ಸಾರಾಂಶ
ತೇಗೂರ ಗ್ರಾಮದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಮಂಜುನಾಥ ಇಳಿಗೇರ ಎಂಬುವರ ಕ್ಲಿನಿಕ್ ಮೇಲೆ ದಾಳಿ ಮಾಡಿ, ಕೆಪಿಎಂಇ ಕಾಯ್ದೆ ಸೆಕ್ಷನ್ 19ರ ಪ್ರಕಾರ ಎಫ್‌ಐಆರ್ ದಾಖಲಿಸಲಾಗಿದೆ.
ಧಾರವಾಡ:
ಜಿಲ್ಲೆಯಲ್ಲೂ ನಕಲಿ ವೈದ್ಯರು ಮತ್ತು ಅನಧಿಕೃತ ಆಸ್ಪತ್ರೆಗಳಿವೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂತಹ ಆಸ್ಪತ್ರೆಗಳ ಮೇಲೆ ತಪಾಸಣೆ ಹಾಗೂ ಕಾನೂನು ಕ್ರಮ ಆರಂಭಿಸಿರುವ ಜಿಲ್ಲಾ ಆರೋಗ್ಯ ಇಲಾಖೆಯು ತಾಲೂಕಿನ ತೇಗೂರ ಗ್ರಾಮದಲ್ಲಿ ನಕಲಿ ವೈದ್ಯನನ್ನು ಪತ್ತೆ ಹಚ್ವಿ ಆತನ ವಿರುದ್ಧ ಪ್ರಕರಣ ದಾಖಲಿಸಿದೆ.ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್. ನೇತೃತ್ವದಲ್ಲಿ ಬುಧವಾರ ಸಂಜೆ ಆರೋಗ್ಯ ಇಲಾಖೆ ಸಿಬ್ಬಂದಿ, ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಮತ್ತು ವ್ಯಾಸಂಗ ಮಾಡದೇ, ತೇಗೂರ ಗ್ರಾಮದಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಮಂಜುನಾಥ ಇಳಿಗೇರ ಎಂಬುವರ ಕ್ಲಿನಿಕ್ ಮೇಲೆ ದಾಳಿ ಮಾಡಿ, ಕೆಪಿಎಂಇ ಕಾಯ್ದೆ ಸೆಕ್ಷನ್ 19ರ ಪ್ರಕಾರ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಈ ನಕಲಿ ವೈದ್ಯ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಪೂರೈಸದೇ ಅಲೋಪಥಿಕ್ ಔಷಧ ಉಪಯೋಗಿಸುತ್ತಿದ್ದು, ಸಲಾಯಿನ್ ಹಚ್ಚುತ್ತಿರುವುದು ಕಂಡು ಬಂದಿದೆ. ಆದ್ದರಿಂದ ಕ್ಲಿನಿಕ್‌ನ್ನು ಸೀಜ್ ಮಾಡಲಾಗಿದೆ. ಇದೇ ರೀತಿ ಜಿಲ್ಲೆಯಲ್ಲಿ ಅರ್ಹತೆ ಇಲ್ಲದೇ ನಕಲಿ ವೈದ್ಯಕೀಯ ವೃತ್ತಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿರುವ ಡಾ. ಶಶಿ ಪಾಟೀಲ, ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಚಿಕಿತ್ಸಾ ವಿವರಗಳನ್ನು ನೀಡಿ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕೆಂದು ಸೂಚನೆ ನೀಡಿದರು.