವ್ರಗೊಳಿಸುತ್ತಿದ್ದಂತೆ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈ ರಾಜ್ಯವನ್ನು ಪಾಕಿಸ್ತಾನ ಮಾಡಲು ಹೊರಟಿದೆ. ಮುಂದಿನ ದಿನಗಳಲ್ಲಿ ತಾಲಿಬಾನ್ ಕಾಯಿದೆ ಜಾರಿಗೆ ತರುವ ಹುನ್ನಾರ ನಡೆಸಿದ್ದಾರೆ. ದೇಶದಲ್ಲಿ ಬಾಂಬ್ ಹಾಕುವವರು, ದೇಶದ್ರೋಹಿಗಳು ಕಾಂಗ್ರೆಸ್‌ನವರಿಗೆ ಸಹೋದರರು ಇದ್ದಂತೆ. ದೇಶಪ್ರೇಮಿಗಳು ಇವರಿಗೆ ವಿರೋಧಿಗಳು. 

ಸಚಿವ ಜಮೀರ್ ಅಹ್ಮದ್‌ ವಕ್ಫ್‌ ಆಸ್ತಿ ತಿದ್ದುಪಡಿ ಮಾಡಿ ಎಂದು ಆದೇಶ ನೀಡಿದ್ದಾರೆ. ದೇವಸ್ಥಾನ, ಮಠ ಮಂದಿರಗಳು ವಕ್ಫ್ ಆಸ್ತಿಗೆ ಒಳಪಡುತ್ತಿದೆ. ಇದರಿಂದ ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರು ಆತಂಕಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

 ಸಿಎಂ ಸಿದ್ದರಾಮಯ್ಯನವರು ಈಗ ತಿದ್ದುಪಡಿ ಮಾಡುತ್ತೇವೆಂದು ಹೇಳುತ್ತಾ ರಾಜಕಾರಣದ ನಾಟಕವನ್ನು ಮಾಡುತ್ತಿದ್ದಾರೆ. ಜಮೀರ್‌ಅಹ್ಮದ್‌ನಂತಹ ಮತಾಂಧರಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಇಷ್ಟು ದಿನ ಲವ್ ಜಿಹಾದ್ ಆಯ್ತು, ಈಗ ಲ್ಯಾಂಡ್ ಜಿಹಾದ್ ಬಂದಿದೆ. ಮುಂದೆ ಮಠ ಮಾನ್ಯಗಳ ಜಿಹಾದ್ ಆಗುತ್ತದೆ. ಜನರು ಜಾಗೃತರಾಗಬೇಕು. ಸರ್ಕಾರ ಕೂಡಲೇ ವಕ್ಫ್ ಆಸ್ತಿ ಕಬಳಿಕೆ ನಿಲ್ಲಿಸಬೇಕೆಂದು ಆಗ್ರಹಿಸಿದರು.

ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ನಾಯಕರು ಸಂವಿಧಾನ ಇಟ್ಟುಕೊಂಡು ಓಡಾಡುತ್ತಾರೆ. ಸಂವಿಧಾನದ ಮಹತ್ವ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಗೊತ್ತೇ ಇಲ್ಲ. ವಕ್ಫ್ ಆಸ್ತಿ ಅಸಂವಿಧಾನಿಕವಾಗಿದೆ. ಕಾಂಗ್ರೆಸ್‌ನವರು ವೋಟ್ ಬ್ಯಾಂಕ್‌ಗೋಸ್ಕರ ಜನರನ್ನು ಹೆದರಿಸಿ, ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ವಕ್ಫ್ ಆಸ್ತಿ ಕಬಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಬಿಜೆಪಿ ಇರುವವರೆಗೂ ಒಂದಿಂಚೂ ಆಸ್ತಿಯನ್ನು ವಕ್ಫ್ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದರು. 

ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಹಿಂದೂಗಳು ಒಂದಾಗಬೇಕು, ಇಲ್ಲವಾದರೆ ಬಹಳ ಸಮಸ್ಯೆ ಎದುರಾಗಲಿದೆ. ಸವಣೂರ ತಾಲೂಕು ಕಡಕೋಳ ಗ್ರಾಮದಲ್ಲಿ ೧೩೨  ಕುಟುಂಬದ ಮನೆಗಳನ್ನು ವಕ್ಫ್‌ಗೆ ಸೇರ್ಪಡೆ ಮಾಡಿದ್ದಾರೆ. ಸಚಿವ ಜಮೀರ್‌ಅಹ್ಮದ್ ಜಿಲ್ಲೆಗೆ ಆಗಮಿಸಿದರೆ ಮುತ್ತಿಗೆ ಹಾಕುತ್ತೇವೆ. ಈ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡುವವರೆಗೂ ನಿರಂತರ ಹೋರಾಟ ಮಾಡುತ್ತೇವೆ. ಜಮೀರ್ ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ರಾಜ್ಯದ ಜನರು ಸುಮ್ಮನೆ ಇರಲ್ಲ. ಸಿದ್ದರಾಮಯ್ಯನವರು ಸಾವಿರಾರು ಬಡವರ ರೇಶನ್ ಕಾರ್ಡ್ ರದ್ದು ಮಾಡುವ ಮೂಲಕ ಬಡವರ ಅನ್ನಕ್ಕೆ ಕನ್ನ ಹಾಕುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣವರ, ಭೋಜರಾಜ ಕರೂದಿ, ಎಂ.ಎನ್. ಈಟೇರ, ಕಲ್ಯಾಣಕುಮಾರ ಶೆಟ್ಟರ, ಡಾ. ಬಸವರಾಜ ಕೆಲಗಾರ, ಸಿದ್ಧರಾಜ ಕಲಕೋಟಿ, ನಂಜುಂಡೇಶ ಕಳ್ಳೇರ, ಮುರಿಗೆಪ್ಪ ಶೆಟ್ಟರ್, ಸುರೇಶ ಹೊಸಮನಿ, ಪಾಲಾಕ್ಷಗೌಡ ಪಾಟೀಲ, ರುದ್ರೇಶ ಚಿನ್ನಣ್ಣನವರ, ಗಿರೀಶ ತುಪ್ಪದ, ನಾಗೇಂದ್ರ ಕಡಕೋಳ, ಪರಮೇಶಪ್ಪ ಮೇಗಳಮನಿ, ಪ್ರಭು ಹಿಟ್ನಳ್ಳಿ, ಸಂತೋಷ ಆಲದಕಟ್ಟಿ, ಬಸವರಾಜ ಕಳಸೂರ, ಜಗದೀಶ ಮಲಗೋಡ, ಕಿರಣಕುಮಾರ ಕೋಣನವರ, ಜಗದೀಶ ಬಸೇಗಣ್ಣಿ, ಕೆ.ಶಿವಲಿಂಗಪ್ಪ, ಬಸವರಾಜ ಚಳಗೇರಿ, ಮೃತ್ಯುಂಜಯ ಮುಷ್ಠಿ, ಜಗದೀಶ ದೊಡ್ಡಗೌಡ್ರ ಸೇರಿದಂತೆ ಮತ್ತಿತರರು ಇದ್ದರು.