ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಗೆಲುವು ನಿಮ್ಮದೇ-ಡಾ. ಆನಂದ ಪಾಂಡುರಂಗಿ

| Published : Jan 22 2024, 02:18 AM IST

ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಗೆಲುವು ನಿಮ್ಮದೇ-ಡಾ. ಆನಂದ ಪಾಂಡುರಂಗಿ
Share this Article
  • FB
  • TW
  • Linkdin
  • Email

ಸಾರಾಂಶ

ಗೆಲುವು ಅಂತಿಮವಲ್ಲ, ಸೋಲು ಶಾಶ್ವತವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ನಿರಂತರ ಓದಿನ ಮೂಲಕ ಸಾಧನೆ ಮಾಡಬೇಕು. ಪ್ರತಿಯೊಬ್ಬರಲ್ಲಿಯೂ ಅಗಾಧ ಪ್ರತಿಭೆ ಇದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಬೇಕು, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಗೆಲುವು ನಿಮ್ಮದೇ.

ಗದಗ: ಗೆಲುವು ಅಂತಿಮವಲ್ಲ, ಸೋಲು ಶಾಶ್ವತವಲ್ಲ, ಪ್ರತಿಯೊಬ್ಬ ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ನಿರಂತರ ಓದಿನ ಮೂಲಕ ಸಾಧನೆ ಮಾಡಬೇಕು. ಪ್ರತಿಯೊಬ್ಬರಲ್ಲಿಯೂ ಅಗಾಧ ಪ್ರತಿಭೆ ಇದೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸಬೇಕು, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಗೆಲುವು ನಿಮ್ಮದೇ....

ಧಾರವಾಡದ ಖ್ಯಾತ ಮನೋರೋಗ ತಜ್ಞ ಡಾ. ಆನಂದ ಪಾಂಡುರಂಗಿ ಪರೀಕ್ಷೆಗೆ ಸನ್ನದ್ಧರಾಗಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹೇಳಿದ ಕಿವಿಮಾತಿದು.

ಭಾನುವಾರ ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್, ಜಗದ್ಗುರು ತೋಂಟದಾರ್ಯ ವಿದ್ಯಾಪೀಠ, ಹಿರೇಮಲ್ಲೂರ ಈಶ್ವರನ್ ಪಿಯು ಕಾಲೇಜ್‌ ಧಾರವಾಡ, ತೋಂಟದ ಸಿದ್ದೇಶ್ವರ ಪಿಯು ಕಾಲೇಜು ಹಾಗೂ ಜೆ.ಟಿ.ಪಿಯು ಕಾಲೇಜು ಗಜೇಂದ್ರಗಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತೋಂಟದಾರ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ''''ಪರೀಕ್ಷಾ ಸಂಭ್ರಮ'''' ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರದಲ್ಲಿ ಮಾತನಾಡಿದರು.ಜೀವನದಲ್ಲಿ ಫೇಲ್ ಆಗಬೇಡಿ: ಎಸ್ಸೆಸ್ಸೆಲ್ಸಿ,‌ ಪಿಯುಸಿ ಹೀಗೆ ಜೀವನದುದ್ದಕ್ಕೂ ಹಲವಾರು ಪರೀಕ್ಷೆಗಳು ಬಂದೇ ಬರುತ್ತವೆ. ಅವುಗಳನ್ನು ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿ, ಸಾಮಾನ್ಯ ಪರೀಕ್ಷೆಗಳಲ್ಲಿ ಫೇಲ್ ಆದರೂ ಪರವಾಗಿಲ್ಲ, ಜೀವನದ ಪರೀಕ್ಷೆಯಲ್ಲಿ ಫೇಲ್ ಆಗಬೇಡಿ, ಅನಾಹುತಕ್ಕೆ ಅವಕಾಶವನ್ನು ನೀಡಬೇಡಿ ಎಂದು ಕಿವಿಮಾತು ಹೇಳಿದರು.ವಿದ್ಯಾರ್ಥಿಗಳಾದವರು ಪರೀಕ್ಷೆಗಳ ಬಗ್ಗೆ ಯಾವಾಗಲೂ ಅತಿಯಾಗಿ ಚಿಂತಿಸಬಾರದು, ಕಠಿಣ ಪರಿಶ್ರಮ ಮತ್ತು ನಿರಂತರ ಓದನ್ನು ರೂಢಿಸಿಕೊಳ್ಳಬೇಕು ಮತ್ತು ಆಗಾಗ್ಗೆ ನಿಮ್ಮನ್ನು ನೀವು ಪರೀಕ್ಷೆ ಒಳಪಡಿಸಿಕೊಳ್ಳುವ ಮೂಲಕ ನಿಮ್ಮ ಓದಿನ ಮತ್ತು ಅಧ್ಯಯನಶೀಲತೆಯ ಬಗ್ಗೆ ಮೌಲ್ಯಮಾಪನ ಮಾಡಿಕೊಳ್ಳಬೇಕು. ಇದರಿಂದಾಗಿ ಸಹಜವಾಗಿ ವಿಶ್ವಾರ್ಹತೆ ಒಡಮೂಡುತ್ತದೆ ಎಂದರು.ಪಾಜಿಟಿವ್ ಗೆಳೆಯರ ಟೀಂ ಕಟ್ಟಿ: ಇದರಿಂದಾಗಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಆತ್ಮವಿಶ್ವಾಸ ಮೂಡುತ್ತದೆ. ಅದು ಮುಂದೆ ಸಮರ್ಥವಾಗಿ ಪರೀಕ್ಷೆಗಳನ್ನು ಎದುರಿಸಲು ಮನೋಧೈರ್ಯ ಮೂಡುತ್ತದೆ. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ನಿಮ್ಮ ಗೆಳೆಯರಲ್ಲಿಯೇ ಪಾಜಿಟಿವ್ ಆಗಿ ಚಿಂತಿಸುವ ಗೆಳೆಯರ ಟೀಂ ಕಟ್ಟಿ ಅದರಲ್ಲಿಯೇ ಹೆಚ್ಚು ಹೊತ್ತು ಕಳೆಯಿರಿ, ಪ್ರತಿಯೊಂದು ವಿಷಯದಲ್ಲಿಯೂ ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸಲೇ ಬೇಡಿ ಎಂದರು.ಮಕ್ಕಳಲ್ಲಿ ನಕಾರಾತ್ಮಕತೆ ಬೆಳೆಯುತ್ತಿದೆ ಎನ್ನುವುದು ಎಲ್ಲರಿಗೂ ಮೊದಲು ಗೊತ್ತಾಗುವುದು ಪಾಲಕರಿಗೆ. ಪಾಲಕರು ಮನೆಗಳಲ್ಲಿ ಹೆಚ್ಚೆಚ್ಚು ಜಾಗೃತವಾಗಿರಬೇಕು. ಮುಖ್ಯವಾಗಿ ಮಕ್ಕಳು ಟಿವಿ, ಗ್ಯಾಜೆಟ್ ಗಳಿಂದ ಅವರನ್ನು ಸಾಧ್ಯವಿಷ್ಟು ದೂರವಿಡಬೇಕು. ಅವುಗಳು ಅವಶ್ಯ ಎನಿಸಿದಲ್ಲಿ ಎಷ್ಟು ಬೇಕೋ ಅಷ್ಟೇ ಬಳಸಿರಿ. ಮುಖ್ಯವಾಗಿ ಟೈಂ ಮ್ಯಾನೇಜ್ ಮೆಂಟ್ ಗೆ ಹೆಚ್ಚಿನ ಒತ್ತನ್ನು ಕೊಡಿ. ಆಮೇಲೆ ಓದಿದರಾಯಿತು. ನಂತರ ನೋಡುತ್ತೇನೆ, ನಾಳೆಗೆ ಮಾಡುತ್ತೇನೆ ಎಂದು ಓದುವ ಕಾರ್ಯವನ್ನು ಮುಂದಕ್ಕೆ ಹಾಕುತ್ತಾ ಹೋದಂತೆ ಪರೀಕ್ಷಾ ದಿನಗಳ ಹತ್ತಿರ ಬಂದಾಗ ಸಹಜವಾಗಿಯೇ ಒತ್ತಡಕ್ಕೆ ಒಳಗಾಗುತ್ತೀರಿ ಎಂದು ಕಿವಿಮಾತು ಹೇಳಿದರು.ನೀವು ಒತ್ತಡಕ್ಕೆ ಒಳಗಾದಂತೆ ಇರುವುದು ನಿಮ್ಮ ಕೈಯಲ್ಲೇ ಇದೆ. ಅದನ್ನು ರೂಢಿಸಿಕೊಳ್ಳಬೇಕು ಅಷ್ಟೇ. ನನ್ನಲ್ಲಿ ಸಾಮರ್ಥ್ಯವಿದೆ, ಸಮಾಧಾನವಿದೆ ಎಂದು ಪರೀಕ್ಷೆ ಎದುರಿಸಿ. ಅಂಕಗಳಿಗೆ ಸೀಮಿತವಾಗಬೇಡಿ, ನೀವೆಲ್ಲರೂ ನಮ್ಮ ದೇಶದ ಭವಿಷ್ಯವಾಗಿದ್ದೀರಿ, ನಿಮ್ಮ ಶ್ರಮದ ಮೂಲಕ ದೇಶದ ಭವಿಷ್ಯ ಬದಲಿಸಿ ಎಂದ ಅವರು ಸುಧೀರ್ಘವಾಗಿ 2 ಗಂಟೆಗೂ ಹೆಚ್ಚು ಕಾಲ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿ, ಸಮಾಧಾನ ಪಡಿಸಿದರು.

ಅಕ್ಷರ ಜ್ಞಾನವೇ ದೊಡ್ಡ ಆಸ್ತಿ: ಅತಿಥಿಗಳಾಗಿ ಪಾಲ್ಗೊಂಡಿದ್ದ ಧಾರವಾಡದ ಹಿರೇಮಲ್ಲೂರ ಪಿಯು ಸೈನ್ಸ್ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ, ವಿದ್ಯಾರ್ಥಿಗಳು ಮುತ್ತು ರತ್ನಗಳಾಗಬೇಕು ಎನ್ನುತ್ತಾರೆ. ಮುತ್ತು ರತ್ನಗಳಾದರೆ ಅವುಗಳನ್ನು ಭದ್ರವಾಗಿಟ್ಟು ಕೀಲಿ ಹಾಕುತ್ತಾರೆ. ನೀವೆಲ್ಲಾ ದೇಶಕ್ಕೆ ಆಸ್ತಿಯಾಗಬಲ್ಲ ಬೀಜಗಳಾಗಿದ್ದೀರಿ, ನಿಮ್ಮಲ್ಲಿ ಅಕ್ಷರ ಜ್ಞಾನ ಬಿತ್ತಿದರೆ ಅದೇ ದೊಡ್ಡ ಆಸ್ತಿಯಾಗಿ ಹೊರ ಹೊಮ್ಮುತ್ತದೆ ಎಂದ ಅವರು ವಿದ್ಯಾರ್ಥಿಗಳಲ್ಲಿ ಓದು ಕುರಿತು ವಿವರವಾಗಿ ತಿಳಿಸಿದರು. ತೋಂಟದಾರ್ಯ ವಿದ್ಯಾಪೀಠ ಎಸ್‌.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಇಂದು ಪ್ರತಿಯೊಬ್ಬರ ಮನಸ್ಸು ಸಾಕಷ್ಟು ಒತ್ತಡದಲ್ಲಿರುತ್ತದೆ. ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಮೂಡಿದ ನಂತರ ಅವರೆಲ್ಲಾ ಇನ್ನು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಒತ್ತಡ ಹೋಗಲಾಡಿಸಲು ಸಾಕಷ್ಟು ದಾರಿಗಳಿವೆ.‌ ಅದನ್ನು ಬಿಟ್ಟು ಸಾವಿನ ಹಾದಿ ತುಳಿಯಬೇಡಿ, ಛಲ ಬಿಡಬೇಡಿ. ಮಕ್ಕಳಲ್ಲಿ ಮಾನಸಿಕ ದೌರ್ಬಲ್ಯ ಹೆಚ್ಚಾಗುತ್ತಿದ್ದು ಇದನ್ನು ಪಾಲಕರು ಸೂಕ್ಷ್ಮವಾಗಿ ಗಮನಿಸಬೇಕು ಎಂದ ಅವರು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಆಯೋಜಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು.

ಫಲಿತಾಂಶಕ್ಕಿಂತ ಬದುಕು ದೊಡ್ಡದು: ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ ಮಲ್ಲಿಕಾರ್ಜುನ ಸಿದ್ದಣ್ಣವರ‌ ಮಾತನಾಡಿ, ನಿಮ್ಮ ಪಾಲಕರ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸತತ ಪ್ರಯತ್ನ‌ ಮಾಡಬೇಕು. ಹಳ್ಳಿಗಳ ಮಕ್ಕಳ ಸಾಧನೆಯೇ ಉತ್ತಮವಾಗಿದೆ. ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ, ಸಾಕಷ್ಟು ಓದಿದಾಗ್ಯೂ ಫೇಲ್ ಆದರೆ ಭಯಪಡಬೇಡಿ, ಎಲ್ಲರೂ ಅಧಿಕಾರಿಗಳು, ಸರ್ಕಾರಿ ನೌಕರರು ಆಗಲು ಸಾಧ್ಯವಿಲ್ಲ. ಸಾಧನೆ ಮಾಡಲು ಇನ್ನು ಸಾಕಷ್ಟು ಕ್ಷೇತ್ರಗಳಿವೆ. ಫಲಿತಾಂಶಕ್ಕಿಂತ ಬದುಕು ದೊಡ್ಡದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಿವೃತ್ತ ಡಿಡಿಪಿಐ ಐ.ಬಿ. ಬೆನಕೊಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು, ತೋಂಟದಾರ್ಯ ವಿದ್ಯಾಪೀಠದ ಹಿರಿಯರು ಹಾಜರಿದ್ದರು. ಕೊಟ್ರೇಶ ಮೆಣಸಿನಕಾಯಿ ನಿರೂಪಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳಿಂದ 800 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.