ಸಾರಾಂಶ
ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಸಮವಾದದಲ್ಲಿ ಜಿಲ್ಲಾಧಿಕಾರಿ ರವೀಂದ್ರ ಸೂಚನೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ಮೂಲ ಭೂತ ಸೌಕರ್ಯಗಳು ದೊರೆಯುತ್ತಿಲ್ಲವೆಂದರೆ ಶೋಚನೀಯ ಸಂಗತಿ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ಮಂಗಳವಾರ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ, ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಬಾರದ ಹಾಗೆ ಸಂಬಂಧಪಟ್ಟ ಕಾರ್ಖಾನೆಯ ಆಡಳಿತ ಮಂಡಳಿ ನೋಡಿಕೊಳ್ಳಬೇಕು ಎಂದರು.ಕೆಐಎಡಿಬಿ ಅಧಿಕಾರಿ ಭೇಟಿ ಮಾಡಿ
ರೈತರಿಗೆ ಬರಬೇಕಾಗಿರುವ ಬಾಕಿ ಹಣ ಪಾವತಿಗೆ ರೈತರು ನೇರವಾಗಿ ಕೆಐಎಡಿಬಿ ಮುಖ್ಯಾಧಿಕಾರಿಗಳನ್ನು ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಮತ್ತು ಮಾಲಿನ್ಯ ಗಾಳಿ ಮತ್ತು ನೀರನ್ನು ಕೆಲವು ಕಾರ್ಖಾನೆಗಳ ಮಾಲೀಕರು ಕಾರ್ಖಾನೆಯ ಒಳಗೆ ಬೋರ್ ವೆಲ್ ಹಾಕಿಸಿಕೊಂಡು ಆ ಬೋರ್ ಒಳಗೆ ಬಿಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕೆಐಎಡಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದರು.ಭಾರಿ ವಾಹನಗಳನ್ನು ಮುಖ್ಯ ರಸ್ತೆಯಲ್ಲಿ ಮಾತ್ರ ಸಂಚಾರ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಗ್ರಾಮಗಳ ಒಳಗೆ ಹೋಗಬಾರದು ಎಂದು ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಸರವಾದಿ ಚೌಡಪ್ಪ ಮಾತನಾಡಿ, ಕೆಂಪು ಬಣ್ಣದ ಕಾರ್ಖಾನೆಗಳಿಂದ ಕುಡುಮಲಕುಂಟೆ ಗ್ರಾಮದಲ್ಲಿ ಸುಮಾರು 30 ಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ ಆದ್ದರಿಂದ ಕೆಂಪು ಬಣ್ಣದ ಕೈಗಾರಿಕೆಗಳಿಗೆ ಇಲ್ಲಿ ಅವಕಾಶ ನೀಡಬಾರದು. ಕೃಷಿ ಮತ್ತು ಕೈಗಾರಿಕೆ ಎರಡೂ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಪರಿಸರವನ್ನು ಕಾಪಾಡಬೇಕು. ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಕೈಗಾರಿಕಾ ಪ್ರಾಂಗಣದಲ್ಲಿ ಒಂದು ಪೋಲೀಸ್ ಠಾಣೆ ಮತ್ತು ಆಸ್ಪತ್ರೆ ಪ್ರಾರಂಭಿಸಬೇಕು ಎಂದರು.ಒಂದು ಮತ್ತು ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಪೂರ್ತಿ ಸ್ಥಾಪನೆಯಾಗಿಲ್ಲ. ಆದರೆ ಮೂರನೇ ಹಂತದ ಕೈಗಾರಿಕೆಗೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ ಎಂದರೆ ರೀಯಲ್ ಎಸ್ಟೇಟ್ ಉದ್ಯಮಿಗಳ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ. ಕಾರ್ಖಾನೆಗಳಿಗೆ ಜಮೀನು ಸ್ವಾಧೀನದಿಂದಾಗಿ ರೈತರು ಕಂಗಾಲಾಗಿದ್ದಾರೆ.ಸದರಿ ಸ್ಥಳದಲ್ಲಿ ಗುಂಡುತೋಪು ಗೋಕುಂಟೆ ಸರ್ಕಾರಿ ಜಮೀನಿನ ಬಗ್ಗೆ ಮಾಹಿತಿ ಇಲ್ಲ. ಸ್ಟೀಲ್ ಕಾರ್ಖಾನೆಯಲ್ಲಿ 3 ವರ್ಷಗಳ ಹಿಂದೆ 3 ಜನ ಕಾರ್ಮಿಕರು ಸಜೀವ ದಹನವಾದರು ಅದನ್ನು ಯಾರೂ ಪ್ರಶ್ನೆ ಮಾಡಲಿಲ್ಲ. ಕೆಐಎಡಿಬಿ ಮೂಲಕ ಬರುವ ಹಣ ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಪರಿಸರಾದಿಕಾರಿ ದಿನೇಶ್. ಜಂಟಿ ಕೈಗಾರಿಕಾಧಿಕಾರಿ ವೀರಬದ್ರಸ್ವಾಮಿ. ತಹಸೀಲ್ದಾರ್ ಮಹೇಶ್.ಎಸ್.ಪತ್ರಿ. ದೊಡ್ಡ ಕುರುಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ. ಜಿಲ್ಲಾ ಪರಿಸರಾದಿಕಾರಿ ಸಿದ್ದೇಶ್ವರ ಬಾಬು. ಶಿವಕುಮಾರ. ಲೀಲಾವತಿ. ಪ್ರವೀಣ್. ಹಾಗೂ ರೈತರು ಇದ್ದರು.
ಸಿಕೆಬಿ-5 ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಏರ್ಪಡಿಸಿದ್ದ ಸಂವಾದದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿದರು.