ಸಾರಾಂಶ
ಬ್ಯಾಡಗಿ: ಗ್ರಾಮೀಣ ಪ್ರದೇಶಗಳಲ್ಲಿ ಗುಣಮಟ್ಟದ ಶಿಕ್ಷಣದ ಅಗತ್ಯತೆ ಅರ್ಥ ಮಾಡಿಕೊಂಡಿದ್ದೇನೆ. ನಗರ ಪ್ರದೇಶದಲ್ಲಿರುವ ಶೇ. 31ರಷ್ಟು ಜನರಿಗೆ ತಲುಪುತ್ತಿರುವ ಶೈಕ್ಷಣಿಕ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಶೇ. 69% ಜನರಿಗೆ ಸಿಗುತ್ತಿಲ್ಲ. ಇಂತಹ ತಾರತಮ್ಯ ಹೋಗಲಾಡಿಸುವ ಮೂಲಕ ಹಳ್ಳಿಗಳಲ್ಲಿರುವ ಮಕ್ಕಳ ಸುಸ್ಥಿರ ಭವಿಷ್ಯಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ₹30 ಲಕ್ಷ ವಿಶೇಷ ಅನುದಾನದಲ್ಲಿ ತಾಲೂಕಿನ ಹಿರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಹಾಗೂ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಕೊಟ್ಟರಷ್ಟೇ ಸಂವಿಧಾನಕ್ಕೆ ಅರ್ಥ: ಪ್ರಜಾಪ್ರಭುತ್ವದ ಸೇವೆಯಲ್ಲಿ ಶಿಕ್ಷಣ ಮೊದಲ ಆದ್ಯತೆಯಾಗಬೇಕು. ಅಂದಾಗಲೇ ಡಾ. ಬಾಬಾಸಾಹೇಬ್ ಅವರು ನೀಡಿದ ಸಂವಿಧಾನಕ್ಕೊಂದು ಅರ್ಥ ಬರಲಿದೆ. ಹಳ್ಳಿಗಳಲ್ಲಿರುವ ಯುವಕರು ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳಿಗೆ ನಗರ ಪ್ರದೇಶಗಳ ಮೊರೆ ಹೋಗದಂತೆ ತಡೆಗಟ್ಟಬೇಕಾಗಿದೆ ಎಂದರು.
ಹಳ್ಳಿಗರಷ್ಟೇ ಕಷ್ಟಪಟ್ಟು ದುಡಿಯಬೇಕಾಗಿಲ್ಲಗ್ರಾಮೀಣ ಪ್ರದೇಶದ ಜನರಷ್ಟೆ ಕೇವಲ ಕೃಷಿಯಲ್ಲಿ ಮುಂದುವರಿಯಬೇಕೆಂಬ ನಿಯಮವಿಲ್ಲ. ಉನ್ನತ ಶಿಕ್ಷಣ ಪಡೆದಂತಹ ಹಳ್ಳಿಯ ಯುವಕರು ಮಾತ್ರ ನಗರಗಳಿಗೆ ಹೋಗದೇ ತಮ್ಮದೇ ಕೃಷಿ ವ್ಯವಹಾರಗಳಲ್ಲಿ ತೊಡಗಿದರೇ ಹೊಸತನ ಹುಡುಕಲು ಸಹಾಯವಾಗಲಿದೆ ಎಂದರು.
ವ್ಯಾವಹಾರಿಕ ಶಿಕ್ಷಣ ಪಡೆದುಕೊಳ್ಳಿಶಿಕ್ಷಣವಂತರಾಗುವುದರಿಂದ ತಮ್ಮನ್ನು ಸುಲಭವಾಗಿ ಮೋಸಗೊಳಿಸಲು ಸಾಧ್ಯವಿಲ್ಲ. ಉತ್ತಮ ಶಿಕ್ಷಣ ಪಡೆದುಕೊಳ್ಳುವುದರಿಂದ ಸರ್ಕಾರದ ಕಾರ್ಯವಿಧಾನ, ಯೋಜನೆಗಳು, ಹಕ್ಕು ಮತ್ತು ಕರ್ತವ್ಯ ಮತ್ತು ರಕ್ಷಣಾತ್ಮಕ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವ್ಯಾವಹಾರಿಕವಾಗಿ ತಾವುಗಳು ಶಿಕ್ಷಣವಂತರಾಗುವುದರಲ್ಲಿ ತಪ್ಪೇನಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಹಿರೇಹಳ್ಳಿ ಕ್ಲಷ್ಟರ ಮಟ್ಟದ ಕ್ರೀಡಾಕೂಟ ಉದ್ದಾಟಿಸಿದ ಅವರು, ಉತ್ತಮ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ತೊಡಗುವಂತೆ ಕರೆ ನೀಡಿದರು. ಈ ವೇಳೆ ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಮಂಜನಗೌಡ ಲಿಂಗನಗೌಡ್ರ, ಕಾಗಿನೆಲೆ ಬ್ಲಾಕ್ ಅಧ್ಯಕ್ಷ ವೀರನಗೌಡ್ರ ಪಾಟೀಲ, ಬಿಇಒ ಎಸ್.ಜಿ. ಕೋಟಿ, ನಿವೃತ್ತ ಶಿಕ್ಷಕ ಎನ್.ಎಫ್. ಹರಿಜನ, ನ್ಯಾಯವಾದಿಗಳಾದ ಎನ್.ಎಫ್. ಗೌರಾಪುರ, ಎನ್.ಎಂ. ಹುಬ್ಬಳ್ಳಿ ಮುಖ್ಯಶಿಕ್ಷಕ ಡಿ.ಎ. ಯಾದವಾಡ ಸೇರಿದಂತೆ ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.