ಸಾರಾಂಶ
ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸಲಹೆ
ಕನ್ನಡಪ್ರಭ ವಾರ್ತೆ ಆಲೂರುಯೂಟ್ಯೂಬ್ ಚಾನೆಲ್‌ಗಳ ಮೂಲಕ ಹುಟ್ಟಿಕೊಂಡಿರುವ ನಕಲಿ ಪತ್ರಕರ್ತರ ಕಡಿವಾಣಕ್ಕೆ ಕ್ರಮದ ಅವಶ್ಯಕತೆಯಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಹೇಳಿದರು.
ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಇದೇ ಮೊದಲ ಬಾರಿಗೆ ಶನಿವಾರ ಏರ್ಪಡಿಸಿದ್ದ ಕೆಸರುಗದ್ದೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿರುವ ಮಾಹಿತಿ ಇದ್ದು, ಯೂಟ್ಯೂಬ್ ಚಾನೆಲ್ ಮೂಲಕ ಹುಟ್ಟಿಕೊಂಡಿರುವ ಅನಧಿಕೃತ ಪತ್ರಕರ್ತರ ಕಡಿವಾಣಕ್ಕೆ ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಪತ್ರಕರ್ತರ ಸಂಘದ ಚಟುವಟಿಕೆಗಳು ವಿಶೇಷವಾಗಿರುತ್ತವೆ. ಜಿಲ್ಲೆ ಹಾಗೂ ತಾಲೂಕು ಪತ್ರಕರ್ತರು ನಿಷ್ಪಕ್ಷಪಾತ ವರದಿ ಮೂಲಕ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತರುತ್ತಾರೆ. ಅಧಿಕಾರಿ ಮತ್ತು ಪತ್ರಕರ್ತರ ಬಾಂಧವ್ಯ ಚೆನ್ನಾಗಿದೆ. ಕೆಸರುಗದ್ದೆ ಓಟ ವಿಭಿನ್ನವಾದುದು. ಸದಾ ಒತ್ತಡದಲ್ಲಿರುವ ಪತ್ರಕರ್ತರು ಒಗ್ಗಟ್ಟಾಗಿ ದೇಶೀಯ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಶುಭ ಹಾರೈಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ ಮಾತನಾಡಿ, ಪುರಾತನ ಕಾಲದ ಆಟೋಟಗಳು ಮರುಕಳಿಸುತ್ತಿರುವುದು ಆಶಾದಾಯಕ. ಜಿಲ್ಲೆಯಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದು ಇದು ಮೊದಲಾಗಿದ್ದರೂ, ಸೋಲು ಗೆಲುವಿಗಿಂತ ಭಾಗವಹಿಸುವುದು ಪ್ರಮುಖವಾಗಬೇಕು. ಪತ್ರಕರ್ತರು ಪೊಲೀಸರಂತೆ ಸದಾ ಒತ್ತಡದಲ್ಲಿ ಜೀವನ ನಡೆಸುತ್ತಾರೆ. ತಮ್ಮ ದೈನಂದಿನ ಚಟುವಟಿಕೆ ಮರೆತು ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕವಾಗಿದೆ ಎಂದು ಹೇಳಿದರು.ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ವಿ.ಶಿವಾನಂದ ಮಾತನಾಡಿ, ಜಿಲ್ಲಾ ಪತ್ರಕರ್ತರ ಸಂಘ ರಾಜ್ಯದಲ್ಲಿ ವಿಭಿನ್ನವಾಗಿದೆ. ಪ್ರತಿದಿನ ಯಾವುದಾದರೂ ಚಟುವಟಿಕೆಯನ್ನು ಮೈಗೂಡಿಸಿಕೊಂಡು ಸಾಗುತ್ತಿದೆ. ಕೆಲ ಯೂಟ್ಯೂಬ್ ಪತ್ರಕರ್ತರು ಅವಹೇಳನಕಾರಿ ಸುದ್ದಿ ಬಿತ್ತರ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಎಚ್.ಬಿ.ಮದನಗೌಡ, ಜಿ.ಪ್ರಕಾಶ್, ಮಂಜುನಾಥ್, ರವಿ ನಾಕಲಗೂಡು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಜೆ.ಪೃಥ್ವಿರಾಮ್, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಮೋಹನ್ ಕುಮಾರ್, ಹರೀಶ್, ಪ್ರಧಾನ ಕಾರ್ಯದರ್ಶಿ ಶಶಿಧರ್, ಕಾರ್ಯದರ್ಶಿಗಳಾದ ಸಂತೋಷ್, ಶ್ರೀನಿವಾಸ್ ಇತರರು ಇದ್ದರು.ವಿಜೇತರ ವಿವರ:
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಆಲೂರು ತಂಡ ಪ್ರಥಮ, ಸಕಲೇಶಪುರ ದ್ವಿತೀಯ ಹಾಗೂ ಹಾಸನ ಯುವ ಪಡೆ ತಂಡ ಮೂರನೇ ಸ್ಥಾನ ಪಡೆಯಿತು. ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಆಲೂರು ತಂಡ, ಹಾಸನ ಯುವ ಪಡೆ ದ್ವಿತೀಯ ಹಾಗೂ ಮೂರನೇ ಸ್ಥಾನವನ್ನು ಹಾಸನದ ಹಾಸನಾಂಬ ತಂಡ ತನ್ನದಾಗಿಸಿಕೊಂಡಿತು. 100 ಮೀ., 200 ಮೀ. ಓಟದಲ್ಲಿ ಪತ್ರಕರ್ತರು ಭಾಗವಹಿಸಿದರು.5 ಲಕ್ಷ ರು. ಅನುದಾನ
ಹಗ್ಗಜಗ್ಗಾಟ ಸ್ಪರ್ಧೆಗೆ ಚಾಲನೆ ನೀಡಿದ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಪತ್ರಕರ್ತರ ನೆರವಿಗೆ ತಾನು ಸದಾ ಸಿದ್ಧವಿದ್ದು, ಸಕಲೇಶಪುರದಲ್ಲಿ ತಾಲೂಕು ಪತ್ರಕರ್ತರ ಭವನ ನಿರ್ಮಾಣಕ್ಕೆ 5 ಲಕ್ಷ ರು. ಅನುದಾನ ನೀಡಲಾಗುವುದು. ಆಲೂರು ಪಟ್ಟಣದಲ್ಲಿ ನಿವೇಶನ ಕೊಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.