ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ. ಬೈಲಾಂಜನಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2024- 25 ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲಿಕೆ ಎಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರದೆ ಮುಕ್ತ ವಾತಾವರಣದಲ್ಲಿಯೂ ಹಲವು ವಿಧಗಳಲ್ಲಿ ಸಾಧ್ಯವಿದ್ದು, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಬಹುದು, ರಂಗ ಕಲಾವಿದರಾಗಬಹುದು, ರಾಜಕೀಯ ನೇತಾರರೂ ಆಗಬಹುದು. ಈ ರೀತಿ ಏನಾದರೂ ಆಗಲು ಸಾಧ್ಯವಿದೆ ಎಂದರು.ಜಿಲ್ಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಸ್. ಉಷಾ ಕುಮಾರಿ ಮಾತನಾಡಿ, ಸರ್ಕಾರದಿಂದ ಬರುತ್ತಿರುವ ಅನುದಾನಗಳು ಕಡಿಮೆಯಾಗುತ್ತಿರುವ ಕಾರಣ ದಾನಿಗಳಿಂದ ಸಹಕಾರ ಪಡೆದು ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಈ ಕಾರ್ಯಕ್ರಮಗಳಿಂದ ಓದಿನೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಆಧಾರಿತ ಕಲಿಕೆಯು ಸಾಧ್ಯವಾಗಿದ್ದು, ಇದರಿಂದ ಗುಣಮಟ್ಟದ ಕಲಿಕೆ ಸಾಧ್ಯ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ಉಪಯೋಜನ ಸಮನ್ವಯಾಧಿಕಾರಿ ಕೆಂಪಯ್ಯ ಮಾತನಾಡಿ, ಮಕ್ಕಳಲ್ಲಿ ಏನೇನು ಕಲೆ ಇದೆ ಎಂಬುದನ್ನು ಈ ಪ್ರತಿಭಾ ಕಾರಂಜಿ ಕಲೋತ್ಸವಗಳಲ್ಲಿ ಹುಡುಕಿ ತೆಗೆಯಲು ಸಾಧ್ಯವಾಗುವುದರೊಂದಿಗೆ, ಅವರನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತೋರಿಸುವುದೇ ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ ಎಂದು ತಿಳಿಸಿದರು.‘ಒಂದು ವಿದ್ಯಾರ್ಥಿ- ಒಂದು ರಾಷ್ಟ್ರ’ ಎಂಬ ಕೇಂದ್ರ ಸರ್ಕಾರದ ಯೋಜನೆ ಅಡಿ 12 ಅಂಕಿಗಳ ಆಧಾರ್ ಸಂಯೋಜಿತ ಅಪಾರ್ ನೋಂದಣಿಯನ್ನು ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳ ಅಧಿಕಾರಿ ವರ್ಗದವರು ಮಕ್ಕಳ ಅಪಾರ ಐಡಿ ನೋಂದಣಿ ಮಾಡಿಸಬೇಕೆಂದು ತಿಳಿಸಿದರು.
ಆಶುಭಾಷಣ ಸ್ಪರ್ಧೆ, ಏಕ ಪಾತ್ರಾಭಿನಯ, ಛದ್ಮವೇಷ, ಭರತನಾಟ್ಯ, ಕವಾಲಿ, ಪ್ರಬಂಧ ಮತ್ತಿತರೆ ಸ್ಪರ್ಧೆಗಳಿಂದ 570ಕ್ಕೂ ಹೆಚ್ಚು ಮಕ್ಕಳು ನಾಲ್ಕು ತಾಲೂಕುಗಳಿಂದ ಭಾಗವಹಿಸಿದ್ದರು.ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹನಿಫುಲ್ಲಾ, ಪುರಸಭಾ ಸದಸ್ಯ ಎನ್. ನಾರಾಯಣಸ್ವಾಮಿ, ಉಪ ಪ್ರಾಂಶುಪಾಲರಾದ ವೆಂಕಟೇಶ್, ಶಾಲಾ ಅಭಿವೃದ್ಧಿ ಸಮಿತಿಯ ವೆಂಕಟೇಶ್, ಅಶ್ವತಪ್ಪ, ಸೈಫುಲ್ಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಸುಮಾ, ಶಿಕ್ಷಣ ಇಲಾಖೆಯ ರೇಖಾ, ಪದ್ಮ, ದಿನೇಶ್, ಕೋಮಲ, ಅನಂತ್, ಅಕ್ಷರ ದಾಸೋಹದ ಸುಧಾ, ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ರಾಜಶೇಖರ್, ನಾಗೇಶ್, ಆದರ್ಶ, ಪಿಎಂ ಕೊಟ್ರೇಶ್, ಕೆಎನ್ ನಾಗೇಶ್, ಮುನೇಗೌಡ, ನೀಲಕಂಠ ಗಾವ್ಕರ್, ರಾಮಾಂಜಿನಪ್ಪ, ರೂಪಾದೇವಿ, ಕೆ ವಿ ಬಸವರಾಜು, ರಾಜು ಅವಳೇಕರ್ ಸೇರಿದಂತೆ ಪೋಷಕರು ಇದ್ದರು.