ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯಜ್ಞಾನವನ್ನು ಬೆಳೆಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ಅವರಲ್ಲಿರುವ ಪ್ರತಿಭೆ, ಸೃಜನಶೀಲತೆ, ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸವನ್ನು ಹೊರತರುವಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ.
ಕನ್ನಡಪ್ರಭ ವಾರ್ತೆ ಮುಳಗುಂದ
ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯಜ್ಞಾನವನ್ನು ಬೆಳೆಸುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ಅವರಲ್ಲಿರುವ ಪ್ರತಿಭೆ, ಸೃಜನಶೀಲತೆ, ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸವನ್ನು ಹೊರತರುವಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಮಂಟೂರಿನ ಸರ್ಕಾರಿ ಸ್ವತಂತ್ರ ಪಪೂ ಕಾಲೇಜಿನ ಪ್ರಾಂಶುಪಾಲ ಮಹೇಶ ಕಡಗಿ ಹೇಳಿದರು.ಪಟ್ಟಣದ ಆರ್.ಎನ್. ದೇಶಪಾಂಡೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2026–27ನೇ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ರೂಪಿಸಿಕೊಳ್ಳುವ ಅತ್ಯಂತ ಮಹತ್ವದ ಹಂತವಾಗಿದೆ. ತರಗತಿಯ ನಾಲ್ಕು ಗೋಡೆಗಳೊಳಗೆ ದೊರೆಯುವ ಜ್ಞಾನದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯ, ಭಾಷಣ, ಚರ್ಚಾ ಸ್ಪರ್ಧೆಗಳು ಹಾಗೂ ಸಾಮಾಜಿಕ ಸೇವೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ್ಯ, ನಾಯಕತ್ವ, ಸಮಯಪ್ರಜ್ಞೆ, ತಂಡದ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತವೆ ಎಂದು ತಿಳಿಸಿದರು.ಕಾಲೇಜು ಕಟ್ಟಡದ ಭೂದಾನಿ ನಾಗರಾಜ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕದ ಒಡನಾಟವಿಟ್ಟುಕೊಳ್ಳಬೇಕು, ಪ್ರತಿನಿತ್ಯ ಗ್ರಂಥಾಲಯದಲ್ಲಿನ ಪುಸ್ತಕಗಳ ಓದಿನ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು.
ಪಪಂ ಮಾಜಿ ಸದಸ್ಯ ಕೆ.ಎಲ್. ಕರಿಗೌಡ್ರ ಮಾತನಾಡಿ, ನಮ್ಮ ಸುತ್ತಲಿನ ಸಾಧಕರ ಸಾಧನೆಗಳೆ ನಮಗೆ ಪ್ರೇರಣೆಯಾಗಬೇಕು. ಅವರ ಬದುಕಿನಿಂದ, ಅವರ ಸಾಧನೆಯಿಂದ ಪ್ರೇರಿತರಾದಲ್ಲಿ ನೀವು ಏನನ್ನಾದರೂ ಸಾಧಿಸಬಲ್ಲಿರಿ ಎಂದರು.ಉದ್ಯಮಿ ಅಶೋಕ ಸೋನಗೋಜಿ, ಪ್ರಾಂಶುಪಾಲ ಡಾ. ಆರ್.ಎಂ. ಕಲ್ಲನಗೌಡರ ಮಾತನಾಡಿದರು. ಕಾಲೇಜಿನ ಸಾಧಕ ವಿದ್ಯಾರ್ಥಿಗಳಾದ ನಾಜಿಯಾಬೇಗಂ ನದಾಫ್ ಹಾಗೂ ಸೌಮ್ಯ ಶಿರಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಬಿಎ ಮತ್ತು ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಆತ್ಮೀಯವಾಗಿ ಸ್ವಾಗತಿಸಿದರು.
ಕಾಲೇಜಿನ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶಿವಪ್ಪ ಎಸ್. ಮುದಿಯಜ್ಜನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಕಿತ್ತೂರ ನಿರೂಪಿಸಿದರು. ದಿವ್ಯ ಕಾಗಿ ಸಂಗಡಿಗರು ಪ್ರಾರ್ಥಿಸಿದರು. ರಾಧಿಕಾ ಕೊಲ್ಲಾರಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ಶಿವಲೀಲಾ ಬಳಿಗೇರ ಸ್ವಾಗತಿಸಿದರು. ಬಸವರಾಜ ಅಡರಕಟ್ಟಿ ಪರಿಚಯಿಸಿದರು. ನೀಲಾ ನರೇಗಲ್ ವಂದಿಸಿದರು.