ಸಾರಾಂಶ
ಬಿ.ರಾಮಪ್ರಸಾದ್ ಗಾಂಧಿ
ಹರಪನಹಳ್ಳಿ: ವಿಜಯನಗರ ಜಿಲ್ಲೆಯಲ್ಲೂ ಜಿಲ್ಲಾಧ್ಯಕ್ಷ ಸೇರಿ ನಾಲ್ಕು ಕಡೆ ಮಂಡಲ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಆದರೆ ಹರಪನಹಳ್ಳಿ ಮಂಡಲ ಅಧ್ಯಕ್ಷರ ಆಯ್ಕೆ ಮಾತ್ರ ವಿಳಂಬವಾಗಿದೆ.ಬಸನಗೌಡ ಪಾಟೀಲ ಯತ್ನಾಳ, ಬಿ.ವೈ. ವಿಜಯೇಂದ್ರ ನಡುವಿನ ಭಿನ್ನಮತದ ಮಧ್ಯೆಯೂ ರಾಜ್ಯದಲ್ಲಿ ಬಿಜೆಪಿ ಜಿಲ್ಲಾ, ಮಂಡಲ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ವಿಜಯನಗರ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ತಾಲೂಕು ಮಂಡಲ ಅಧ್ಯಕ್ಷರನ್ನು ಈಗಾಗಲೇ ನೇಮಕ ಮಾಡಲಾಗಿದೆ. ಆದರೆ ಹರಪನಹಳ್ಳಿ ಬಿಜೆಪಿ ಮಂಡಲದಲ್ಲಿ ಭಿನ್ನಮತ, ಗುಂಪುಗಾರಿಕೆ ಮುಂದುವರಿದ ಪರಿಣಾಮ ಅಧ್ಯಕ್ಷರ ಘೋಷಣೆ ಆಗದೇ ವಿಳಂಬವಾಗಿದೆ.
ಹಾಲಿ ಮಂಡಲ ಅಧ್ಯಕ್ಷ ಕಲ್ಲಹಳ್ಳಿ ಕೆ.ಲಕ್ಷ್ಮಣ್ ಮತ್ತು ಮಾಜಿ ಶಾಸಕ ಜಿ.ಕರುಣಾಕರ ರೆಡ್ಡಿ ಇಬ್ಬರ ನಡುವೆ ಕಳೆದ ಐದು ವರ್ಷದಿಂದ ಆಂತರಿಕ ಬಿರುಕು ಮೂಡಿದ್ದರಿಂದ ಲಕ್ಷ್ಮಣ್ ಅವರು ಕರುಣಾಕರ ರೆಡ್ಡಿ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆ.ಲಕ್ಷ್ಮಣ್ ಅವರನ್ನು ಬಿಜೆಪಿ ಮಂಡಲ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.ಆಗ ಕರುಣಾಕರ ರೆಡ್ಡಿ ಮತ್ತು ಅವರ ಬೆಂಬಲಿಗರು ಲಕ್ಷ್ಮಣ್ ಅವರ ನೇಮಕ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಅಧ್ಯಕ್ಷರ ಬದಲಾಯಿಸುವಂತೆ ವರಿಷ್ಠರಲ್ಲಿ ಪಟ್ಟು ಹಿಡಿದಿದ್ದರು. ಬದಲಾವಣೆ ಮಾಡದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ರಾಜ್ಯ ಬಿಜೆಪಿ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದರು.
ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಬಿಜೆಪಿ ನಾಯಕರು ಲೋಕಸಭಾ ಚುನಾವಣೆ ಮುಗಿದ ಮೇಲೆ ಅಧ್ಯಕ್ಷರ ಬದಲಾಯಿಸುವುದಾಗಿ ಭರವಸೆ ನೀಡಿದ್ದರು. ಆದರೆ ಬದಲಾವಣೆ ಆಗದ ಹಿನ್ನೆಲೆಯಲ್ಲಿ ಲಕ್ಷ್ಮಣ್ ಅವರೇ ಮಂಡಲ ಅಧ್ಯಕ್ಷರಾಗಿ ಈವರೆಗೂ ಮುಂದುವರೆದಿದ್ದಾರೆ.ಇತ್ತೀಚೆಗೆ ಮಂಡಲ ಅಧ್ಯಕ್ಷರ ಆಯ್ಕೆ ಕುರಿತು ವಿಜಯನಗರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉಸ್ತುವಾರಿ ಕೆ.ಎಸ್. ನವೀನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹರಪನಹಳ್ಳಿ ಮಂಡಲ ಅಧ್ಯಕ್ಷರನ್ನು ಬದಲಾಯಿಸುವಂತೆ ಕರುಣಾಕರ ರೆಡ್ಡಿ ಬೆಂಬಲಿಗರು ಕೋರಿಕೊಂಡಿದ್ದರೆ, ಲಕ್ಷ್ಮಣ್ ಅವರನ್ನೇ ಮುಂದುವರೆಸುವಂತೆ ಕೆಲವರು ಒತ್ತಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡು ಇಷ್ಟು ದಿನ ಕಳೆದರೂ ಗುಂಪುಗಾರಿಕೆ ಹಾಗೆ ಮುಂದುವರಿದಿದೆ. ಮಂಡಲ ಅಧ್ಯಕ್ಷರ ಆಯ್ಕೆ ಸಹ ಆಗುತ್ತಿಲ್ಲ. ಕ್ಷೇತ್ರದ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲ, ಗುಂಪುಗಾರಿಕೆಯನ್ನು ಸರಿಪಡಿಸಿಕೊಂಡು, ಸರ್ವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಪಂ, ತಾಪಂ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ವ್ಯಕ್ತಿ ಮಂಡಲ ಅಧ್ಯಕ್ಷರಾಗಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಒತ್ತಾಸೆಯಾಗಿದೆ. ಈಗ ಕಾರ್ಯಕರ್ತರ ಚಿತ್ತ ವರಿಷ್ಠರ ಮೇಲೆ ನೆಟ್ಟಿದೆ.ಹರಪನಹಳ್ಳಿ ಮಂಡಲ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ನಡೆದಿದೆ. ವೀಕ್ಷಕ ನವೀನ ಸ್ಥಳೀಯ ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಫೆ.15ರೊಳಗೆ ಮಂಡಲ ಅಧ್ಯಕ್ಷರ ಹೆಸರು ಘೋಷಣೆಯಾಗುತ್ತದೆ ಎನ್ನುತ್ತಾರೆ ಮಾಜಿ ವಿಪ ಸದಸ್ಯ, ವಿಜಯನಗರ ಜಿಲ್ಲಾ ಚುನಾವಣಾಧಿಕಾರಿ ಅಮರನಾಥ ಪಾಟೀಲ್.
ಅಲ್ಪಾವಧಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ನನ್ನನ್ನೇ ಮುಂದುವರೆಸುವಂತೆ ಮಂಡಲ ಕೋರ್ ಕಮಿಟಿ, ಮಂಡಲದ ಜಿಲ್ಲಾ ಪದಾಧಿಕಾರಿಗಳು ಚುನಾವಣಾ ಉಸ್ತುವಾರಿ ಬಳಿ ಕೋರಿಕೊಂಡಿದ್ದಾರೆ. ಮುಂದುವರಿಯುವ ಭರವಸೆ ಇದೆ ಎನ್ನುತ್ತಾರೆ ಹರಪನಹಳ್ಳಿ ಮಂಡಲ ಬಿಜೆಪಿ ಹಾಲಿ ಅಧ್ಯಕ್ಷ ಕೆ.ಲಕ್ಷ್ಮಣ್.ಲಕ್ಷ್ಮಣ್ ಮಂಡಲ ಅಧ್ಯಕ್ಷರಾದ ಮೇಲೆ ಪಕ್ಷ ಸಂಘಟನೆಗೆ ಹಿನ್ನಡೆಯಾಗಿದೆ. ಇದುವರೆಗೂ ಸಭೆಗಳು ನಡೆದಿಲ್ಲ. ಇತ್ತೀಚೆಗೆ ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಪಕ್ಷ ಸೋಲನುಭವಿಸಿದೆ. ಇದರಿಂದ ಕಾರ್ಯಕರ್ತರಿಗೆ ನೋವುಂಟಾಗಿದೆ. ಮಂಡಲ ಅಧ್ಯಕ್ಷರನ್ನು ಬದಲಾಯಿಸುವಂತೆ ಉಸ್ತುವಾರಿಯಲ್ಲಿ ಮನವಿ ಮಾಡಿದ್ದೇವೆ ಎನ್ನುತ್ತಾರೆ ಸ್ಥಳೀಯ ಬಿಜೆಪಿ ಮುಖಂಡ ಆರ್.ಲೋಕೇಶ.