ಕನ್ನಡಪ್ರಭ ವಾರ್ತೆ ಮಧುಗಿರಿ

ಎಲ್ಲ ಜನಾಂಗದವರು ಪ್ರೀತಿ, ವಿಶ್ವಾಸ ಸ್ನೇಹ ಸಹಕಾರ ಮನೋಭಾವದಿಂದ ಒಗ್ಗೂಡಿ ನಡೆಸುವ ಜಾತ್ರೆ ಯಶಸ್ವಿಯಾಗಲಿ ಎಂದು ದೇವಸ್ಥಾನದ ಆಡಳಿತಧಿಕಾರಿ ಮತ್ತು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು. ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀದಂಡಿಮಾರಮ್ಮ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲರನ್ನೂ ಒಗ್ಗೂಡಿಸಿ ಸಡಗರ -ಸಂಭ್ರಮದಿಂದ 11 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆಯುವುದೇ ನಮ್ಮ ಸೌಭಾಗ್ಯ ಎಂದರು. ಭಕ್ತಾದಿಗಳು ಶಾಂತಿ, ಸೌಹಾರ್ದ, ಸಾಮರಸ್ಯದಿಂದ ಜಾತ್ರೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ. ತಾಯಿಯ ಕೃಪೆಯಿಂದ ಈ ಭಾಗದಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರ, ಕೃಷಿಕರ ಜೀವನ ಮಟ್ಟ ಸುಧಾರಿಸಲು ತಾಯಿ ದಂಡಿಮಾರಮ್ಮ ಕರುಣಿಸಲಿ ಎಲ್ಲದರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ನಮ್ಮ ಹಿರಿಯರು ಊರಿನ ಒಳಗಡೆ ಯಾವುದೇ ಕೆಟ್ಟ ಶಕ್ತಿಗಳು ಪ್ರವೇಶಿಸದಿರಲಿ ತಾಯಿ ಜನರ ಹಿತ ಕಾಪಾಡಲಿ ಎಂಬ ದೃಷ್ಠಿಯಿಂದ ಪಟ್ಟಣ ಪ್ರವೇಶಿಸುವಲ್ಲಿ ಗ್ರಾಮ ದೇವತೆ ದೇವಸ್ಥಾನ ಕಟ್ಟಿಸಿದ್ದು, ರಾಜ್ಯದಲ್ಲಿ ದಂಡಿಮಾರಮ್ಮ ಜಾತ್ರೆಯು 11 ದಿನಗಳ ಕಾಲ ನಡೆಯುತ್ತದೆ. ವಿವಿಧ ಸಮುದಾಯಗಳ ರಥೋತ್ಸವ ಪ್ರಸಿದ್ಧಿ ಪಡೆದಿದೆ ಎಂದೇಳಿ ಆತ್ಮ ಸಾಕ್ಷಿ ಅಂತಃಕರಣವೇ ದೇವರು ಅದನ್ನು ಹಲವು ರೂಪ ಮತ್ತು ಹೆಸರಿನಿಂದ ಆರಾಧಿಸುತ್ತೇವೆ. ದಂಡಿಮಾರಮ್ಮ ಯುದ್ಧದ ಸಂದರ್ಭದಲ್ಲಿ ದಂಡಿನೊಡನೆ ಬಂದ ದೇವತೆ ಊರ ಹೊರಗೆ ನೆಲಸಿ ಯಾವುದೇ ಕೆಡುಕು ಒಳ ನುಗ್ಗದಂತೆ ಗ್ರಾಮದ ಜನರನ್ನು ರಕ್ಷಿಸುತ್ತಿದ್ದಾಳೆ. ಸಂಸ್ಕೃತಿ ,ಪರಂಪರೆ ಜಾತ್ರೆಯಲ್ಲಿ ಬೆರೆತು ಸಂಬಂಧಗಳನ್ನು ಗಟ್ಟಿಗೊಳಿಸುವುದು ಸಂಜೆ ಮನರಂಜನೆ ಕಾರ್ಯಕ್ರಮದಲ್ಲಿ ಉಪಯುಕ್ತ ವಿಚಾರ ವಿನಿಮಯ ಆಗುವುದು ಎಂದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಮಂಜುನಾಥ್‌.ತುಮಕೂರು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಪುರಸಭೆ ಮಾಜಿ ಸದಸ್ಯ ಎಂ.ವಿ.ಮಂಜುನಾಥ್ ಆಚಾರ್, ಮುಖಂಡರಾದ ಹರಿನಾಥ್ ಗೌಡ, ರಾಮೇಗೌಡ, ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಅರ್ಚಕರಾದ ಎಂ.ಎನ್.ಅರುಣಕುಮಾರ್, ಲಕ್ಷ್ಮೀಕಾಂತ ಆಚಾರ್‌,ಮುರುಳಿ,ಚಂದನ್ ಶರ್ಮಾ,ಮತ್ತು ಪಣ್ಣೆ ರೈತ ಮುಖಂಡರು ಇದ್ದರು.