ಸಾರಾಂಶ
ಸಾಧಕರು ಎನಿಸಿಕೊಂಡವರು ಅಶಿಸ್ತು ತೋರಿದ ಉದಾಹರಣೆಗಳಿಲ್ಲ ಎಂದು ಸಂಪನ್ಮೂಲ ವ್ಯಕ್ತಿ ರಂಗನಾಥ ವಾಲ್ಮೀಕಿ ಹೇಳಿದರು.
ಹುಬ್ಬಳ್ಳಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವ ಮೂಲಕ ಗುರಿ ತಲುಪಬೇಕು ಎಂದು ಮನಗುಂಡಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಸಂಪನ್ಮೂಲ ವ್ಯಕ್ತಿ ರಂಗನಾಥ ವಾಲ್ಮೀಕಿ ಹೇಳಿದರು.
ವಿದ್ಯಾರ್ಥಿ ಜೀವನದ ಕಲಿಕಾ ಹಂತದಲ್ಲಿ ಪರೀಕ್ಷೆ ಎದುರಿಸುವುದು ಅನಿವಾರ್ಯ. ಪರೀಕ್ಷೆಗಳು ಕಲಿಕೆಯ ಭಾಗ ಹಾಗೂ ಕಲಿಕೆಯ ಪರೀಕ್ಷಿಸುವ ಕ್ರಮ. ಈಗಾಗಲೇ ತಾವು ಎಸ್ಸೆಸ್ಲೆಲ್ಸಿಗೆ ಸೂಕ್ತ ತಯಾರಿ ಮಾಡಿಕೊಂಡಿದ್ದು ಭಯದ ಪ್ರಶ್ನೆಯೇ ಇಲ್ಲ. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಮಾರ್ಗದರ್ಶನ ಮಾಡಿದರು.ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ಅತಿಯಾದ ನಿರೀಕ್ಷೆ, ಸೂಕ್ತ ತಯಾರಿ ಮಾಡಿಕೊಳ್ಳದೇ ಇರುವುದು, ಅಂದಿನ ಕಲಿಕೆಯನ್ನು ಅಂದೇ ಮುಗಿಸದೇ ಇರುವುದು, ಸುಖಾಸುಮ್ಮನೆ ಒತ್ತಡ ತೆಗೆದುಕೊಳ್ಳುವುದು, ನಕಾರಾತ್ಮಕ ವಿಚಾರಗಳು, ಸಮಯ ಪಾಲನೆ ಮಾಡದೇ ಇರುವ ಅಂತಹ ತಪ್ಪುಗಳನ್ನು ಮಾಡದೇ ಓದಿದ್ದನ್ನು ಅರ್ಥ ಮಾಡಿಕೊಳ್ಳುವುದು, ಬರೆಯುವುದು, ಮುಖ್ಯಾಂಶಗಳ ಪಟ್ಟಿ ಮಾಡಿಕೊಳ್ಳುವುದು ಹಾಗೂ ವಾರ್ಷಿಕ ಪರೀಕ್ಷೆ ಸಹ ಒಂದು ಪರೀಕ್ಷೆ ಎಂದು ಸಮಾಧಾನ ಚಿತ್ತದಿಂದ ಎದುರಿಸಿ ಉತ್ತಮ ಫಲಿತಾಂಶ ಸಾಧಿಸಬೇಕು ಎಂದು ಕೆಲವು ಕಿರು ಕಥೆಗಳ ಮೂಲಕ ರಂಗನಾಥ ಅವರು ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿದರು.
ಸಾಧಕರು ಎನಿಸಿಕೊಂಡವರು ಅಶಿಸ್ತು ತೋರಿದ ಉದಾಹರಣೆಗಳಿಲ್ಲ. ಹೀಗಾಗಿ, ಸಾಧನೆ ಮಾಡಲು ಶಿಸ್ತು, ಸಮಯ ಪಾಲನೆ, ಮನಸ್ಸು ನಿಗ್ರಹ, ಸಜ್ಜನರ ಒಡನಾಟ, ಧನಾತ್ಮಕ ಚಿಂತನೆ, ಪಠ್ಯೇತರ ಚಟುವಟಿಕೆ ಹಾಗೂ ಪುಸ್ತಕಗಳ ಓದು ಹೀಗೆ ಅನೇಕ ಅಂಶಗಳನ್ನು ನೆನಪಿನಲ್ಲಿಟ್ಟುಕೊಂಡದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.