ತರೀಕೆರೆ: ತಾಲೂಕಿನ ಮುಡುಗೋಡು ಗ್ರಾಮದಲ್ಲಿರುವ ಸಾರ್ವಜನಿಕ ತಂಗುದಾಣ ಮತ್ತು ಸಂತೇಮೈದಾನ ಜಾಗಕ್ಕೆ ನಕಲಿ ದಾಖಲೆ ಸೃಷ್ಠಿಸಿ, ಖಾಸಗಿ ವ್ಯಕ್ತಿಗಳಿಗೆ ಭಾರೀ ಮೊತ್ತದ 2 ನಿವೇಶನಗಳನ್ನು ಖಾತೆ ಮಾಡಿರುವ ದೊಡ್ಡ ಪ್ರಮಾಣದ ಹಗರಣ ನಡೆದಿದೆ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಆರೋಪಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಾಪಂ ಅಧಿಕಾರಿಗಳು, ಆಡಳಿತಾಧಿಕಾರಿ ಮತ್ತು ಗ್ರಾಪಂ ಅಧಿಕಾರಿಗಳು ಮತ್ತು ಶಾಸಕರ ಹಿಂಬಾಲಕರು ಸೇರಿ ಈ ಅವ್ಯವಹಾರ ನಡೆಸಲಾಗಿದೆ. 250, 300 ಅಡಿ ಜಾಗ ಗ್ರಾಪಂ ಹೆಸರಿಗೆ ಖಾತೆ ಹೊಂದಿದ ಆಸ್ತಿ. ಇದರಲ್ಲಿ ಸುಮಾರು ಎರಡೂವರೆ ಕೋಟಿ ಬೆಲೆ ಬಾಳುವ 15x80, ಮತ್ತು 15x80 ಅಳತೆ ಎರಡು ನಿವೇಶನ ಖಾತೆ ಮಾಡಿರುವ ಅವ್ಯವಹಾರ ಮೇಲ್ನೋಟಕ್ಕೆ ತಿಳಿಯುತ್ತಿದೆ.ತಹಸೀಲ್ದಾರ್ ಆದೇಶದ ಹಕ್ಕುಪತ್ರ ನಕಲು ಮಾಡಲಾಗಿದೆ. ಕಳೆದ 35 ವರ್ಷಗಳಿಂದ ಸಂತೇ ಮೈದಾನ ಎಂದು ನಮೂದಾಗಿದ್ದ ಜಾಗದಲ್ಲಿ ಖಾತೆ ಮಾಡಿ ಲಕ್ಷಾಂತರ ಲಂಚ ಪಡೆಯಲಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕ್ಷೇತ್ರದಲ್ಲಿ ಶಾಸಕರು ನಾಪತ್ತೆಯಾಗಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಶಾಸಕರ ಬದಲಿಗೆ ಅವರ ಕುಟುಂಬದವರು ಹಾಜರಾಗುತ್ತಿದ್ದು, ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸುತ್ತಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಸಕರು ಯಾರು ಎಂಬುದಕ್ಕೆ ಸ್ಪಷ್ಟನೆ ನೀಡಬೇಕಿದೆ ಎಂದರು.
ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳಾ ಸಂಘದ ಒಕ್ಕೂಟಗಳಿಗೆ ಕೇಂದ್ರ ದಿಂದ ಬಿಡುಗಡೆಯಾದ ಅನುದಾನ ದುರ್ಬಳಕೆ ಆಗಿದೆ. ಶಾಸಕರ ಕುಟುಂಬದವರು ಒಕ್ಕೂಟಗಳಿಗೆ ಹೋಗಿ ಒತ್ತಡ ಹಾಕಿ ಸಂಘದವರಿಂದ ಬಲವಂತವಾಗಿ ಚೆಕ್ ಪಡೆದಿದ್ದಾರೆ ಎಂಬ ಮಾಹಿತಿಯಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಗುಮಾನಿಯಿದೆ ಎಂದು ಹೇಳಿದರು.
ಮಂಡಲ ಬಿಜೆಪಿ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ.ಎಲ್.ರಮೇಶ್, ಕೆ.ಆರ್. ಆನಂದಪ್ಪ, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಶಶಿಕುಮಾರ್, ಗುಳ್ಳದಮನೆ ವಸಂತ ಕುಮಾರ್, ರಾಜೇಶ್ವರಿ ರಾಜಶೇಖರ್, ರೇಣುಕಪ್ಪ ಧನಪಾಲ್, ಬೇಲೇನಹಳ್ಳಿ ಸೋಮಶೇಖರ್, ಶಿವಮೂರ್ತಿ ಹಾಜರಿದ್ದರು.
-14ಕೆಟಿಆರ್.ಕೆ.8ಃ
ಮಾಜಿ ಶಾಸಕ ಡಿ.ಎಸ್.ಸುರೇಶ್.