ಧಾರವಾಡ:

ಕಾಂಗ್ರೆಸ್‌ ಯುವ ಮುಖಂಡ ಫೈರೋಜ್‌ ಪಠಾಣ ಕೊಲೆ ಪ್ರಕರಣ ದಿನಕ್ಕೊಂದು ದಿಕ್ಕಿಗೆ ಸಾಗುತ್ತಿದೆ. ಇದೀಗ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಕೊಲೆ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿರುವ ಧಾರವಾಡ ಅಂಜುಮನ್‌ ಇಸ್ಲಾಂ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಪರವಾಗಿ ಮಾತನಾಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾಲ್ಕು ವರ್ಷಗಳ ಹಿಂದಿನ ಆಡಿಯೋ ಇಟ್ಟುಕೊಂಡು ತಮಟಗಾರ ಮೇಲೆ ಕೊಲೆ ಆರೋಪ ಹೊರೆಯಿಸುವುದು ಬೇಡ. ನಾಲ್ಕು ವರ್ಷಗಳ ಹಿಂದೆ ವಿಧಾನ ಪರಿಷತ್‌ ಟಿಕೆಟ್‌ ಕೈ ತಪ್ಪಿದಾಗ ಮಾನಸಿಕವಾಗಿ ಆಘಾತವಾಗಿ ಫಿರೋಜ್‌ಗೆ ತಮಟಗಾರ ಬೈಯ್ದಿದ್ದರು. ಇದೀಗ ಅದೇ ಆಡಿಯೋಗಳಿಂದಾಗಿ ಅಂಜುಮನ್ ಸಂಸ್ಥೆ ಅಧ್ಯಕ್ಷ ತಮಟಗಾರ ಹೆಸರಿಗೆ ಧಕ್ಕೆಯಾಗುತ್ತಿದೆ. ಅಷ್ಟೇ ಅಲ್ಲದೇ ತಮಟಗಾರ್ ಕುಟುಂಬಸ್ಥರಿಗೂ ಸಮಸ್ಯೆಯಾಗುತ್ತಿದೆ ಎಂದರು.

ಇಸ್ಲಾಯಿಲ್ ಹೆಸರು ದುರುಪಯೋಗಪಡಿಸಿಕೊಂಡು ಆಡಿಯೋ ವೈರಲ್ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಫೈರೋಜ್ ಹಾಗೂ ತಮಟಗಾರ್ ನಡುವೆ ಸಂಪರ್ಕವಿಲ್ಲ. ನಾಲ್ಕು ವರ್ಷಗಳಿಂದ ಇಬ್ಬರ ನಡುವೆ ಸಂಭಾಷಣೆಯೇ ನಡೆದಿಲ್ಲ. ಇದನ್ನು ಪೊಲೀಸ್ ಆಯುಕ್ತರಿಗೆ ಮನವರಿಕೆ ಮಾಡಿದ್ದೇವೆ. ಆಡಿಯೋಗಳನ್ನು ಸರಿಯಾಗಿ ತನಿಖೆ ಮಾಡಲಿ ಎಂದು ಚಿಂಚೋರೆ ಆಗ್ರಹಿಸಿದರು.

ಪಕ್ಷದಿಂದ ಉಚ್ಚಾಟಿಸಿ:


ಈ ಮಧ್ಯೆ ಕಾಂಗ್ರೆಸ್ ಯುವ ಮುಖಂಡ ಫೈರೋಜ್ ಕೊಲೆ ಪ್ರಕರಣದಲ್ಲಿ ಬಂಧನದ ಭೀತಿಯಲ್ಲಿರುವ ಇಸ್ಮಾಯಿಲ್‌ ತಮಟಗಾರ ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಬೇಕೆಂದು ಮುಖಂಡ ಅಬ್ದುಲ್‌ ದೇಸಾಯಿ ಹು-ಧಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. ಫೈರೋಜ್ ಕೊಲೆಯ ಹಿಂದೆ ತಮಟಗಾರ ಸಹೋದರರ ಶೇ. 100ರಷ್ಟು ಪಾತ್ರವಿದೆ. ನಿರಂತರವಾಗಿ ಪೋನ್ ಕಾಲ್ ಮೂಲಕ ‌ಫೈರೋಜ್ ಮತ್ತ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಹಾಕಿರುವ ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಜತೆಗೆ ಪಕ್ಷದ ಹಿರಿಯ ಮುಖಂಡರ ಬಗ್ಗೆ ಅಶ್ಲೀಲವಾಗಿ ತಮಟಗಾರ ಮಾತನಾಡಿದ್ದಾರೆ. ಹೀಗಾಗಿ ಇಸ್ಮಾಯಿಲ್ ತಮಟಗಾರ್, ಇಕ್ಬಾಲ್ ತಮಟಗಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ, ನ್ಯಾಯ ಕೊಡಿ ಎಂದು ಮನವಿ ಮಾಡಿದ್ದಾರೆ.

ಎಲ್ಲಿದ್ದಾರೆ ತಮಟಗಾರ?:

ಬಂಧನದ ಭೀತಿಯಲ್ಲಿರುವ ಇಸ್ಮಾಯಿಲ್‌ ತಮಟಗಾರ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ. ಹೈದರಾಬಾದ್‌, ಮುಂಬೈ, ಗೋವಾ ಸೇರಿದಂತೆ ವಿವಿಧೆಡೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದೀಗ ಥೈಲ್ಯಾಂಡ್‌ಗೆ ಹಾರಿದ್ದಾರೆ ಎಂದು ತಿಳಿದ್ದು, ಅವರ ಬೆನ್ನು ಬಿದ್ದು ಪೊಲೀಸರು ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ.