‘ದಡ್ಡ’ ವಿದ್ಯಾರ್ಥಿಗಳಿಗೆ ಬಾಹ್ಯ ನೋಂದಣಿ ಭಾಗ್ಯ!

| N/A | Published : Jul 11 2025, 11:48 PM IST / Updated: Jul 12 2025, 07:42 AM IST

SCHOOL STUDENTS

ಸಾರಾಂಶ

ಖಾಸಗಿ ಶಿಕ್ಷಣ ಸಂಸ್ಥೆಗಳು ದಡ್ಡ, ಫೇಲಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಬಾಹ್ಯ ವಿದ್ಯಾರ್ಥಿಯಾಗಿ ಎಸ್‌ಎಸ್‌ಎಲ್‌ಸಿಗೆ ನೋಂದಣಿ ಮಾಡಿಸುತ್ತಿರುವ ಮತ್ತಷ್ಟು ಪ್ರಕರಣಗಳು ಬಯಲಿಗೆ ಬರುತ್ತಿವೆ. ಇದನ್ನು ಶೇಕಡಾವಾರು ಫಲಿತಾಂಶದ ಲೆಕ್ಕಕ್ಕೆ ಪರಿಗಣಿಸದೆ ಇರುವುದರಿಂದ ಇಂತಹ ದಾರಿಯನ್ನು ಸಹ ಕಂಡುಕೊಂಡಿವೆ.  

ಸೋಮರಡ್ಡಿ ಅಳವಂಡಿ

 ಕೊಪ್ಪಳ :  ಖಾಸಗಿ ಶಿಕ್ಷಣ ಸಂಸ್ಥೆಗಳು ದಡ್ಡ, ಫೇಲಾಗುವ ವಿದ್ಯಾರ್ಥಿಗಳನ್ನು ಗುರುತಿಸಿ ಬಾಹ್ಯ ವಿದ್ಯಾರ್ಥಿಯಾಗಿ ಎಸ್‌ಎಸ್‌ಎಲ್‌ಸಿಗೆ ನೋಂದಣಿ ಮಾಡಿಸುತ್ತಿರುವ ಮತ್ತಷ್ಟು ಪ್ರಕರಣಗಳು ಬಯಲಿಗೆ ಬರುತ್ತಿವೆ. ಇದನ್ನು ಶೇಕಡಾವಾರು ಫಲಿತಾಂಶದ ಲೆಕ್ಕಕ್ಕೆ ಪರಿಗಣಿಸದೆ ಇರುವುದರಿಂದ ಇಂತಹ ದಾರಿಯನ್ನು ಸಹ ಕಂಡುಕೊಂಡಿವೆ. ವಿಶೇಷವೆಂದರೆ, ಇಂತಹ ಪ್ರಕರಣ ಸರ್ಕಾರಿ ಶಾಲೆಯಲ್ಲಿಯೂ ನಡೆಯುತ್ತಿರುವ ದೂರುಗಳು ಬಂದಿವೆ ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಹೇಳಿದ್ದಾರೆ.

‘ಕನ್ನಡಪ್ರಭ’ ದೊಂದಿಗೆ ಮಾತನಾಡಿದ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ, ಮೊರಾರ್ಜಿ ಶಾಲೆಯಲ್ಲಿಯೂ ಇಂಥ ಅಡ್ಡ ಹಾದಿಯ ಪ್ರಯತ್ನ ನಡೆಯುತ್ತಿದೆ. 100ಕ್ಕೆ 100ರಷ್ಟು ಫಲಿತಾಂಶಕ್ಕಾಗಿ ಇಂತಹ ತಂತ್ರ ಅನುಸರಿಸುತ್ತಿರುವ ಬಗ್ಗೆ ಪಾಲಕರು ಮೌಖಿಕವಾಗಿ ದೂರಿದ್ದಾರೆ. ಈ ಕುರಿತು ಪಾಲಕರು ಲಿಖಿತ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪತ್ತೆ ಹೇಗೆ?:

ಖಾಸಗಿ ಸಂಸ್ಥೆಗಳ ಕರಾಳ ಮುಖ ತೆರೆದಿಡಲು ಕಳೆದ ವರ್ಷ 9ನೇ ತರಗತಿಯಲ್ಲಿ ಎಷ್ಟು ಮಕ್ಕಳಿದ್ದರು, ಇದೀಗ 10ನೇ ತರಗತಿಯಲ್ಲಿ ಎಷ್ಟಿದ್ದಾರೆ ಎಂಬುದು ಅಥವಾ 10ನೇ ತರಗತಿಗೆ ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದಿರುವ ಮಕ್ಕಳ ಮಾಹಿತಿ ಲೆಕ್ಕ ಹಾಕಿದಾರೆ. ಖಾಸಗಿ ಶಾಲೆಯಿಂದ ಹೊರಹಾಕಲ್ಪಟ್ಟ ಮಕ್ಕಳ ಸಂಖ್ಯೆ ಸಿಗುತ್ತದೆ.

ವರದಿ ಕೇಳಿದ ಮಕ್ಕಳ ರಕ್ಷಣಾ ಆಯೋಗ

‘ಎಸ್‌ಎಸ್‌ಎಲ್‌ಸಿ 100% ರಿಸಲ್ಟ್‌ಗಾಗಿ ದಡ್ಡ ಮಕ್ಕಳಿಗೆ ಟಿಸಿ’ ಶೀರ್ಷಿಕೆಯಡಿ ‘ಕನ್ನಡಪ್ರಭ’ ಶುಕ್ರವಾರ ಪ್ರಕಟಿಸಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಈ ಕುರಿತು ಡಿಡಿಪಿಐಯಿಂದ ವರದಿ ಕೇಳಲಾಗುವುದು ಎಂದು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ತಿಳಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಇದು ಅಕ್ಷಮ್ಯ ಅಪರಾಧವಾಗಿದೆ. ಡಿಡಿಪಿಐಯಿಂದ ವಿವರಣೆ ಕೇಳಿ ಸಂಬಂಧಿಸಿದ ಶಾಲೆಗಳ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಪಾಲಕರು, ನಿಮ್ಮ ಮಗುವನ್ನು 9ನೇ ತರಗತಿ ಮುಗಿದ ತಕ್ಷಣ ಶಾಲೆಯಿಂದ ಹೊರಗೆ ಕಳುಹಿಸಿದ್ದರೇ ಆಯೋಗಕ್ಕೆ ದೂರು ನೀಡುವಂತೆ ಮನವಿ ಮಾಡಿದ್ದಾರೆ.

ಸರ್ಕಾರಿ ಶಾಲೆಗೆ 43 ವಿದ್ಯಾರ್ಥಿಗಳು

ಜಿಲ್ಲೆಯಲ್ಲಿ ಖಾಸಗಿ ಶಾಲೆಯಿಂದ ಹೊರಗೆ ಬಂದು ಸರ್ಕಾರಿ ಶಾಲೆಯ 10ನೇ ತರಗತಿಗೆ 43 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ ತಿಳಿಸಿದ್ದಾರೆ. ‘ಕನ್ನಡಪ್ರಭ’ ವರದಿಗೆ ಲಿಖಿತ ಪ್ರತಿಕ್ರಿಯೆ ನೀಡಿರುವ ಅವರು, ದಡ್ಡರು ಎನ್ನುವ ಕಾರಣಕ್ಕೆ ಖಾಸಗಿ ಶಾಲೆಗಳು ವಿದ್ಯಾರ್ಥಿಗಳನ್ನು ಹೊರ ಹಾಕಿಲ್ಲ. ವಿವಿಧ ಕಾರಣಗಳಿಂದ ಹೊರ ಬಂದು ತಮಗೆ ಅನುಕೂಲವಾಗಿರುವ ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದಿದ್ದಾರೆಂದು ತಿಳಿಸಿದ್ದಾರೆ.

Read more Articles on