ಜೂ.1 ರಿಂದ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಎಐ ಆಧರಿತ ಫೇಸ್ ಲೊಕೇಶನ್, ಹಾಜರಾತಿ ಸಂಸ್ಥೆ ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಫೇಸ್ ಲೊಕೇಶನ್ ಹಾಜರಾತಿ ಆದೇಶ ಗಣಿಜಿಲ್ಲೆ ಬಳ್ಳಾರಿಯಲ್ಲಿ ಯಶಸ್ವಿಯಾಗಿದ್ದು, ಸಮಯವಾಗುತ್ತಿದ್ದಂತೆಯೇ ಶಿಕ್ಷಕರು ಶಾಲೆಯತ್ತ ತರಾತುರಿಯಲ್ಲಿ ಓಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಜೂ.1ರಿಂದ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ಎಐ ಆಧರಿತ ಫೇಸ್ ಲೊಕೇಶನ್‌ ಹಾಜರಾತಿ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಕಡ್ಡಾಯಗೊಳಿಸಿದೆ. ಇಲಾಖೆಯ ಆದೇಶದನ್ವಯ ನಿಗದಿತ ಸಮಯ ಮೀರಿ ಶಾಲೆಗೆ ಬರುವ ಶಿಕ್ಷಕ ಸಿಬ್ಬಂದಿಗೆ ಆಕಸ್ಮಿಕ ರಜೆ ಎಂದು ಪರಿಗಣಿಸುತ್ತಿರುವುದರಿಂದ ಶಿಕ್ಷಕರು ತಡ ಮಾಡದೆ ಶಾಲೆಯತ್ತ ತರಾತುರಿಯ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತಿದೆ.

ನೂತನ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಿದ ಬಳಿಕ ಶೇ.95 ಸಿಬ್ಬಂದಿ ಶಾಲೆಗೆ ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನು ಕೆಲವೆಡೆ ತಾಂತ್ರಿಕ ಸಮಸ್ಯೆಗಳಿದ್ದು, ಕ್ರಮೇಣವಾಗಿ ಸರಿಪಡಿಸಲಾಗುತ್ತಿದೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.ಲೊಕೇಶನ್ ಹಾಜರಾತಿ ಕಡ್ಡಾಯ ಯಾಕಾಯ್ತು?:

ಸರ್ಕಾರಿ ಶಾಲೆ ಶಿಕ್ಷಕರ ಪೈಕಿ ಶೇ.15ರಷ್ಟು ಜನರು ಸರಿಯಾದ ಸಮಯಕ್ಕೆ ಹಾಜರಾಗುತ್ತಿರಲಿಲ್ಲ. ಈ ಪೈಕಿ ಶೇ.5ರಷ್ಟು ಮಂದಿ ಶಾಲೆಯ ಮುಖ ನೋಡುವುದೇ ಅಪರೂಪ ಎನ್ನುವಂತಾಗಿತ್ತು. ಶಿಕ್ಷಕರ ಸಂಘಟನೆ ಕೆಲಸ ನೆಪದಲ್ಲಿ ಹೊರಗಡೆ ಇರುತ್ತಿದ್ದರು. ಇನ್ನು ಶಾಲೆಗೆ ಹಾಜರಾಗುವ ಶಿಕ್ಷಕರು ಸಹ ತಡವಾಗಿ ಶಾಲೆಗೆ ಬರುವುದನ್ನು ರೂಢಿ ಮಾಡಿಕೊಂಡಿದ್ದರು. ಇನ್ನು ಮುಖ್ಯ ಶಿಕ್ಷಕರನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಡಿಡಿಪಿಐ ಕಚೇರಿ ಕೆಲಸ, ಬಿಇಒ ಕಚೇರಿ ಕೆಲಸ ಎಂದು ಹೇಳಿಕೊಂಡು ಶಾಲೆಯಿಂದ ಹೊರಗಡೆಯೇ ಹೆಚ್ಚಾಗಿ ಕಾಲ ಕಳೆಯುತ್ತಾರೆ ಎಂಬ ಆರೋಪಗಳಿದ್ದವು. ಲೋಕೇಶನ್ ಹಾಜರಾತಿ ಕಡ್ಡಾಯಗೊಳಿಸಿದ ಬಳಿಕ ಮುಖ್ಯಶಿಕ್ಷಕರು ಸೇರಿದಂತೆ ಶಾಲಾ ಸಿಬ್ಬಂದಿ ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗಿ ವಿದ್ಯಾರ್ಥಿಗಳಿಗೆ ನಿತ್ಯ ದರ್ಶನ ನೀಡುತ್ತಿದ್ದಾರೆ.

ಕೆಲವರಿಗೆ ನುಂಗದ ತುತ್ತಾದ ಆದೇಶ:

ರಾಜ್ಯ ಶಿಕ್ಷಣ ಇಲಾಖೆ ಜಾರಿಗೊಳಿಸಿದ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರಿಗೆ ಫೇಸ್ ಲೊಕೇಶನ್ ಹಾಜರಾತಿ ಆದೇಶದಿಂದ ಪೋಷಕರಿಗೆ ಸಂತಸವಾಗಿದ್ದರೆ ನಿರ್ದಿಷ್ಟ ಸಮಯಕ್ಕೆ ಶಾಲೆಗೆ ಬರದೆ, ರಾಜಕೀಯ ಮಾಡಿಕೊಂಡು ಓಡಾಡುವ, ಮುಖ್ಯ ಶಿಕ್ಷಕರ ಜೊತೆ ಹೊಂದಾಣಿಕೆ ಮಾಡಿಕೊಂಡು ತಡವಾಗಿ ಶಾಲೆಗೆ ತೆರಳುವ ಬೋಧಕರು ಹಾಗೂ ಕ್ಲರ್ಕ್ ಮತ್ತಿತರ ಸಿಬ್ಬಂದಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ನಿತ್ಯ ನಿಗದಿತ ಸಮಯದೊಳಗೆ ಶಾಲೆಗೆ ಆಗಮಿಸಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಶಿಕ್ಷಕರಂತೂ ಸರ್ಕಾರದ ಆದೇಶದಿಂದ ಸಂತಸಗೊಂಡಿದ್ದಾರೆ. ಶಾಲೆಗೆ ಕೆಲಸಕ್ಕೆ ಕಚೇರಿಗೆ ಹೋಗುವ ಮುಖ್ಯ ಶಿಕ್ಷಕರು ಒಒಡಿ (ಅನ್ಯತಾ ಕಾರ್ಯ) ಎಂದು ಕಡ್ಡಾಯವಾಗಿ ನಮೂದಿಸುತ್ತಿದ್ದಾರೆ.

ಫೇಸ್‌, ಲೊಕೇಶನ್ ಆಧಾರಿತ ಹಾಜರಾತಿ ಕುರಿತಂತೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ.ಎಂ. ತಿಪ್ಪೇಸ್ವಾಮಿ, ಸರ್ಕಾರದ ಆದೇಶ ಎಲ್ಲ ಕಡೆ ಜಾರಿಯಾಗಿದೆ. ಕೆಲವೆಡೆ ತಾಂತ್ರಿಕ ಕಾರಣದಿಂದ ಸಮಸ್ಯೆಯಾಗಿರಬಹುದು. ಅದನ್ನು ನಿವಾರಿಸುವ ಕೆಲಸವೂ ನಡೆದಿದೆ ಎಂದು ತಿಳಿಸಿದರು.

ಮಕ್ಕಳ ಫೇಸ್‌ ಹಾಜರಾತಿ ಪ್ರಕ್ರಿಯೆಗೆ ಚಾಲನೆ:

ಶಿಕ್ಷಕರ ಫೇಸ್‌-ಲೊಕೇಶನ್ ಹಾಜರಾತಿ ಅನುಷ್ಠಾನ ಬೆನ್ನಲ್ಲೇ ಮಕ್ಕಳ ಫೇಸ್ ಹಾಜರಾತಿ ಕಾರ್ಯಕ್ಕೂ ಶಿಕ್ಷಣ ಇಲಾಖೆ ಚಾಲನೆ ನೀಡಿದೆ. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಶುರುಗೊಳಿಸಲಾಗಿದ್ದು ಜುಲೈ 1 ರಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಫೇಸ್ ರಿಕಗ್ನಿಷನ್ ಹಾಜರಾತಿ ವ್ಯವಸ್ಥೆ ಅಧಿಕೃತವಾಗಿ ಜಾರಿಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಖಚಿತಪಡಿಸಿದ್ದಾರೆ. ಇದರಿಂದ ಮೊಟ್ಟೆ, ಹಾಲು, ಬಿಸಿಯೂಟ ಯೋಜನೆಗೆ ವಿದ್ಯಾರ್ಥಿಗಳ ಸಂಖ್ಯೆಯ ಕಳ್ಳಲೆಕ್ಕ ತೋರಿಸುತ್ತಿದ್ದ ಕೆಲವು ಮುಖ್ಯಶಿಕ್ಷಕರ "ಕಾರ್ಯ " ವೈಖರಿಗೆ ಕಡಿವಾಣ ಬೀಳಲಿದೆ.

ಬಳ್ಳಾರಿ ಜಿಲ್ಲೆಯ 720 ಸರ್ಕಾರಿ ಶಾಲೆಗಳಲ್ಲಿ 3271 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.