ಕುಶಾಲನಗರ: ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ

| Published : Feb 29 2024, 02:02 AM IST

ಕುಶಾಲನಗರ: ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕುಶಾಲನಗರದ ಸಮೀಪ ಹಾರಂಗಿ ಅಣೆಕಟ್ಟು ಆವರಣದಲ್ಲಿ ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜನ್ಮ ಶತಮಾನೋತ್ಸವ ಬುಧವಾರ ನಡೆಯಿತು. ವೀರೇಂದ್ರ ಪಾಟೀಲ್‌ ಪುತ್ರ, ಮಾಜಿ ಶಾಸಕ ಕೈಲಾಸ್ ನಾಥ್ ವಿ. ಪಾಟೀಲ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರಅಣೆಕಟ್ಟು, ಜಲಾಶಯಗಳನ್ನು ನಿರ್ಮಿಸಿದ ಸಂದರ್ಭ ಮುಳುಗಡೆಯಾಗಿ ಭೂಮಿ ಕಳೆದುಕೊಂಡ ಭೂಮಾಲೀಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ರೂಪಿಸಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಪುತ್ರ ಹಾಗೂ ಮಾಜಿ ಶಾಸಕ ಕೈಲಾಸ್ ನಾಥ್ ವಿ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಸಮೀಪ ಹಾರಂಗಿ ಅಣೆಕಟ್ಟು ಆವರಣದಲ್ಲಿ ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗದ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತಾಪಿ ವರ್ಗ ಆರ್ಥಿಕವಾಗಿ ಸದೃಢರಾಗಬೇಕಾದಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ ಎಂದು ಕೈಲಾಸ್‌ನಾಥ್ ಹೇಳಿದರು.

ರಾಜ್ಯದಲ್ಲಿ ಜಲಾಶಯ ಅಣೆಕಟ್ಟುಗಳ ನಿರ್ಮಾಣ ಸಂದರ್ಭ ಭೂಮಿ ಕಳೆದುಕೊಂಡ ರೈತರ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದರು. ಈ ಬಗ್ಗೆ ಹಾಲಿ ಮತ್ತು ಮಾಜಿ ಶಾಸಕರು ಸರ್ಕಾರದ ಗಮನ ಸೆಳೆಯಬೇಕಾಗಿದೆ ಎಂದರು.ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ರಾಜ್ಯದಲ್ಲಿ ವಿವಿಧಡೆ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು ಅದರಲ್ಲಿ ಹಾರಂಗಿ ಕೂಡ ಒಂದಾಗಿದೆ ಎಂದು ಅವರು ನೆನಪಿಸಿದರು.ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಚ್.ಸಿ. ಬಸವರಾಜ್ ಜನರಲ್ಲಿ ಸ್ಮರಣೆ ಸಂಸ್ಕೃತಿ ಅಗತ್ಯವಾಗಿದೆ ಎಂದರಲ್ಲದೆ ಯುವ ಪೀಳಿಗೆ ಇತಿಹಾಸದ ಬಗ್ಗೆ ಗಮನಹರಿಸಬೇಕಾಗಿದೆ. ತ್ಯಾಗ ಬಲಿದಾನ ಮೂಲಕ ಸಾಮಾಜಿಕ ಕೆಲಸಗಳನ್ನು ನಿರ್ವಹಿಸಿದ ಚೇತನಗಳ ಬಗ್ಗೆ ಸ್ಮರಿಸುವುದು ಅಗತ್ಯವಾಗಿದೆ ಎಂದರು.ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರ ಜನ್ಮದಿನೋತ್ಸವ ಲಾಂಛನ ಬಿಡುಗಡೆ ಮಾಡಿದ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ನೀರಾವರಿ ಮೂಲಕ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರಲ್ಲದೆ ಪ್ರತಿಯೊಬ್ಬರೂ ಪ್ರಕೃತಿ ಬಗ್ಗೆ ಕಾಳಜಿ ವಹಿಸಬೇಕು. ರೈತಾಪಿ ವರ್ಗಕ್ಕೆ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿದಲ್ಲಿ ರಾಜ್ಯ ರಾಷ್ಟ್ರದ ಬೆಳವಣಿಗೆ ಅತಿ ಶೀಘ್ರ ಕಾಣಬಹುದು ಎಂದರು.

ಜಿಲ್ಲೆಯಲ್ಲಿ ಹಾರಂಗಿ ಅಣೆಕಟ್ಟು ನಿರ್ಮಾಣ ಸಂದರ್ಭ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಅವರ ಕಾರ್ಯ ಯೋಜನೆಗಳ ಬಗ್ಗೆ ಅವರು ಶ್ಲಾಘಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್, ನಾಡು ನುಡಿ ನೆಲ ಜಲ ಸಂರಕ್ಷಣೆಗೆ ಹೋರಾಟ ಮಾಡಿದ ಗಣ್ಯರ ಸ್ಮರಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.

ಹಾರಂಗಿ ನೀರು ಬಳಕೆದಾರರ ಮಹಾಮಂಡಲ ಅಧ್ಯಕ್ಷ ಚೌಡೇಗೌಡ, ಕೂಡು ಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ ನಾಯಕ್ ಮಾತನಾಡಿದರು. ಮುಖ್ಯ ಅತಿಥಿಗಳು ಹಾಗೂ ಮಾಜಿ ಶಾಸಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಹಾರಂಗಿ ಯೋಜನಾ ವೃತ್ತದ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ , ಕಾಂಗ್ರೆಸ್ ಪ್ರಮುಖರಾದ ಕೆ.ಪಿ. ಚಂದ್ರಕಲಾ, ವಿ.ಪಿ. ಶಶಿಧರ್, ಪಾಟೀಲ್ ಮೊಮ್ಮಗಳು ಶೀಲಾ ಸಂಜಯ್ , ಶೈಲಾ ಅಪ್ಪಚ್ಚುರಂಜನ್ , ಬೆಳೆಗಾರರಾದ ಎಸ್.ಬಿ. ಜಯರಾಜ್ , ಬಳಗದ ಪ್ರಮುಖರು, ನೀರು ಬಳಕೆದಾರರ ಸದಸ್ಯರು ಇದ್ದರು.ಕುಡೆಕಲ್ ಗಣೇಶ್ ಪ್ರಾರ್ಥಿಸಿದರು. ಸಿರಿ ಬಳಗದ ಪ್ರಮುಖ ಪಾಂಡುರಂಗ ಸ್ವಾಗತಿಸಿದರು. ಉಪನ್ಯಾಸಕ ಹಂಡ್ರಂಗಿ ನಾಗರಾಜ್ ನಿರೂಪಿಸಿದರು.