ಸಾರಾಂಶ
ಬ್ಯಾಡಗಿ: ರಾಜ್ಯ ಸರ್ಕಾರಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯಾದ್ಯಂತ ಅನುಷ್ಠಾನಗೊಳಿಸಿದ್ದು, ಸಂಬಂಧಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಎಲ್ಲ ಅರ್ಜಿದಾರರಿಗೆ ಯೋಜನೆಗಳ ಸೌಲಭ್ಯ ಕಲ್ಪಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಂಭನಗೌಡ್ರ ಪಾಟೀಲ ಸೂಚಿಸಿದರು.
ತಾಪಂ ಕಾರ್ಯಾಲಯದಲ್ಲಿ ಬುಧವಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಪ್ರಗತಿ ಪರಿಶೀಲನೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿದ ಐದು ಯೋಜನೆಗಳು ನಿರಂತರವಾಗಿ ಮುಂದುವರಿದಿವೆ. ರಾಜ್ಯಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಸಮಿತಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸುವ ಮೂಲಕ ಯೋಜನೆ ಕ್ರಮಬದ್ಧವಾಗಿ ಜಾರಿಗೊಳ್ಳಲು ಸರ್ಕಾರ ಯತ್ನಿಸಿದೆ. ಯಾವುದೇ ಕಾರಣಕ್ಕೂ ಅರ್ಹರ ಯೋಜನೆಯಿಂದ ವಂಚಿತರಾಗಬಾರದು ಎನ್ನುವ ಧ್ಯೇಯಕ್ಕೆ ಇಂದಿಗೂ ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳು ಸಾರ್ವಜನಿಕರಿಗೆ ನ್ಯಾಯ ದೊರಕಿಸುವಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಅಂತಹ ಅಧಿಕಾರಿಗಳು ಹೊಣೆ ಹೊರಬೇಕಿದೆ ಎಂದು ಎಚ್ಚರಿಸಿದರು.
₹೨೨ ಕೋ. ವೆಚ್ಚ: ಅನ್ನಭಾಗ್ಯ ಯೋಜನೆಯಲ್ಲಿ ತಾಲೂಕಿನ ಪಡಿತರ ಚೀಟಿಯ ೧,೧೪,೯೫೨ ಸದಸ್ಯರಿದ್ದು, ಈ ಪೈಕಿ ೩೧,೯೩೩ ಪಡಿತರ ಚೀಟಿದಾರ ಫಲಾನುಭವಿಗಳು ಲಾಭ ಪಡೆದಿದ್ದಾರೆ. ಒಟ್ಟಾರೆ ಪರಿತರ ಚೀಟಿದಾರರ ಖಾತೆಗೆ ೧೯,೫,೫೬,೬೩೦ ಜಮೆಯಾಗುತ್ತಿದ್ದು, ೨೦೨೩ ಜುಲೈನಿಂದ ಇಲ್ಲಿಯವರೆಗೂ ತಾಲೂಕಿನ ಕಾರ್ಡದಾರರಿಗೆ ಒಟ್ಟು ₹೨೨,೯೩,೫೯,೭೩೬ ಡಿಬಿಟಿ ಮೂಲಕ ಜಮೆಯಾಗಿದೆ. ಇನ್ನುಳಿದಂತೆ ೯೨೮ ಕಾರ್ಡ್‌ದಾರರ ಹೆಬ್ಬೆಟ್ಟಿನ ಗುರ್ತು ಲಭ್ಯವಾಗದ ಕಾರಣ, ಇವರ ಕೆವೈಸಿ ದಾಖಲಾಗದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ ಲಾಭ ದೊರೆತಿಲ್ಲ ಎಂದರು.ಗೃಹಲಕ್ಷ್ಮೀ ಯೋಜನೆಯಲ್ಲಿ ಒಟ್ಟು ೩೫,೨೨೨ ಅರ್ಹ ಮಹಿಳೆಯರು ಅರ್ಜಿ ನೋಂದಾಯಿಸಿದ್ದು, ಪ್ರತಿ ತಿಂಗಳು ೬.೭೩ ಕೋಟಿಯಂತೆ ಈ ವರೆಗೂ ಒಟ್ಟು ೭೪.೦೪ ಕೋಟಿ ಜಮೆ ಮಾಡಲಾಗಿದೆ. ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡಿದ್ದು, ಯೋಜನೆ ಆರಂಭವಾದ ಬಳಿಕ ಈ ವರೆಗೂ ಒಟ್ಟು ೯೭,೧೯,೨೧೪ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು, ೨೮,೮೩,೬೦,೫೭೦ ವೆಚ್ಚ ಭರಿಸಿದೆ.
ಯುವನಿಧಿ ಯೋಜನೆಯಲ್ಲಿ ಪದವಿ ೭೩೬ ಹಾಗೂ ಡಿಪ್ಲೊಮಾ ಶಿಕ್ಷಣ ಪಡೆದ ೨೧ ಜನ ಸೇರಿದಂತೆ ಒಟ್ಟು ೨೨,೩೯,೫೦೦ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿದೆ.ತಾಲೂಕಿನಾದ್ಯಂತ ಉಚಿತ ವಿದ್ಯುತ್ ಪಡೆಯಲು ೩೪,೦೪೯ ಅರ್ಹ ಗ್ರಾಹಕರು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಪ್ರತಿ ತಿಂಗಳು ₹೧.೨೩ ಕೋಟಿ ಜಮೆಯಾಗಲಿದೆ. ಈ ವರೆಗೂ ಒಟ್ಟು ₹೧೬.೨೬ ಕೋಟಿ ಸರ್ಕಾರ ಹೆಸ್ಕಾಂಗೆ ನೀಡಿದೆ ಎಂದರು.
ತಾಪಂ ಇಒ ಕೆ.ಎಂ. ಮಲ್ಲಿಕಾರ್ಜುನ, ಆಹಾರ ನಿರೀಕ್ಷಕ ಮಾಲತೇಶ ಮೇಗಳಮನಿ, ಶಿಶು ಯೋಜನಾಧಿಕಾರಿ ಬಿ. ಚಂದ್ರಶೇಖರ, ಹೆಸ್ಕಾಂ ಅಭಿಯಂತರ ರಾಜು ಅರಳೀಕಟ್ಟಿ, ಸುರೇಶ ಬಂಗಾರಿ, ಫೀರಾಂಭಿ ದೇಸೂರು, ವೀರಭದ್ರಗೌಡ್ರ ಪಾಟೀಲ, ವೀರೇಶ ಲಮಾಣಿ, ರಮೇಶ ಕೋಟಿ, ಸುಶೀಲಾ ಲಮಾಣಿ, ಹನುಮಂತ ಕಾಟೇನಹಳ್ಳಿ, ಹೈದರಲಿ ಬೆಂಗಳೂರಿ ಇತರರಿದ್ದರು.