ಪೌರಕಾರ್ಮಿಕರಿಗೆ ಇನ್ಮುಂದೆ ಫೇಸ್‌ ಬಯೋಮೆಟ್ರಿಕ್‌ !

| Published : Jul 04 2025, 11:47 PM IST

ಸಾರಾಂಶ

ಸಿಬ್ಬಂದಿಯ ನಿಖರ ಹಾಜರಿ ದಾಖಲೆ, ಸಮಯಕ್ಕೆ ಸರಿಯಾದ ವೇತನ ಪಾವತಿ ಮತ್ತು ಆಡಳಿತಾತ್ಮಕ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಪಾಲಿಕೆಯಿಂದ ಈ ನೂತನ ವ್ಯವಸ್ಥೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಮೊದಲ ಫೇಸ್ ಬಯೋಮೆಟ್ರಿಕ್‌ ವ್ಯವಸ್ಥೆ ಹೊಂದಿದ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾಲಿಕೆ ಪಾತ್ರವಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಪೌರಕಾರ್ಮಿಕರ ಹಾಜರಾತಿ ಫೇಸ್‌ ಬಯೋಮೆಟ್ರಿಕ್‌ ವ್ಯವಸ್ಥೆ ತರುತ್ತಿದೆ. ಸದ್ಯ 2 ವಲಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, 15 ದಿನಗಳಲ್ಲಿ ಉಳಿದ ವಲಯಗಳಲ್ಲೂ ಆರಂಭವಾಗಲಿದೆ. ಫೇಸ್‌ ಬಯೋಮೆಟ್ರಿಕ್‌ ಹೊಂದಿರುವ ರಾಜ್ಯದ ಮೊದಲ ಮಹಾನಗರವಾದಂತಾಗಿದೆ.

ಪೌರ ಕಾರ್ಮಿಕರ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಗೂ ಮುಖ ಗುರುತಿನ (Face Attendance) ಹಾಜರಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 2500ಕ್ಕೂ ಹೆಚ್ಚು ಪೌರ ಕಾರ್ಮಿಕರು ಹಾಗೂ ಆಟೋ ಟಿಪ್ಪರ್ ಚಾಲಕರ ಕಾರ್ಯನಿರ್ವಹಣೆ ಸುಧಾರಿಸಲು ಮತ್ತು ನಗರ ಸ್ವಚ್ಛತೆಯಲ್ಲಿ ಉತ್ತಮ, ಪಾರದರ್ಶಕ ಸೇವೆ ಒದಗಿಸುವ ಉದ್ದೇಶದಿಂದ ಈ ನೂತನ ವ್ಯವಸ್ಥೆ ಈಗಾಗಲೇ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ವ್ಯವಸ್ಥೆಗೆ ಭಾರತ ಸರ್ಕಾರದ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಯಿಂದ ಅಧಿಕೃತ ಅನುಮತಿ ಪಡೆಯಲಾಗಿದೆ.

ಪ್ರಯೋಜನಗಳೇನು?: ಫೇಸ್‌ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸುವುದರಿಂದ ನಿಖರ ಹಾಜರಿ ದಾಖಲಾತಿ ಮೂಲಕ ತಡವಾಗಿ ಕೆಲಸಕ್ಕೆ ಬರುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಪೌರ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿಗೆ ಸಹಕಾರಿ, ಕಾಗದ ಆಧಾರಿತ ಹಾಜರಿ ಪದ್ಧತಿಯಿಂದ ಮುಕ್ತಿ, ಆಡಳಿತ ಸುಧಾರಣೆ. ಕನ್ನಡದಲ್ಲಿ ಧ್ವನಿ ಸೂಚನೆಗಳು ಸೇರಿದಂತೆ ಸುಲಭ ಬಳಕೆ, ಜಿಯೊ ಫೆನ್ಸಿಂಗ್ ಮೂಲಕ ಸ್ಥಳಾಧಾರಿತ ಹಾಜರಿ ದೃಢೀಕರಣದ ವ್ಯವಸ್ಥೆ ಈ ಮಷಿನ್‌ನಲ್ಲಿ ಅಳವಡಿಸಲಾಗಿದೆ.

ಈ ವ್ಯವಸ್ಥೆ ಜಾರಿಗೊಳಿಸಲು ಸ್ವಸ್ತಿ ಪ್ರೈವೇಟ್ ಲಿಮಿಟೆಡ್ ಎಂಬ ಸ್ಟಾರ್ಟಪ್ ಕಂಪನಿಗೆ ಪಾಲಿಕೆಯ ಐ.ಟಿ ವಿಭಾಗದಿಂದ ಟೆಂಡರ್ ಆಹ್ವಾನಿಸಿ ಕಾರ್ಯದೇಶ ನೀಡಿದೆ. ಆಯಾ ವಾರ್ಡ್‌ಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಸಂಪೂರ್ಣ ಮಾಹಿತಿಯನ್ನು ಈ ಮಷಿನ್‌ನಲ್ಲಿ ಅಳವಡಿಸಲಾಗುತ್ತಿದೆ.

90 ಮಷಿನ್‌ಗಳು: ಪಾಲಿಕೆಯ 12 ವಲಯ ವ್ಯಾಪ್ತಿಯಲ್ಲಿ 82 ವಾರ್ಡ್‌ಗಳನ್ನು ಹೊಂದಿದೆ. ಪ್ರತಿ ವಾರ್ಡ್‌ಗೆ ಒಂದು ಮಷಿನ್‌ ನೀಡಲಾಗುತ್ತಿದೆ. ಇನ್ನು ಮಾರುಕಟ್ಟೆ ಪ್ರದೇಶ ಹೊಂದಿರುವ, ಹೆಚ್ಚು ವ್ಯಾಪ್ತಿಯಿರುವ ವಾರ್ಡ್‌ಗಳಿಗೆ ಹೆಚ್ಚುವರಿ ಮತ್ತೊಂದು ಮಷಿನ್‌ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದು, ಒಟ್ಟು 90 ಮಷಿನ್‌ ತರಿಸಲಾಗುತ್ತಿದೆ. ಈಗಾಗಲೇ 30 ಮಷಿನ್‌ ತರಿಸಲಾಗಿದ್ದು, ಇನ್ನು 2-3 ದಿನಗಳಲ್ಲಿ ಇನ್ನುಳಿದ 60 ಮಷಿನ್‌ಗಳನ್ನು ತರಿಸಿ ವಾರ್ಡ್‌ವಾರು ಹಸ್ತಾಂತರಿಸಲಾಗುತ್ತಿದೆ.

2 ವಲಯಗಳಲ್ಲಿ ಆರಂಭ: ಜು.1ರಿಂದಲೇ ಈ ಫೇಸ್‌ ಬಯೋಮೆಟ್ರಿಕ್‌ ವ್ಯವಸ್ಥೆಯು 10 ಮತ್ತು 11ನೇ ವಲಯಗಳಲ್ಲಿ ಆರಂಭಿಸಲಾಗಿದೆ. 12ನೇ ವಲಯದಲ್ಲಿ ಗುರುವಾರದಿಂದ ಆರಂಭಸಲಾಗುತ್ತಿದೆ. ಇನ್ನುಳಿದ 9 ವಲಯಗಳಲ್ಲಿ 15 ದಿನಗಳೊಳಗೆ ಆರಂಭಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

3 ಬಾರಿ ಹಾಜರಾತಿ: ಪೌರಕಾರ್ಮಿಕರು ಕಡ್ಡಾಯವಾಗಿ ದಿನಕ್ಕೆ 3 ಬಾರಿ ಹಾಜರಾತಿ ನೀಡಬೇಕು. ಬೆಳಗ್ಗೆ 6 ಗಂಟೆಗೆ ಪೌರಕಾರ್ಮಿಕರು ತಾವು ಕೆಲಸ ಮಾಡುವ ಕಾರ್ಯವ್ಯಾಪ್ತಿಯಲ್ಲಿ ನಿಗದಿಗೊಳಿಸಲಾಗಿರುವ ಮಷಿನ್‌ ಬಳಿ ತೆರಳಿ ಫೇಸ್‌ ಬಯೋಮೆಟ್ರಿಕ್‌ ನೀಡಬೇಕು. ನಂತರ 10ಕ್ಕೆ ಹಾಗೂ ಮಧ್ಯಾಹ್ನ 2 ಗಂಟೆಗೆ ಹಾಜರಾತಿ ನೀಡಬೇಕು.

ರಾಜ್ಯದಲ್ಲಿ ಮೊದಲ ವ್ಯವಸ್ಥೆ: ಸಿಬ್ಬಂದಿಯ ನಿಖರ ಹಾಜರಿ ದಾಖಲೆ, ಸಮಯಕ್ಕೆ ಸರಿಯಾದ ವೇತನ ಪಾವತಿ ಮತ್ತು ಆಡಳಿತಾತ್ಮಕ ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ಪಾಲಿಕೆಯಿಂದ ಈ ನೂತನ ವ್ಯವಸ್ಥೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಮೊದಲ ಫೇಸ್ ಬಯೋಮೆಟ್ರಿಕ್‌ ವ್ಯವಸ್ಥೆ ಹೊಂದಿದ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾಲಿಕೆ ಪಾತ್ರವಾಗಿದೆ.

ಪೌರಕಾರ್ಮಿಕರು ಸಂತಸ: ಈ ವ್ಯವಸ್ಥೆ ಜಾರಿಯಿಂದಾಗಿ ಪೌರಕಾರ್ಮಿಕರು ಸಂತಸಗೊಂಡಿದ್ದಾರೆ. ಈ ಮಷಿನ್‌ ಅಳವಡಿಕೆಯಾದರೆ ನಕಲಿ ಕಾರ್ಮಿಕರ ಮಾಹಿತಿ ದೊರೆಯಲಿದೆ. ಪೌರಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಲು ಸಹಕಾರಿಯಾಗಲಿದೆ. ನಿರ್ದಿಷ್ಟಗೊಳಿಸಿರುವ ವಾರ್ಡ್‌ಗಳಲ್ಲಿ ಪೌರಕಾರ್ಮಿಕರು ಕಡ್ಡಾಯವಾಗಿ ಕೆಲಸ ಮಾಡಲು ಅನಕೂಲವಾಗಲಿದೆ ಎಂದು ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ತಿಳಿಸಿದರು.

ಪೌರಕಾರ್ಮಿಕರ ಕಾರ್ಯಕ್ಷಮತೆ ಹೆಚ್ಚಿಸಲು, ಪಾಲಿಕೆ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕ ತರಲು ಈ ನೂತನ ಫೇಸ್‌ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿರುವ ಯಾವ ಪಾಲಿಕೆಗಳಲ್ಲೂ ಈ ವ್ಯವಸ್ಥೆ ಇಲ್ಲ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಈ ವ್ಯವಸ್ಥೆ ಜಾರಿಗೊಳಿಸಿದ ಕೀರ್ತಿ ಹು-ಧಾ ಮಹಾನಗರ ಪಾಲಿಕೆಗೆ ಸಲ್ಲುತ್ತದೆ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಹೇಳಿದರು.