ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಮಕ್ಕಳಲ್ಲಿ ಬಹುಮುಖ ಪ್ರತಿಭೆಯನ್ನು ವಿಕಾಸಗೊಳಿಸಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳ ಜ್ಞಾನ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ಶ್ರೀ ಕುರುಹಿನಶೆಟ್ಟಿ ಪೀಠದ ಜಗದ್ಗುರು ಶಿವಶಂಕರ ಶಿವಾಚಾರ್ಯ ಶ್ರೀಗಳು ಹೇಳಿದರು.ಪಟ್ಟಣದ ಪ್ರತಿಷ್ಠಿತ ಶ್ರೀಕುರುಹಿನಶೆಟ್ಟಿ ನೀಲಕಂಠೇಶ್ವರ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಮಕ್ಕಳ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳ ಸಂತೆಗಳನ್ನು ಆಯೋಜಿಸುವುದರಿಂದ ಬಾಲ್ಯದಲ್ಲಿಯೇ ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ ನೀಡಿದಂತಾಗುತ್ತದೆ. ಇದು ಅವರ ಮುಂದಿನ ಬದುಕಿಗೂ ಪ್ರೇರಣೆಯಾಗಲಿದೆ ಎಂದರು.
ಮಕ್ಕಳು ದುಶ್ಚಟಗಳ ದಾಸ್ಯರಾಗದೇ ಸದ್ಗುಣಗಳ ಉಪಾಸಕರಾಗಿ ನಿತ್ಯ ಜೀವನದ ಬದುಕಿಗೆ ಅಗತ್ಯವಾದ ಜ್ಞಾನಾಂಶಗಳನ್ನು ಈಗಿನಿಂದಲೇ ಸಂಗ್ರಹಿಸಿದಲ್ಲಿ ಭವಿಷ್ಯದಲ್ಲಿ ಸಂತೃಪ್ತ ಜೀವನ ಸಾಗಿಸಲು ಉಪಕಾರಿಯಾಗಲಿದೆ ಎಂದು ಹೇಳಿದರು.ಶಿಕ್ಷಣ ಸಂಯೋಜಕ ಶ್ರೀಶೈಲ ಬುರ್ಲಿ ಮಾತನಾಡಿ, ಶಿಕ್ಷಣದ ಪ್ರಸರಣದಲ್ಲಿ ಮಠ ಮಾನ್ಯಗಳ ಕೊಡುಗೆ ಅನನ್ಯವಾಗಿದೆ. ಈ ನಿಟ್ಟಿನಲ್ಲಿ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಶ್ರೀನೀಲಕಂಠೇಶ್ವರ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಭಾಗ್ಯಶಾಲಿಗಳೆಂದು ಬಣ್ಣಿಸಿದರು.
ಸಮಾರಂಭದ ಆಕರ್ಷಣೀಯವೆಂಬಂತೆ ಮಕ್ಕಳ ತರಕಾರಿ ಮಳಿಗೆಗಳು, ತಂಪು ಪಾನೀಯ, ಕಿರಾಣಾ ವಸ್ತು ಹಾಗೂ ಆಹಾರ ಮಳಿಗೆಗಳು ಪ್ರೇಕ್ಷಕರ ಮನಸೂರೆಗೊಂಡವು. ಶ್ರೀಗಳು ಕೂಡ ಸ್ವತಃ ತಾವೇ ಖರೀದಿಸುವುದರೊಂದಿಗೆ ಮಕ್ಕಳನ್ನು ಪ್ರೇರೇಪಿಸಿದರು.ಸಮಾರಂಭದಲ್ಲಿ ಇಸಿಒ ಬಿ.ಎಂ ಹಳೇಮನಿ, ಸಿಆರ್‌ಪಿ ಭರತೇಶ ಯಲ್ಲಟ್ಟಿ ಸಂಸ್ಥೆಯ ಪದಾಧಿಕಾರಿಗಳಾದ ಮಹಾದೇವ ಜಾಡರ, ಶಿವಾನಂದ ಬೆಳಕೂಡ, ಚೆನ್ನಪ್ಪ ಜೈನಾಪೂರ, ಸುಧೀರ ಮಿರ್ಜಿ, ಗಜಾನಂದ ಇಂಗಳಗಿ, ಪ್ರಭು ಬಾದರದಿನ್ನಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಾಲಕರು ಇದ್ದರು.