ಸಾರಾಂಶ
ಭಟ್ಕಳ ತಾಲೂಕಿನಲ್ಲಿ ಮುಂಗಾರು ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಭಾರೀ ಮಳೆಗೆ ಅಪಾರ ಹಾನಿಯಾಗಿದೆ.
ಭಟ್ಕಳ: ತಾಲೂಕಿನಲ್ಲಿ ಮುಂಗಾರು ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಭಾರೀ ಮಳೆಗೆ ಅಪಾರ ಹಾನಿಯಾಗಿದ್ದು, ರಸ್ತೆ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳು, ಮನೆಗಳು ಕುಸಿದಿರುವ ಕುರಿತು ವರದಿಯಾಗಿದೆ.
ಕಳೆದ ಮೂರ‍್ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಗುರುವಾರ ಸ್ವಲ್ಪ ಬಿಡುವು ಕೊಟ್ಟಿದ್ದರೂ ಶುಕ್ರವಾರ ಬೆಳಿಗ್ಗೆಯಿಂದ ಮತ್ತೆ ಮಳೆಯ ಆರ್ಭಟ ಆರಂಭವಾಗಿದೆ. ಕಳೆದ ಮರ‍್ನಾಲ್ಕು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ಯಲ್ವಡಿಕವುರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಜು ಜನಾರ್ದನ ಆಚಾರಿ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದೆ. ಕೊಪ್ಪ ಗ್ರಾಮದ ಕೊಚ್ಚೋಡಿ ಮಜರೆಯ ರುಕ್ಮಿಣಿ ಆಲೂ ಮರಾಠಿ ಅವರ ಮಣ್ಣಿನ ಕಚ್ಚಾ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಕೊಪ್ಪ ಗ್ರಾಮದ ಕೊಚ್ಚೋಡಿ ಮಜರೆಯ ಕೃಷ್ಣ ರಾಮ ಮರಾಠಿ ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮೂಡಭಟ್ಕಳ ಗ್ರಾಮದ ಗೊಯ್ದ ಕೆ. ದೇವಾಡಿಗ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದ ಪರಿಣಾಮ ಹಾನಿಯಾಗಿದೆ ಎಂದು ವರದಿಯಾಗಿದೆ. ಮನೆ ಹಾನಿಯಾದ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಅಂದಾಜು ಮಾಡಿ ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದಾರೆ.