ಪ್ರತಿ ದಿನ ನಿಯಮಿತ ಓದು, ಹಳೆಯ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಮತ್ತು ಶಿಕ್ಷಕರ ಸಲಹೆ ಅನುಸರಿಸುವುದು ಅತ್ಯಂತ ಮುಖ್ಯ. ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ತರುವ ಗುರಿ ಹೊಂದಿದ್ದು, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು.
ನವಲಗುಂದ:
ಸ್ಥಳೀಯ ಮಾಡೆಲ್ ಹೈಸ್ಕೂಲ್‌ಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಬುಧವಾರ ಭೇಟಿ ನೀಡಿ ವಿದ್ಯಾರ್ಥಿಗಳ ಓದು, ಅಭ್ಯಾಸದ ಕುರಿತು ಪರಿಶೀಲಿಸಿದರು.ಕೊಠಡಿಗೆ ಭೇಟಿ ನೀಡಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರೀಕ್ಷೆಗೆ ಉತ್ತಮವಾಗಿ ಸಿದ್ಧರಾಗುವಂತೆ ಮಾರ್ಗದರ್ಶನ ನೀಡಿದರು.
ಪ್ರತಿ ದಿನ ನಿಯಮಿತ ಓದು, ಹಳೆಯ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಮತ್ತು ಶಿಕ್ಷಕರ ಸಲಹೆ ಅನುಸರಿಸುವುದು ಅತ್ಯಂತ ಮುಖ್ಯ. ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ತರುವ ಗುರಿ ಹೊಂದಿದ್ದು, ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಉತ್ತೇಜನ ನೀಡಿದರು.ಇದಕ್ಕೂ ಮೊದಲು ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ, ಗ್ರಾಮಮಟ್ಟದಿಂದ ಹಿಡಿದು ಜಿಲ್ಲಾಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿ, ನೌಕರರು ಕ್ಷೇತ್ರ ಭೇಟಿ ಹೊರತುಪಡಿಸಿ, ಕಚೇರಿ ಸಮಯದಲ್ಲಿ ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯರಿದ್ದು, ಅವರ ಅಹವಾಲುಗಳಿಗೆ ಸ್ಪಂದಿಸಬೇಕು ಎಂದು ನಿರ್ದೇಶಿಸಿದರು.
ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಹಂತದಲ್ಲಿ ಸಾರ್ವಜನಿಕರ ದೂರು, ಮನವಿ ಆಲಿಸಿ, ಸೂಕ್ತ ಪರಿಹಾರ ನೀಡಬೇಕು. ಅಗತ್ಯವಿದ್ದಲ್ಲಿ ಮಾತ್ರ ಮುಂದಿನ ಕಚೇರಿಗೆ ರವಾನಿಸಬೇಕು. ಅನಗತ್ಯವಾಗಿ ಸಾರ್ವಜನಿಕರಿಗೆ ಕಿರಿಕಿರಿ ಆಗದಂತೆ ಸಂವೇದನಾಶೀಲರಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರುತಹಸೀಲ್ದಾರ್ ಸುಧೀರ ಸಾವುಕಾರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ಮುಖ್ಯಶಿಕ್ಷಕ ಜೆ.ಎಂ. ಮಾಕಣ್ಣವರ, ಶಿಕ್ಷಕ ಆರ್.ಎಸ್. ಪಾಟೀಲ, ತಾಪಂ ಇಒ ಪಿ.ಆರ್. ಬಡೆಖಾನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಹಿರೇಗೌಡರ, ಉಪತಹಸೀಲ್ದಾರ್ ಎಂ.ಎಚ್. ಸದರಬಾಯಿ, ಕಂದಾಯ ನಿರೀಕ್ಷಕ ಕುಮಾರಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.