ಮಾಲೇಕಲ್ಲು ತಿರುಪತಿ ಜಾತ್ರಾ ಮಹೋತ್ಸವ

| Published : Jul 17 2024, 12:47 AM IST

ಸಾರಾಂಶ

ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಜಾತ್ರಾ ಮಹೋತ್ಸವವು ಜು.೧೮ ಗುರುವಾರ ವಿಜೃಂಭಣೆಯಿಂದ ನೆರವೇರಲಿದೆ. ಆಷಾಢ ಮಾಸದ ದ್ವಾದಶಿಯಂದು ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಆಯೋಜಿಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಿವಿಧ ಸಮಾಜಗಳು ಸೇರಿದಂತೆ ಸಮುದಾಯದವರು ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ. ಜಾತ್ರೆಯಂದು ಅರಸೀಕೆರೆ ನಗರದಿಂದ ಕೆ.ಎಸ್‌.ಆರ್‌.ಟಿ.ಸಿ ವತಿಯಿಂದ ವಿಶೇಷ ಬಸ್ ಸಂಚಾರ ಏರ್ಪಡಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯದಲ್ಲಿ "ಚಿಕ್ಕ ತಿರುಪತಿ " ಎಂದು ಪ್ರಸಿದ್ದವಾಗಿರುವ ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀ ವೆಂಕಟರಮಣ ಜಾತ್ರಾ ಮಹೋತ್ಸವವು ಜು.೧೮ ಗುರುವಾರ ವಿಜೃಂಭಣೆಯಿಂದ ನೆರವೇರಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ ಅರುಣ್ ಕುಮಾರ್ ತಿಳಿಸಿದರು.ತಿರುಪತಿ ದೇವಾಲಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೭ ದಿವಸಗಳ ಕಾಲ ಜಾತ್ರಾ ಮಹೋತ್ಸವ ಪೂಜಾ ಕೈಂಕರ್ಯಗಳು ಜು.೧೧ರಿಂದ ಪ್ರಾರಂಭವಾಗಿದ್ದು, ಇದೇ ೨೭ರಂದು ಮುಕ್ತಾಯವಾಗಲಿದೆ. ಡಿ.೧೮ ಗುರುವಾರ ಆಷಾಢ ಮಾಸದ ದ್ವಾದಶಿಯಂದು ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಆಯೋಜಿಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ವಿವಿಧ ಸಮಾಜಗಳು ಸೇರಿದಂತೆ ಸಮುದಾಯದವರು ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ. ಜಾತ್ರೆಯಂದು ಅರಸೀಕೆರೆ ನಗರದಿಂದ ಕೆ.ಎಸ್‌.ಆರ್‌.ಟಿ.ಸಿ ವತಿಯಿಂದ ವಿಶೇಷ ಬಸ್ ಸಂಚಾರ ಏರ್ಪಡಿಸಲಾಗಿದೆ ಎಂದರು.ಅಲಂಕಾರ: ದೇವಸ್ಥಾನ ಪೂಜಾ ಕೈಂಕರ್ಯವನ್ನು ಅರ್ಚಕರಾದ ಎನ್.ರಾಮಪ್ರಸಾದ್, ಟಿ.ಎಸ್ ವರದರಾಜು, ಆರ್. ಗಿರಿಕೇಸರಿ, ಟಿ.ಎಸ್ ಶ್ರೀನಿವಾಸ ನೆರವೇರಿಸಿಕೊಡಲಿದ್ದಾರೆ. ಜಾತ್ರಾ ಮಹೋತ್ಸವದಲ್ಲಿ ದೇವಸ್ಥಾನ ಪ್ರಾಂಗಣ ಸೇರಿದಂತೆ ಆವರಣವನ್ನು ವಿವಿಧ ಹೂವುಗಳ ಅಲಂಕಾರ ಸೇವಾರ್ಥವನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣ ಗೌಡ ಮತ್ತು ಕುಟುಂಬ ನೆರವೇರಿಸಿಕೊಡಲಿದ್ದಾರೆ. ಜುಲೈ ೨೦ರ ಶನಿವಾರ ಅರಸೀಕೆರೆ ನಗರ ಪ್ರವೇಶ ಮಾಡಲಿದ್ದು, ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಗರದ ನಾಗರಿಕರಿಂದ ಪೂಜಾ ಕೈಂಕರ್ಯ ನೆರವೇರಲಿದೆ ಎಂದರು.ಶಾಸಕರ ನೇತೃತ್ವದಲ್ಲಿ ಸಭೆ: ವ್ಯವಸ್ಥಾಪನಾ ಸಮಿತಿ ಸದಸ್ಯ ಟಿ.ಆರ್ ನಾಗರಾಜು ಮಾತನಾಡಿ, ದೇವಾಲಯದ ಗೋಪುರದ ಲೋಕಾರ್ಪಣೆ ಸಂಬಂಧಿಸಿದಂತೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ಅಧ್ಯಕ್ಷತೆಯಲ್ಲಿ ಜುಲೈ ೧೭ರ ಬುಧವಾರ ಸಂಜೆ ೪ ಗಂಟೆಗೆ ಸಭೆ ಕರೆಯಲಾಗಿದ್ದು ಸದಸ್ಯರು, ಸಾರ್ವಜನಿಕರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಬ್ರಹ್ಮಣ್ಯ ಮಣಿ, ಸಿ. ಸೋಮಶೇಖರ, ಕೆ. ಸುನೀಲ್ ಕುಮಾರ್, ಎಚ್‌.ಸಿ ಜಯಶ್ರೀ, ಬಿ.ಜಿ ವಿಶ್ವನಾಥ್, ಕರವೇ ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್, ಅಭಿವೃದ್ಧಿ ಸಮಿತಿಯ ಟಿ.ಆರ್ ಚಂದ್ರು, ಅರ್ಚಕರಾದ ರಾಮ್‌ ಪ್ರಸಾದ್, ಟಿ.ಎಸ್ ವರದರಾಜು, ಆರ್ ಗಿರಿಕೇಸರಿ, ಟಿ.ಎಸ್.ಶ್ರೀನಿವಾಸ, ಬೊಮ್ಮನಹಳ್ಳಿ ಪರಮಶಿವಯ್ಯ, ಪಾರುಪತ್ತೇದಾರ ಲೋಕೇಶಯ್ಯ ಉಪಸ್ಥಿತರಿದ್ದರು.* ಹೇಳಿಕೆ1: ಶ್ರೀ ಕ್ಷೇತ್ರಕ್ಕೆ ಅನ್ನದಾಸೋಹ ಮಂದಿರ ಅವಶ್ಯಕತೆ ಇದ್ದು, ಮಂದಿರ ನಿರ್ಮಾಣಕ್ಕೆ ದೇವಾಲಯದ ೮ ಗುಂಟೆ ಸ್ಥಳವಿದ್ದು, ಈ ಸ್ಥಳದಲ್ಲಿ ದಾಸೋಹ ಮಂದಿರವನ್ನು ನಿರ್ಮಾಣ ಮಾಡಲು ಶಾಸಕರು ಮುಂದಾಗಬೇಕು. ಅಲ್ಲದೇ ಮಾಲೇಕಲ್ ತಿರುಪತಿಗೆ ದಿನನಿತ್ಯ ಜೆ.ಸಿ. ಪುರ ಮಾರ್ಗವಾಗಿ ಸಂಚರಿಸುವ ಬಸ್‌ಗಳನ್ನು ತಿರುಪತಿ ಮಾರ್ಗವಾಗಿ ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು. -ಗಿರೀಶ್‌, ಅಗ್ಗುಂದ ಗ್ರಾಪಂ ಮಾಜಿ ಅಧ್ಯಕ್ಷ