ಸಾರಾಂಶ
ಮೈಸೂರು-ಬಾಗಲಕೋಟೆ ಮಧ್ಯೆ ಸಂಚರಿಸುವ ಬಸವ ಎಕ್ಸ್‌ಪ್ರೆಸ್ ರೈಲನ್ನು ಗದಗವರೆಗೆ ವಿಸ್ತರಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಮೈಸೂರು-ಬಾಗಲಕೋಟೆ ಮಧ್ಯೆ ಸಂಚರಿಸುವ ಬಸವ ಎಕ್ಸ್‌ಪ್ರೆಸ್ ರೈಲನ್ನು ಗದಗವರೆಗೆ ವಿಸ್ತರಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ.ಮೈಸೂರು ನಗರದಿಂದ ಬಾಗಲಕೋಟೆ ನಗರ ಮಧ್ಯೆ ಸಂಚರಿಸುವ ಬಸವ ಎಕ್ಸ್‌ಪ್ರೆಸ್ ರೈಲು ಮೈಸೂರಿನಿಂದ ಮಧ್ಯಾಹ್ನ 1.30ಕ್ಕೆ ಹೊರಟು, ಮರುದಿನ ಬೆಳಗ್ಗೆ 11.10ಕ್ಕೆ ಬಾಗಲಕೋಟೆಗೆ ಆಗಮಿಸಲಿದೆ. ಅದೇ ದಿನ ಮಧ್ಯಾಹ್ನ 2.30ಕ್ಕೆ ಬಾಗಲಕೋಟೆಯಿಂದ ಹೊರಡಲಿದೆ. ಸುಮಾರು ಗಂಟೆಗಳ ಕಾಲ ಬಾಗಲಕೋಟೆ ರೈಲು ನಿಲ್ದಾಣದಲ್ಲೇ ರೈಲನ್ನು ನಿಲ್ಲಿಸಲಾಗುತ್ತಿದೆ. ವಿಜಯಪುರದಿಂದ ಗದಗಕ್ಕೆ ಬೆಳಗ್ಗೆ 7.45ರಿಂದ ಮಧ್ಯಾಹ್ನ 2.40ರ ವರೆಗೆ ಯಾವುದೇ ರೈಲುಗಳಿಲ್ಲ.ಹೀಗಾಗಿ ಈ ರೈಲನ್ನು ಗದಗವರೆಗೆ ವಿಸ್ತರಿಸುವುದರಿಂದ ಈ ಭಾಗದ ಪ್ರಯಾಣಿಕರಿಗೆ, ರೈತರಿಗೆ ಈ ಮಾರ್ಗದಲ್ಲಿ ಸಂಚರಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ, ಸೊಲ್ಲಾಪುರ, ಅಕ್ಕಲಕೋಟ, ದುದನಿ, ಗಾಣಗಾಪುರ ಮತ್ತು ಕಲಬುರಗಿಗೆ ಪ್ರಯಾಣಿಸುವ ಪ್ರಯಾಣಿಕರಿಗೂ ಅನುಕೂಲದ ಜೊತೆಗೆ ಗದಗ ಮತ್ತು ಕಲಬುರಗಿ ನಡುವಿನ ಸಂಪರ್ಕವನ್ನು ಹೆಚ್ಚಿಸಲು ಸಹ ಸಹಾಯವಾಗುತ್ತದೆ.
ವಿಜಯಪುರ ಮತ್ತು ಕಲಬುರಗಿ ಪ್ರವಾಸೋದ್ಯಮ ಸಾಮರ್ಥ್ಯವನ್ನು ಅಗಾಧವಾಗಿ ಹೆಚ್ಚಿಸಿ, ಈ ಜಿಲ್ಲೆಗಳ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ. ನಿಮಗೆ ತಿಳಿದಿರುವಂತೆ, ಕರ್ನಾಟಕದ ಇತರೆ ಪ್ರದೇಶಗಳಿಗೆ ಹೋಲಿಸಿದರೆ, ನಮ್ಮ ಉತ್ತರ ಕರ್ನಾಟಕವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಹೆಚ್ಚಿನ ರೈಲು ಸಂಪರ್ಕವು ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಅಗಾಧವಾಗಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಬಹುಕಾಲದ ಬೇಡಿಕೆಯಾಗಿದ್ದು, ಬಸವ ಎಕ್ಸ್‌ಪ್ರೆಸ್ ರೈಲನ್ನು ಗದಗಕ್ಕೆ ವಿಸ್ತರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ.