ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಹಬ್ಬ, ಹರಿ ದಿನಗಳು, ಜಾತ್ರೆ, ಉತ್ಸವಗಳು ಜನರನ್ನು ಒಗ್ಗೂಡಿಸಿ ಸಮಾಜದಲ್ಲಿ ಸಾಮರಸ್ಯ ಬೆಳೆಸುತ್ತವೆ ಎಂದು ಆಶಾಕಿರಣ ಅಂಧ ಮಕ್ಕಳ ಶಾಲೆ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೇಗೌಡ ಹೇಳಿದರು.

ತಾಲೂಕಿನ ಬೆಳವಾಡಿ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಮತ್ತು ಬಿಂದಿಗೆಮ್ಮದೇವಿಯವರ ಬಂಡಿ ಬಾನೋತ್ಸವ ಹಾಗೂ ಸಿಡಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಬ್ಬ ಹರಿದಿನಗಳು, ಜಾತ್ರೆ, ಉತ್ಸವಗಳಲ್ಲಿ ಎಲ್ಲರೂ ಒಗ್ಗೂಡಿ ಪಾಲ್ಗೊಳ್ಳುವುದರಿಂದ ಭಾವೈಕ್ಯತೆ ಸಾಧಿಸಲು ಸಾಧ್ಯವಾಗುತ್ತದೆ. ಪರಸ್ಪರ ವೈಷಮ್ಯ ಮರೆತು ಒಂದಾಗಿ ಬಾಳಲು ಸಹಕಾರಿಯಾಗುತ್ತದೆ. ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮನುಷ್ಯನ ವ್ಯಕ್ತಿತ್ವ ವಿಕಸಗೊಳಿಸುತ್ತದೆ. ನಾಗರಿಕತೆ ಕಲಿಸುತ್ತದೆ, ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುತ್ತದೆ, ಜಾನಪದ ನಮ್ಮ ಮೂಲ ಬೇರು, ನಮ್ಮ ಅಸ್ತಿತ್ವವಿರುವುದೇ ಜಾನಪದದಲ್ಲಿ ಎಂದ ಅವರು ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುವ ಜಾನಪದ ಕಳೆದುಕೊಂಡರೆ ಜಗತ್ತಿನೆದುರು ನಾವು ಒಂಟಿಯಾಗಿ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಭಾರತೀಯ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಜಾನಪದದ ಕೊಡುಗೆ ಅಪಾರ. ಜಗತ್ತಿನ ಎಲ್ಲಾ ಕಲೆಗಳಿಗೂ ಜಾನಪದವೇ ತಾಯಿ ಬೇರಾಗಿದೆ, ಗ್ರಾಮೀಣರು ಮತ್ತು ಮಹಿಳೆಯರಿಂದಾಗಿ ಜಾನಪದ ಆಧುನಿಕತೆ ಅಬ್ಬರದ ನಡುವೆಯೂ ಉಳಿದು ಬಂದಿದೆ. ಮುಂದೂ ಸಹ ಅವರಿಂದಲೇ ಉಳಿಯಬೇಕಾಗಿದೆ ಎಂದರು.


ಗ್ರಾಮದ ಹಿರಿಯ ಜಾನಪದ ಕಲಾವಿದರನ್ನು ಈ ವೇಳೆ ಗೌರವಿಸಲಾಯಿತು. ಶ್ರೀ ಬಸವೇಶ್ವರ ಭಜನಾ ಮಂಡಳಿ ಅಧ್ಯಕ್ಷ ಪರಮೇಶ್ವರಪ್ಪ, ಗ್ರಾಪಂ ಅಧ್ಯಕ್ಷೆ ಸಿರಾಜ್ ಉನ್ನೀಸಾ, ಮುಖಂಡರಾದ ಶಂಕರೇಗೌಡ, ಮರುಳಸಿದ್ದಯ್ಯ, ಬೆಳವಾಡಿ ಪ್ರಕಾಶ್, ಶಂಕರಯ್ಯ ಮೊದಲಾದವರಿದ್ದರು.