ಸಾರಾಂಶ
ಕನ್ನಡ್ರಭ ವಾರ್ತೆ ಚಾಮರಾಜನಗರ
ಸಮಾನತೆ, ಸ್ವಾತಂತ್ರ್ಯ ಭ್ರಾತೃತ್ವ, ಜಾತ್ಯತೀತತೆ ಪರಿಕಲ್ಪನೆಯುಳ್ಳ ಸಂವಿಧಾನಕ್ಕೆ ಇಂದು ದೊಡ್ಡ ಗಂಡಾಂತರ ಎದುರಾಗಿದ್ದು, ಅದರ ಅಳಿವು, ಉಳಿವಿನ ಬಗ್ಗೆ ಭಾರತೀಯರು ಆಲೋಚನೆ ಮಾಡಬೇಕಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಹದೇವ ಶಂಕನಪುರ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಾಮರಾಜನಗರ ರಂಗತರಂಗ ಟ್ರಸ್ಟ್, ಗಾಂಧಿ ಅಧ್ಯಯನ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಭಾರತದ ಸಂವಿಧಾನ ಸಮರ್ಪಣಾ ದಿನಾಚರಣೆ- ೭೫ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ಭಾರತಕ್ಕೆ ಒಂದು ಸುಭದ್ರ ಸಂವಿಧಾನದ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ಅಂಬೇಡ್ಕರ್ ಸೇರಿದಂತೆ ೭ ಜನರ ಸಂವಿಧಾನದ ಕರಡು ರಚನಾ ಸಮಿತಿ ರಚಿಸಿ ಸದಸ್ಯರನ್ನು ನೇಮಕ ಮಾಡಲಾಗಿತ್ತು. ಅಂಬೇಡ್ಕರ್ ಅವರು ಸದಸ್ಯರ ಜತೆಗೆ ಅಧ್ಯಕ್ಷರಾಗಿಯೂ ನೇಮಕವಾದರು. ಸಂವಿಧಾನ ರಚನಾ ಸಮಿತಿ ಸದಸ್ಯರಾಗಿದ್ದವರು ಕೆಲವರು ತೀರಿಕೊಂಡರು, ಇನ್ನು ಕೆಲವರು ದೂರ ಉಳಿದರು. ಅಂತಿಮವಾಗಿ ಸಂವಿಧಾನ ರಚಿಸುವ ಕಾರ್ಯ ಅಂಬೇಡ್ಕರ್ ಅವರ ಹೆಗಲಿಗೆ ಬಿತ್ತು. ಸ್ವಲ್ಪವೂ ಎದೆಗುಂದದ ಅಂಬೇಡ್ಕರ್ ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ೨ ವರ್ಷ ೧೧ ತಿಂಗಳು, ೧೭ದಿನಗಳ ಅವಧಿಯಲ್ಲಿ ಪರಿಪೂರ್ಣ ಸಂವಿಧಾನ ಬರೆದು ೧೯೪೯ರ ನ.೨೬ ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರಿಗೆ ಸಮರ್ಪಿಸಿದರು.೧೯೫೦ ಜ.೨೬ರಂದು ಅಂಗೀಕಾರವಾಗಿ ಸಂವಿಧಾನ ಜಾರಿಗೆ ಬಂತು ಎಂದು ಮಾಹಿತಿ ನೀಡಿದರು.ಸಂತರ ಸಮಾವೇಶದಲ್ಲಿ ಪೇಜಾವರ ಶ್ರೀಗಳು ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನೊಂದೆಡೆ ರಾಜ್ಯಸಭೆ ಮಾಜಿ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಇತರೇ ರಾಜಕೀಯ ಪಕ್ಷದ ಮುಖಂಡರು ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಪದಗಳನ್ನು ತೆಗೆದುಹಾಕುವಂತೆ ಕೋರಿ, ನ್ಯಾಯಾಲಯದ ಮೊರೆ ಹೋಗಿದ್ದಾರೆ, ಇದು ಸಂವಿಧಾನದ ವಿರುದ್ಧದ ಷಡ್ಯಂತ್ರ, ಜತೆಗೆ ಇದು ಸಂವಿಧಾನಬಾಹಿರ ಹೇಳಿಕೆಯಾಗಿದೆ. ಈಗಲೇ ನಾವು ಸಂವಿಧಾನದ ಉಳಿವಿಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಪ್ರಧಾನ ಭಾಷಣ ನೆರವೇರಿಸಿದ ವಕೀಲರು, ಮೈಸೂರು ಪೀಪಲ್ ಲೀಗಲ್ ಪೋರಂ ನಿರ್ದೇಶಕ ಬಾಬುರಾಜ್ ಪಲ್ಲದನ್, ಸಂವಿಧಾನ ಎಂದರೆ ಅದು ಬರೀ ಗ್ರಂಥವಲ್ಲ, ಅದರ ರಚನೆ ಹಿಂದೆ ಹಲವರ ಕಠಿಣ ಶ್ರಮ, ತ್ಯಾಗ, ಬಲಿದಾನವಿದೆ. ಭ್ರಾತೃತ್ವ, ಸಮಾನತೆ, ಸ್ವಾತಂತ್ರ್ಯ ಆಕಾಶದಿಂದ ಉದುರಿಲ್ಲ. ಸಂವಿಧಾನ ಉಳಿಯಬೇಕಾದರೆ ಎಲ್ಲರಲ್ಲೂ ಹೋರಾಟದ ಮನೋಭಾವ ಬೆಳೆಯಬೇಕು ಎಂದು ಸಲಹೆ ನೀಡಿದರು.ಕನ್ನಡ ವಿಭಾಗದ ಮುಖ್ಯಸ್ಥ ಎ.ಎಂ.ಶಿವಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ರಂಗತರಂಗ ಟ್ರಸ್ಟ್ ಅಧ್ಯಕ್ಷ ಸೋಮಶೇಖರ್ ಬಿಸಲ್ವಾಡಿ, ಗಾಂಧಿ ಅಧ್ಯಯನ ಕೇಂದ್ರದ ಗೆಜೆಟೆಡ್ ಮ್ಯಾನೇಜರ್ ಪೂರ್ಣಿಮಾ, ಇತಿಹಾಸ ವಿಭಾಗದ ಮುಖ್ಯಸ್ಥ ನೀಲಕಂಠಸ್ವಾಮಿ, ಜನಹಿತಾಸಕ್ತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಸೇರಿದಂತೆ ಅಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.