ಕನ್ನಡಪ್ರಭ ವಾರ್ತೆ ಸವದತ್ತಿ ಜಾತ್ರೆಗಳು ಪ್ರತಿಯೊಬ್ಬರಲ್ಲಿ ಸಾಮರಸ್ಯ ಮೂಡಿಸಿ, ಏಕತೆಯನ್ನು ಸೃಷ್ಟಿಸುತ್ತಿದ್ದು, ಇದೇ ಮನಸ್ಥಿತಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಮುಂದುವರೆಸಿಕೊಂಡು ಹೋದರೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮೆದಿ ಕಂಡುಕೊಳ್ಳಬಹುದಾಗಿದೆ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಜಾತ್ರೆಗಳು ಪ್ರತಿಯೊಬ್ಬರಲ್ಲಿ ಸಾಮರಸ್ಯ ಮೂಡಿಸಿ, ಏಕತೆಯನ್ನು ಸೃಷ್ಟಿಸುತ್ತಿದ್ದು, ಇದೇ ಮನಸ್ಥಿತಿಯನ್ನು ಪ್ರತಿಯೊಬ್ಬರು ಜೀವನದಲ್ಲಿ ಮುಂದುವರೆಸಿಕೊಂಡು ಹೋದರೆ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮೆದಿ ಕಂಡುಕೊಳ್ಳಬಹುದಾಗಿದೆ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು.

ಪಟ್ಟಣದ ಗ್ರಾಮದೇವಿಯ ಕಾಡಸಿದ್ದೇಶ್ವರ ವೇದಿಕೆಯ ಮೇಲೆ ನಡೆದ ಧಾರ್ಮಿಕ ಸಭೆ ಮತ್ತು ಸಾರ್ವಜನಿಕ ಸಭೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯ ವ್ಯವಸ್ಥೆಯೇ ಬೇರೆಯಾಗಿದ್ದು, ಸಮಾಜದಲ್ಲಿ ನಡೆಯುವ ಉತ್ಸವಗಳು ಮತ್ತು ಸಂಭ್ರಮಗಳೇ ಬೇರೆಯಾಗಿವೆ. ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿ ಕಲಿಸುವ ಜೊತೆಗೆ ಸನಾತನ ಧರ್ಮವನ್ನು ಉಳಿಸುವ ಪ್ರಯತ್ನವನ್ನು ಮಾಡಬೇಕಿದೆ ಎಂದರು.ಯಾವುದೇ ಜಾತಿ ಧರ್ಮವಿರಲಿ ಅವರವರ ಪದ್ದತಿಯಂತಿ ದೇವರನ್ನು ಸ್ಮರಿಸುವ ಜೊತೆಗೆ ಧರ್ಮ ಪರಿಪಾಲನೆ ಮಾಡಬೇಕೆಂದರು. ತಾಯಂದಿರು ತಮ್ಮ ಮಕ್ಕಳಿಗೆ ನಮ್ಮ ಆಚರಣೆಗಳ ಬಗ್ಗೆ ತಿಳಿಸುವ ಮೂಲಕ ಜಾತ್ರೆಯ ಮಹೋತ್ಸವದ ಅರಿವು ಮೂಡಿಸಬೇಕೆಂದರು.

ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ತಾಯಿ ಸ್ವರೂಪದ ದೇವಿಗೆ ವಿಶೇಷ ಸ್ಥಾನಮಾನವಿದ್ದು, ಗುಡ್ಡದ ಯಲ್ಲಮ್ಮನ ಪುಣ್ಯ ಕ್ಷೇತ್ರ ಸವದತ್ತಿಯಲ್ಲಿ ಅನೇಕ ಪುಣ್ಯದ ಕಾರ್ಯಗಳು ನಡೆದು ಬಂದಿದ್ದು, ಅದರಲ್ಲಿ ಗ್ರಾಮದೇವಿ ಜಾತ್ರೆ ಕ್ಷೇತ್ರಕ್ಕೆ ಇನ್ನಷ್ಟು ಇಂಬು ನೀಡಿದೆ. ಸಂಸ್ಕಾರವಿಲ್ಲದ ಸಮಾಜದಿಂದ ರಾಷ್ಟ್ರಕ್ಕೆ ಒಳಿತಾಗುವುದಿಲ್ಲ. ಭಕ್ತಿಪರವಾದ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಧಾರವಾಡ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಮಾತನಾಡಿ, ಮಾನವ ಜನ್ಮವು ಸಿಕ್ಕಿದ್ದು ನಮ್ಮ ಪುಣ್ಯದ ಫಲ. ಈ ಪಾವನ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುತ್ತ ನಾವು ಸಾಗಬೇಕಿದೆ. ಜಾತ್ರೆಗಳು ನೆಪಮಾತ್ರವಾದರೂ ನಮ್ಮ ಧರ್ಮ ಪರಂಪರೆಗಳನ್ನು ಉಳಿಸಿ ಬೆಳೆಸಿಕೊಂಡು ಹೋದಲ್ಲಿ ಮಾತ್ರ ನಮ್ಮ ಮಾನವ ಜನ್ಮ ಸಾರ್ಥಕವಾಗಲಿದೆ ಎಂದರು.

ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ದೇವಿ ಮಹಾತ್ಮೆ ಚರಿತಾಮೃತ ಕುರಿತು ಪ್ರವಚನ ನೀಡಿದರು. ಸುಳ್ಳ ಪಂಚಗೃ ಹಿರೇಮಠದ ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ, ದೊಡವಾಡದ ಜಡೆ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಪ್ರೀತಿ ಕೋರೆ(ದೊಡವಾಡ), ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸಗೌಡ ಪಾಟೀಲ, ಸುಭಾಸಸಿಂಗ್ ರಜಪುತ, ಡಾ.ಎನ್.ಸಿ.ಬೆಂಡಿಗೇರಿ, ಪ್ರಭು ಪ್ರಭುನವರ, ಪ್ರವೀಣ ಪಟ್ಟಣಶೆಟ್ಟಿ, ಮದನಲಾಲ ಚೋಪ್ರಾ ಮತ್ತು ಇತರರು ಉಪಸ್ಥಿತರಿದ್ದರು. ಡಾ.ವೈ.ಎಂ.ಯಾಕೊಳ್ಳಿ ಸ್ವಾಗತಿಸಿದರು. ಶಿವಾನಂದ ತಾರೀಹಾಳ, ವಿಜಯ ಹಿರೇಮಠ ನಿರೂಪಿಸಿದರು. ಹುಸೇನ ನದಾಫ ವಂದಿಸಿದರು.

ರಾತ್ರಿ ದಯಾನಂದ ಬೀಳಗಿ ಹಾಗೂ ಹರೀಶ ಸಂಗಡಿಗರಿಂದ ಕುವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನಗೊಂಡಿತು.

-----

ಎರಡನೇ ದಿನ ಪ್ರಮುಖ ರೈತರ ಮನೆಯ ಉಡಿ ತುಂಬುವ ಕಾರ್ಯಕ್ರಮದ ನಂತರ ಮೂರನೇ ದಿನ ಗ್ರಾಮದೇವಿಯ ಪಲ್ಲಕ್ಕಿಗಳು ಪಟ್ಟಣದ ವಿವಿಧ ಓಣಿಗಳಲ್ಲಿ ಸಂಚರಿಸಿ ಆಯಾ ಓಣಿಗಳ ಪ್ರಮುಖ ಕಟ್ಟೆಗಳಿಗೆ ತಲುಪಿ ಆರತಿಯೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಈ ಮೆರವಣಿಗೆಯಲ್ಲಿ ಸಹಸ್ರಾರು ಜನಸ್ತೋಮ ಸೇರಿ ದೇವಿಯ ಪಲ್ಲಕ್ಕಿಯೊಂದಿಗೆ ನಗರದಲ್ಲಿ ಸಂಚರಿಸಿ ರಾತ್ರಿ ದೇವಿಯರ ಪಲ್ಲಕಿಗಳನ್ನು ದೇವಿಕಟ್ಟಿಯ ಮಂಟಪಕ್ಕೆ ಸೇರಿಲಾಯಿತು.