ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ವಿಫಲ; ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

| Published : Apr 28 2025, 11:46 PM IST

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ವಿಫಲ; ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೂಲಿಕಾರ್ಮಿಕರ ಬಾಕಿ ಹಣವನ್ನು ತಕ್ಷಣವೇ ಪಾವತಿ ಮಾಡಬೇಕು. ಕೂಲಿ ಸ್ಥಳದಲ್ಲಿ ನೀರು, ನೆರಳು, ಔಷಧಿ ಕಿಟ್ ಗಳ ವ್ಯವಸ್ಥೆ ಮಾಡಬೇಕು. ತಕ್ಷಣವೇ ಕಾಯಕ ಬಂಧುಗಳ ಸಹಾಯ ಧನ ನೀಡಬೇಕು. ಕಾಮಗಾರಿಯ ನಾಮಫಲಕಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕವೇ ಹಾಕಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಬಗೆಹರಿಸಬೇಕು .

ಕನ್ನಡಪ್ರಭ ವಾರ್ತೆ ಮಳವಳ್ಳಿ

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ ಮಾಡಲು ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಸೇರಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಕೇಂದ್ರದ ನರೇಂದ್ರ ಮೋದಿ ಸರ್ಕಾರ ದಿನದಿಂದ ದಿನಕ್ಕೆ ನರೇಗಾ ಯೋಜನೆ ದುರ್ಬಲಗೊಳಿಸುವ ಉದ್ದೇಶದಿಂದ ಆನ್ ಲೈನ್ ಆ್ಯಪ್ ಸೇರಿದಂತೆ ಹಲವು ತೊಂದರೆಗಳನ್ನು ನೀಡುತ್ತಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದೆ. ಕೂಲಿ ಮಾಡಿ ತಿಂಗಳು ಕಳೆದರೂ ಹಣ ಪಾವತಿ ಮಾಡದೇ ನರೇಗಾ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.

ನರೇಗಾ ಯೋಜನೆಯಡಿ ಕೂಲಿಗಾಗಿ ಅರ್ಜಿ ಸಲ್ಲಿಸಿ ಆರು ತಿಂಗಳು ಕಳೆದರೂ ಕೆಲವು ಪಂಚಾಯಿತಿಗಳಲ್ಲಿ ಕೂಲಿ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶ ಜನರ ರಕ್ಷಣೆಗೆ ಬಂದಿರುವ ಕಾಯ್ದೆಯನ್ನು ಪಿಡಿಒಗಳು, ಎಂಜಿನಿಯರ್, ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಕೂಲಿಕಾರರನ್ನು ಕಡೆಗಣಿಸಿ ಯಂತ್ರಗಳ ಮೂಲಕ ಕೆಲಸ ಮಾಡಿಸಲು ಹೊರಟಿದ್ದಾರೆ. ಕೆಲವು ಪಂಚಾಯತಿಗಳಲ್ಲಿ 25 ರಿಂದ 35 ದಿನಗಳು ಮಾತ್ರ ಕೆಲಸ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ತಕ್ಷಣದಲ್ಲಿ ಕೆಲಸ ನೀಡಬೇಕು. ಕೂಲಿಕಾರ್ಮಿಕರನ್ನು ವಂಚಿಸಿ ಯಂತ್ರಗಳ ಮೂಲಕ ಕೆಲಸ ಮಾಡುತ್ತಿರುವ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಎನ್ಎಂಎಂಎಸ್ ಆ್ಯಪ್ ನಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಕೂಲಿಕಾರ್ಮಿಕರ ಬಾಕಿ ಹಣವನ್ನು ತಕ್ಷಣವೇ ಪಾವತಿ ಮಾಡಬೇಕು. ಕೂಲಿ ಸ್ಥಳದಲ್ಲಿ ನೀರು, ನೆರಳು, ಔಷಧಿ ಕಿಟ್ ಗಳ ವ್ಯವಸ್ಥೆ ಮಾಡಬೇಕು. ತಕ್ಷಣವೇ ಕಾಯಕ ಬಂಧುಗಳ ಸಹಾಯ ಧನ ನೀಡಬೇಕು. ಕಾಮಗಾರಿಯ ನಾಮಫಲಕಗಳನ್ನು ಗ್ರಾಮ ಪಂಚಾಯಿತಿಗಳ ಮೂಲಕವೇ ಹಾಕಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮನವಿ ಸ್ವೀಕರಿಸಿ, ಕೂಲಿಕಾರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಕೆಗೆ ಕ್ರಮ ವಹಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಅಧ್ಯಕ್ಷೆ ಡಿ.ಕೆ.ಲತಾ, ಕಾರ್ಯದರ್ಶಿ ಸುಶೀಲಾ, ಮುಖಂಡರಾದ ಜಯಶೀಲಾ, ಪ್ರೇಮಾ, ಸುವರ್ಣ, ಗೌರಮ್ಮ, ನಾಗರತ್ನ, ಮಹದೇವಿ, ರೂಪಾ, ರತ್ನಮ್ಮ ಹಾಗೂ ಕೂಲಿಕಾರ್ಮಿಕರು ಪಾಲ್ಗೋಂಡಿದ್ದರು.