ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

| Published : Feb 08 2025, 12:32 AM IST

ಸಾರಾಂಶ

ಶ್ರದ್ಧೆಯಿಂದ ಓದಿದರೆ ಆತಂಕವಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಬಹುದು

ಗದಗ: ಇಂಗ್ಲಿಷ್‌ ವಿಷಯ ಕಬ್ಬಣ ಕಡಲೆ ಎಂಬ ಕೀಳರಮೆ ತೊರೆದು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಗದಗ ಜಿಲ್ಲಾ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯಕ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಜನತಾ ವಿದ್ಯಾವರ್ಧಕ ಸಂಸ್ಥೆಯ ಬಿ.ಎಚ್. ಪಾಟೀಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗದಗ ಜಿಲ್ಲಾ ಪದವಿ ಪೂರ್ವ ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆ, ತಿಮ್ಮಾಪುರದ ಕೆವಿಎಸ್‌ಆರ್‌ ಪಿಯು ಕಾಲೇಜು ಹಾಗೂ ಲಕ್ಕುಂಡಿಯ ಬಿ.ಎಚ್. ಪಾಟೀಲ ಪಿಯು ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಇಂಗ್ಲಿಷ್ ವಿಷಯ ಪ್ರಶ್ನೆಪತ್ರಿಕೆ ಬಿಡಿಸುವ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಇಂಗ್ಲಿಷ್ ಕನ್ನಡಕ್ಕಿಂತಲೂ ಸರಳವಾಗಿದ್ದು, ಶ್ರದ್ಧೆಯಿಂದ ಓದಿದರೆ ಆತಂಕವಿಲ್ಲದೇ ಆತ್ಮವಿಶ್ವಾಸದಿಂದ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಬಹುದು ಎಂದು ಹೇಳಿದರು.

ಜಗತ್ತಿನಾದ್ಯಂತ ಇಂಗ್ಲಿಷ್ ಭಾಷೆಯು ಸಂಪರ್ಕ ಭಾಷೆಯಾಗಿ ಬಳಕೆಯಾಗುತ್ತಿರುವುದರಿಂದ ಪ್ರಸ್ತುತ ಸಮಯದಲ್ಲಿ ಅತ್ಯಂತ ಮಹತ್ವದ ಭಾಷೆಯಾಗಿದೆ. ದೈನಂದಿನ ಜೀವನದಲ್ಲಿ ಇಂಗ್ಲಿಷ್ ಬಳಸುವ ಮೂಲಕ ಭಾಷೆಯನ್ನು ಕರಗತ ಮಾಡಿಕೊಳ್ಳಬೇಕು. ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಮದುವೆ, ಜಾತ್ರೆಗಳಂತಹ ಕಾರ್ಯಕ್ರಮಗಳಿಂದ ದೂರವಿದ್ದು, ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿ ರಮಾಕಾಂತ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನತಾ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಐ.ಎನ್. ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆ ಅಧ್ಯಕ್ಷ, ಪ್ರಾಚಾರ್ಯ ಬಸವರಾಜ ಗಿರಿತಿಮ್ಮಣ್ಣವರ, ಜನತಾ ವಿದ್ಯಾವರ್ಧಕ ಸಂಸ್ಥೆಯ ಕಾರ್ಯದರ್ಶಿ ಪಿ.ಎಫ್. ತೋಪಿನ, ನಿರ್ದೇಶಕರಾದ ವಿ.ವಿ. ಗಂಧದ, ಕೆ.ಎಂ. ಪಾಟೀಲ, ಟಿ.ಎನ್. ಅಂಬಕ್ಕಿ ಉಪಸ್ಥಿತರಿದ್ದರು. ಎ.ಎಂ. ನದಾಫ್ ಹಾಗೂ ಸುರೇಶ ಸಣ್ಣೇಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪ್ರಾಚಾರ್ಯ ಬಿ.ವಿ. ಪಾಟೀಲ ಸ್ವಾಗತಿಸಿದರು. ಆರ್.ಎಸ್. ಚವಡಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಚ್. ಮಲ್ಲಾಪುರ ವಂದಿಸಿದರು.