ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯ ಸರ್ಕಾರ ನಗರಸಭೆಗೆ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನ ನೀಡದೆ, ಈಗ ನಡೆದಿರುವ ಕಾಮಗಾರಿ ಬಿಲ್‌ಗಳನ್ನು ತಡೆ ಹಿಡಿದು ವಾರ್ಡುಗಳ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ನಗರಸಭೆ ಸದಸ್ಯರು ವಿಶೇಷ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.ನಗರಸಭೆ ಸಭಾಂಗಣದಲ್ಲಿ ಡಿಸಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಗೆ ಆಗಮಿಸಿದ ಬಿಜೆಪಿಯ ೧೫ ಮಂದಿ ಸದಸ್ಯರು ಒಕ್ಕೊರಲಿನಿಂದ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ನಗರಸಭೆಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಬಿಡುಗಡೆಯಾಗಿದ್ದ ೪೦ ಕೋಟಿ ರು.ತರಲುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿದರು. ನಗರಸಭೆ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವರಾಜ್ ನೇತೃತ್ವದಲ್ಲಿ ನಗರಸಭೆ ಮುಂದೆ ಧರಣಿ ಕುಳಿತು ಸಭೆ ಮುಗಿಯುವವರೆಗೆ ಪ್ರತಿಭಟನೆ ನಡೆಸಿದರು. ಡಿಸಿ ಶಿಲ್ಪಾನಾಗ್ ಪ್ರತಿಭಟನಾ ನಿರತ ಬಿಜೆಪಿ ಸದಸ್ಯರನ್ನು ಸೌಜನ್ಯಕ್ಕಾದರು ಭೇಟಿ ಮಾಡಿ ಸಮಸ್ಯೆ ಆಲಿಸದೇ ಘೋಷಣೆ ಕೂಗಿದರೂ ಕೇಳಿಯು ಕೇಳದಂತೆ ಕಾರು ಹತ್ತಿ ಹೊರಟರು. ನಗರಸಭಾ ಸದಸ್ಯ ಶಿವರಾಜು, ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಕಳೆದ ಅವಧಿಯ ಬಿಜೆಪಿ ಸರ್ಕಾರ ನಗರೋತ್ಥಾನದ ಯೋಜನೆಯಡಿಯಲ್ಲಿ ಮಂಜೂರು ಮಾಡಿದ್ದ ೪೦ ಕೋಟಿ ರು.ಗಳಿಗೆ ಕ್ರಿಯಾಯೋಜನೆ ನೀಡಿ, ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಆದರೆ, ಈಗ ಬಂದ ಕಾಂಗ್ರೆಸ್ ಸರ್ಕಾರ ಎಲ್ಲಾ ಅನುದಾನವನ್ನು ವಾಪಸ್ ಪಡೆದುಕೊಂಡಿದೆ. ಇದುವರಿಗೆ ನಡೆದಿರುವ ಕಾಮಗಾರಿಗಳ ಬಿಲ್ ಅನ್ನು ಸಹ ತಡೆ ಹಿಡಿದು ವಾರ್ಡುಗಳ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ದೂರಿದರು.
ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಹಿಂದೆಯು ಡಿಸಿ ಸಭೆಯಲ್ಲಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡಿನಲ್ಲಿ ನಿವಾಸಿಗಳು ನಮಗೆಲ್ಲ ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರದಿಂದ ಅನುದಾನವೇ ಬರದಿದ್ದ ಮೇಲೆ ಸಭೆ ಮಾಡಿ ಏನು ಪ್ರಯೋಜನ ಎಂದು ಸದಸ್ಯರು ಪ್ರಶ್ನೆ ಮಾಡಿದರು. ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಆಶಾ ನಟರಾಜು, ಸದಸ್ಯರಾದ ಮನೋಜ್ ಪಟೇಲ್, ಮಮತ ಬಾಲಸುಬ್ರಮಣ್ಯ, ಕುಮುದಾ ಕೇಶವಮೂರ್ತಿ ಇತರರು ಭಾಗವಹಿಸಿದ್ದರು.