ರಾಜ್ಯ ಬೀದಿ ನಾಟಕಗಳ ಕಲಾತಂಡಗಳ ಒಕ್ಕೂಟದಲ್ಲಿ ಉಂಟಾಗಿರುವ ವೈಮನಸ್ಸಿನಿಂದ ಕೆಲವರು ಹೊರಬಂದು ಒಕ್ಕೂಟದ ಅಸ್ತಿತ್ವಕ್ಕೆ ಧಕ್ಕೆ ತರುವ, ಬ್ಯಾಂಕ್ ಖಾತೆ ವ್ಯವಹಾರಗಳಿಗೆ ಅಡಚಣೆ ಉಂಟುಮಾಡುವ, ಪ್ರತ್ಯೇಕ ಒಕ್ಕೂಟ ರಚನೆ ಮಾಡಿಕೊಂಡು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯ ಬೀದಿ ನಾಟಕಗಳ ಕಲಾತಂಡಗಳ ಒಕ್ಕೂಟದಲ್ಲಿ ಉಂಟಾಗಿರುವ ವೈಮನಸ್ಸಿನಿಂದ ಕೆಲವರು ಹೊರಬಂದು ಒಕ್ಕೂಟದ ಅಸ್ತಿತ್ವಕ್ಕೆ ಧಕ್ಕೆ ತರುವ, ಬ್ಯಾಂಕ್ ಖಾತೆ ವ್ಯವಹಾರಗಳಿಗೆ ಅಡಚಣೆ ಉಂಟುಮಾಡುವ, ಪ್ರತ್ಯೇಕ ಒಕ್ಕೂಟ ರಚನೆ ಮಾಡಿಕೊಂಡು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಒಕ್ಕೂಟದ ಸಂಸ್ಥಾಪಕ ಗ್ಯಾರಂಟಿ ರಾಮಣ್ಣ ಆರೋಪಿಸಿದರು.೨೦೧೯-೨೦ನೇ ಸಾಲಿನಲ್ಲಿ ಜಿಲ್ಲಾ ಸಂಘ-ಸಂಸ್ಥೆಗಳ ನೋಂದಣಾಧಿಕಾರಿ ಕಚೇರಿಯಲ್ಲಿ ಕಲಾವಿದರ ಒಕ್ಕೂಟ ನೋಂದಣಿಯಾಗಿದ್ದು, ಅಂದಿನಿಂದ ಕಲಾವಿದರ ಹಿತರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ೨೦೨೨ರಲ್ಲಿ ಸಬ್ಬನಹಳ್ಳಿ ರಾಜು, ಸಂತೆಕಸಲಗೆರೆ ಬಸವರಾಜು, ವೈರಮುಡಿ, ತಡಗವಾದಿ ನಾಗರಾಜು ಸೇರಿದಂತೆ ಇತರರು ಸೇರಿಕೊಂಡು ಆಡಳಿತ ಮಂಡಳಿಯ ಗಮನಕ್ಕೆ ತರದೆ ಕೆಲವು ನಕಲು ಸಹಿಗಳನ್ನು ಮಾಡಿ ೨೦೨೨ ರಿಂದ ೨೦೨೬ರವರೆಗೆ ಒಕ್ಕೂಟವನ್ನು ನವೀಕರಣ ಮಾಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು
ಇದು ಈ ಹಿಂದೆ ಇದ್ದ ಪದಾಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಪದಾಧಿಕಾರಿಗಳೆಲ್ಲರೂ ಸಭೆ ನಡೆಸಿ ಚರ್ಚಿಸಿ ಸಂಘ-ಸಂಸ್ಥೆಗಳ ನೋಂದಣಾಧಿಕಾರಿಗೆ ಒಕ್ಕೂಟವನ್ನು ನವೀಕರಿಸದಂತೆ ದೂರು ನೀಡಿದ್ದರೂ ಅವರು ನವೀಕರಿಸಿಕೊಡುತ್ತಿದ್ದಾರೆ. ಇದರ ಜೊತೆಗೆ ಒಕ್ಕೂಟದ ಪದಾಧಿಕಾರಿಗಳ ಬದಲಾವಣೆ ಮತ್ತು ಆಯ್ಕೆ ವಿಚಾರದಲ್ಲಿ ರಾಜ್ಯ ಕಲಾವಿದರ ಗಮನಕ್ಕೆ ತರದೆ ಕೇವಲ ಬೆರಳೆಣಿಕೆಯಷ್ಟು ಕಲಾವಿದರು ಸೇರಿ ತಮಗೆ ಬೇಕಾದಂತಹ ಹಿಂಬಾಲಕರನ್ನು ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಿ ಈ ಪಟ್ಟಿಯನ್ನು ನೋಂದಣಾಧಿಕಾರಿಗೆ ನೀಡಿದ್ದಾರೆ. ಈ ಕುರಿತಂತೆ ಲೋಕಯುಕ್ತರಿಗೂ ದೂರು ನೀಡಿರುವುದಾಗಿ ಹೇಳಿದರು.ರಾಜ್ಯದ ಎಲ್ಲಾ ಜಿಲ್ಲೆಗಳ ಎಲ್ಲಾ ಕಲಾವಿದರ ಏಳಿಗೆಗಾಗಿ ಹುಟ್ಟಿಕೊಂಡಿರುವ ಈ ಒಕ್ಕೂಟ ಈಗ ಕೇವಲ ಕೆಲವೇ ವ್ಯಕ್ತಿಗಳ ಬೀದಿ ನಾಟಕದ ಗಂಧ-ಗಾಳಿ ಗೊತ್ತಿಲ್ಲದವರ ಕೈಗೆ ಸಿಲುಕಿ ಬಡ ಕಲಾವಿದರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ದೂರಿದರು.ಒಕ್ಕೂಟದ ಬ್ಯಾಂಕ್ ಖಾತೆಯನ್ನು ವ್ಯವಹಾರ ಮಾಡದಂತೆ ೨೦೨೩ರಿಂದ ಇಲ್ಲಿಯವರೆಗೆ ತಡೆಹಿಡಿದಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ರಾಜ್ಯದ ಎಲ್ಲಾ ಒಕ್ಕೂಟದ ಪದಾಧಿಕಾರಿಗಳು ಮತ್ತು ಕಲಾವಿದರು ಸೇರಿ ಮಹೇಶ್ ಅವರನ್ನು ಅಧ್ಯಕ್ಷರನ್ನಾಗಿ, ಅಂಬುಜ ಅವರನ್ನು ಕಾರ್ಯದರ್ಶಿಯನ್ನಾಗಿ ಸರ್ವಾನುಮತದಿಂದ ಒಪ್ಪಿ ಆಯ್ಕೆ ಮಾಡಿದ್ದರು.
ಈ ಆಯ್ಕೆಪಟ್ಟಿಯನ್ನು ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ನೀಡಿದ್ದರೂ ಅದನ್ನು ನವೀಕರಿಸದೆ ಕೆಲವರು ತಮಗೆ ಬೇಕಾದ ವ್ಯಕ್ತಿಗಳನ್ನು ಆಯ್ಕೆ ಮಾಡಿ ನೀಡಿದ ಪಟ್ಟಿಯನ್ನು ನವೀಕರಿಸಿದ್ದಾರೆ ಎಂದು ಅಸಹಾಯಕತೆಯಿಂದ ನುಡಿದರು.ಇದೇ ರೀತಿ ಇನ್ನೂ ಅನೇಕ ರೀತಿಯ ನಕಲು ವ್ಯವಹಾರ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಿಜವಾದ ಕಲಾವಿದರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮಹೇಶ್, ಅಂಬುಜ, ವಿ.ಚಿಕ್ಕರೆಡ್ಡಪ್ಪ, ಜಿ.ಎನ್.ಹೇಮಂತ್, ಮಂಜುಳಾ, ಸಲ್ಮಾ ಇದ್ದರು.