ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಕಾರ್ಮಿಕರಲ್ಲದವರಿಗೆ ಇಲಾಖೆಯ ಸೌಲಭ್ಯ ಕಲ್ಪಿಸುವ ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿದ್ದು, ಗದಗ ಜಿಲ್ಲೆಯಲ್ಲಿ 3532 ನಕಲಿ ಕಾರ್ಮಿಕರ ಕಾರ್ಡ್‌ಗಳು ಪತ್ತೆಯಾಗಿವೆ!ಸದ್ಯ ಅವುಗಳನ್ನು ಕಾರ್ಮಿಕ ಇಲಾಖೆ ಅಮಾನತ್ತಿನಲ್ಲಿಟ್ಟಿದೆ. ಸರ್ಕಾರ ಕಾರ್ಮಿಕರಿಗೆ ಹಲವಾರು ಹೊಸ ಯೋಜನೆಗಳನ್ನು ಘೋಷಣೆ ಮಾಡಿರುವುದು, ಸೌಲಭ್ಯ ಹೆಚ್ಚಿಸಿರುವುದೇ ಕಾರ್ಮಿಕರ ನಕಲಿ ಕಾರ್ಡ್‌ಗಳು ಸೃಷ್ಟಿಯಾಗಲು ಪ್ರಮುಖ ಕಾರಣವಾಗಿದೆ.
ಇದಕ್ಕೆ ಇಲಾಖೆಯಲ್ಲಿ ಹೊರ ಗುತ್ತಿಗೆ ಮೇಲೆ ಕೆಲಸ ಮಾಡುವ ಕೆಲ ಸಿಬ್ಬಂದಿಗಳು ಸಾಥ್ ನೀಡುತ್ತಿದ್ದು, ಅವರಿಗೆ ಇಲಾಖೆಯ ಇನ್ನೂ ಕೆಲವರು ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುವ ದೂರೂ ಇದೆ.ನಕಲಿ ಕಾರ್ಡ ಪತ್ತೆ: ಜಿಲ್ಲೆಯ 6 ಕಾರ್ಮಿಕ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 111615 ಕಾರ್ಮಿಕರ ಕಾರ್ಡ್‌ಗಳಿವೆ. ಇವುಗಳಲ್ಲಿ ಸಾವಿರಾರು ಜನ ಅರ್ಹ ಕಾರ್ಮಿಕರಿದ್ದಾರೆ. ಇವರ ಮಧ್ಯೆಯೇ ಕೆಲವು ಸಂಘಟನೆಗಳು ಮತ್ತು ಅಧಿಕಾರಿಗಳ ಪ್ರಭಾವದಿಂದ ಹಲವಾರು ಜನರು ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಿದ್ದು, ಸದ್ಯ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ 3532 ಕಾರ್ಮಿಕರ ನಕಲಿ ಕಾರ್ಡ್‌ಗಳು ಪತ್ತೆಯಾಗಿದ್ದು, ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಕಾರ್ಮಿಕರಲ್ಲದವರಿಗೆ ಕಾರ್ಡ್‌ಗಳು ವಿತರಣೆಯಾಗಿವೆ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ರದ್ದತಿಗೆ ಕ್ರಮ: ರಾಜ್ಯದಲ್ಲಿ ಕಾರ್ಮಿಕರ ಸಂಖ್ಯೆ ಮಿತಿಮೀರಿ ಸರ್ಕಾರಿ ಸೌಲಭ್ಯಗಳು ಅನರ್ಹರ ಪಾಲಾಗುತ್ತಿವೆ ಎನ್ನುವ ದೂರುಗಳು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಾರ್ಮಿಕರ ನಕಲಿ ಕಾರ್ಡ್‌ಗಳ ಪರಿಶೀಲನೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ, ಇಲಾಖೆ ಅಧಿಕಾರಿಗಳು ಪ್ರತಿಯೊಂದು ನೊಂದಾಯಿತ ಕಾರ್ಡ್‌ಗಳ ಕುರಿತು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿದ ವೇಳೆಯಲ್ಲಿ ಅಕ್ರಮ ಬಯಲಾಗಿದೆ.ಕೋವಿಡ್ ನಂತರ ಏರಿಕೆ: ಜಿಲ್ಲೆಯಲ್ಲಿ ನೋಂದಾಯಿತ ಕಾರ್ಮಿಕರ ಸಂಖ್ಯೆ 45 ಸಾವಿರವನ್ನು ದಾಟಿರಲಿಲ್ಲ. ಆದರೆ ಕೋವಿಡ್ ಬಂದ ನಂತರ ಕಾರ್ಡ್‌ಗಳ ಸಂಖ್ಯೆಯಲ್ಲಿ ದುಪ್ಪಟ್ಟಾಗಿವೆ. ಕೋವಿಡ್ ವೇಳೆಯಲ್ಲಿ ಕಾರ್ಮಿಕ ಇಲಾಖೆ ನೀಡಿದ ಆಹಾರ ಕಿಟ್ ಮತ್ತು ಕಾರ್ಮಿಕರ ಖಾತೆಗೆ 3 ಸಾವಿರ ಪ್ರೋತ್ಸಾಹ ಧನಕ್ಕಾಗಿ ಜನರು ಮುಗಿಬಿದ್ದರು. ಪ್ರಸ್ತುತ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿಯೂ ಕಾರ್ಮಿಕ ಕಾರ್ಡ್‌ಗಳನ್ನು ಮಾಡಿಕೊಡುವ ಏಜೆಂಟರೇ ಹುಟ್ಟಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇದ್ದಾರೆ.
108083 ಜನ ಅರ್ಹರೇ ?: ಸದ್ಯ ಜಿಲ್ಲೆಯಾದ್ಯಂತ ನಡೆದಿರುವ ಸಮೀಕ್ಷೆಯ ವೇಳೆಯಲ್ಲಿ ಜಿಲ್ಲೆಯಲ್ಲಿರುವ 111615 ಕಾರ್ಮಿಕರ ಕಾರ್ಡಗಳಲ್ಲಿ 3532 ನಕಲಿ ಎಂದು ಪತ್ತೆಯಾಗಿದೆ. ಹಾಗದರೆ ಬಾಕಿ ಉಳಿದಿರುವ 108083 ಕಾರ್ಮಿಕರು ಅರ್ಹರೇ ? ಎನ್ನುವ ಬಲವಾದ ಪ್ರಶ್ನೆ ಎದುರಾಗುತ್ತದೆ. ವಾಸ್ತವದಲ್ಲಿ ಗದಗ ಜಿಲ್ಲೆಯಲ್ಲಿ ಇಷ್ಟೊಂದು ಸಂಖ್ಯೆಯ ಕಾರ್ಮಿಕರೇ ಇಲ್ಲ, ಜಿಲ್ಲೆಯ ಬಹುತೇಕ ದುಡಿವ ವರ್ಗವೆಲ್ಲಾ ಪಕ್ಕದ ಗೋವಾ, ಮಂಗಳೂರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯಿಸಿರುತ್ತಾರೆ. ಅವರೆಲ್ಲಾ ಅಲ್ಲಿನ ಕಾಯಂ ನಿವಾಸಿಗಳಾಗಿದ್ದು, ಗದಗ ಜಿಲ್ಲೆಯಲ್ಲಿ ಕೆಲವೇ ತಿಂಗಳುಗಳು ಮಾತ್ರ ಇರುತ್ತಾರೆ ಎನ್ನುವುದು ವಾಸ್ತವ.ರಾಜಕೀಯ ಒತ್ತಡ: ಜಿಲ್ಲೆಯಲ್ಲಿ ಕಾರ್ಮಿಕರ ನಕಲಿ ಕಾರ್ಡ್ ಪತ್ತೆ ಮಾಡುವ ತನಿಖೆ ವೇಳೆಯಲ್ಲಿ, ತನಿಖೆಯಾದ ನಂತರ, ನಕಲಿ ಎಂದು ಪತ್ತೆಯಾದ ಕಾರ್ಡ್‌ಗಳನ್ನು ಮರು ಸೇರ್ಪಡೆ ಮಾಡಲು, ಇನ್ನೂ ಹೆಚ್ಚಿನ ಸಂಖ್ಯೆಯ ಕಾರ್ಮಿಕ ಕಾರ್ಡ್‌ಗಳನ್ನು ಮಾಡಿಕೊಡಬೇಕು. ಅವರ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರಿಗೆ ಸೌಲಭ್ಯ ಸಿಗಬೇಕು. ನೀವೇನು ನಿಮ್ಮ ಮನೆಯಿಂದ ಕೊಡುತ್ತೀರಾ? ನಮ್ಮ ಸರ್ಕಾರ ಕೊಡುತ್ತದೆ. ನಾವು ಹೇಳಿದವರನ್ನೆಲ್ಲಾ ಕಾರ್ಮಿಕರನ್ನಾಗಿ ಮಾಡಿ ಎಂದು ನಿತ್ಯವೂ ರಾಜಕೀಯ ಪಕ್ಷಗಳ ದೊಡ್ಡ ದೊಡ್ಡ ನಾಯಕರೇ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರಂತೆ.
ಕಾರ್ಮಿಕ ಮಂಡಳಿಯ ವೆಬ್ಸೈಟ್ ನಲ್ಲಿ ಅರ್ಹ ಮತ್ತು ಅನರ್ಹ ಕಾರ್ಮಿಕರ ಪಟ್ಟಿಯನ್ನು ಪ್ರದರ್ಶಿಸಲಾಗುವುದು. ಇದನ್ನು ಪರಿಶೀಲಿಸಿ ಅದಕ್ಕೆ ಇಲಾಖೆ ಸೂಚಿಸಿದ ಅಗತ್ಯ ದಾಖಲೆಗಳನ್ನು ಕೂಡಲೇ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಮೇಲ್ಮನವಿ ಪ್ರಾಧಿಕಾರದ ಸೂಚನೆಯಂತೆ ಮುಂದಿನ ಕ್ರಮ ಜರುಗಿಸಲಾಗುವುದು. ಜಿಲ್ಲಾ ಕಾರ್ಮಿಕ ಅಧಿಕಾರಿ ಭೀಮರಾವ್ ಜಾಧವ ಹೇಳಿದರು.