ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ ಸಮಾಜ, ಪ್ರತಿಯೊಬ್ಬರ ನೆಮ್ಮದಿ ಹಾಳಾಗುತ್ತದೆ. ಯಾರೊಬ್ಬರೂ ನೆಮ್ಮದಿಯಾಗಿ ಬದುಕಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘವು ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ಸತ್ಯ ಹೇಳುವ ಕೆಲಸವನ್ನ ಪತ್ರಿಕೆಗಳು ಮಾಡಬೇಕು. ಆದರೆ, ಇತ್ತೀಚೆಗೆ ಸುಳ್ಳು ಸುದ್ದಿ ಸೃಷ್ಟಿಸಿ ಮತ್ತೊಬ್ಬರನ್ನು ತೇಜೋವಧೆ ಮಾಡುವ ಕೆಲಸ ಹೆಚ್ಚಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಫೇಕ್ ನ್ಯೂಸ್ ವೇಗವಾಗಿ ಬೆಳೆಯಲಿಕ್ಕೆ ಪ್ರಾರಂಭವಾಗಿದೆ. ಇದನ್ನ ತಡೆಯದೇ ಹೋದರೆ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳು ಉಳಿಯುವುದು ಕಷ್ಟವಾಗಲಿದೆ. ಕುವೆಂಪು ಅವರು ಹೇಳಿದ ಶಾಂತಿಯ ತೋಟ ಆಗೋದು ಕನಸಾಗಲಿದೆ. ಹೀಗಾಗಿ, ಸುದ್ದಿಗಳನ್ನ ಫ್ಯಾಕ್ಟ್ ಚೆಕ್ ಮಾಡಲಿಕ್ಕೆ ಸರ್ಕಾರ ಮುಂದಾಗಿದೆ. ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ತಂಡ ಸುಳ್ಳು ಸುದ್ದಿಯ ಫ್ಯಾಕ್ಟ್ ಚೆಕ್ ಮಾಡಲಿದೆ ಎಂದು ಹೇಳಿದರು.ಈ ಸುಳ್ಳು ಸುದ್ದಿಯನ್ನು ಸೃಷ್ಟಿಸಿ, ಪ್ರಕಟಿಸುವುದರಿಂದ ಧಾರ್ಮಿಕ, ಸಾಮಾಜಿಕ ಘರ್ಷಣೆಗಳು ಉಂಟಾಗಿ ನಮ್ಮ ಜೊತೆಯಲ್ಲಿರುವವರಿಗೆ ತೊಂದರೆಯಾಗಲಿದೆ. ಸುಳ್ಳು ಸುದ್ದಿ ಮಾಡೋದು ಯಾರಿಗೂ ಶೋಭೆ ತರುವುದಿಲ್ಲ. ಇದನ್ನು ತಡೆಗಟ್ಟುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಇಂದು ಎಲ್ಲರೂ ಪತ್ರಕರ್ತರಾಗಿದ್ದಾರೆ. ಪತ್ರಕರ್ತರಲ್ಲದ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದೆ. ಪತ್ರಿಕಾರಂಗಕ್ಕೆ ಅಪಾಯ ಬಂದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟಾಗುತ್ತದೆ ಎಂದರು.ಹೀಗಾಗಿ, ಪತ್ರಿಕಾರಂಗಕ್ಕೆ ಯಾವುದೇ ನಿರ್ಬಂಧ ಹೇರಬಾರದು. ಅದಕ್ಕೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಮಗೆ ನಮ್ಮ ಸಂವಿಧಾನ ನೀಡಿರುವ ಅತ್ಯುನ್ನತ ಮೌಲ್ಯಗಳಾಗಿವೆ. ಸಂವಿಧಾನದ ಮೂರು ಅಂಗಗಳಿಗೆ ಅಪಾಯ ಬಂದರೆ ಸಮಾಜಕ್ಕೆ ಅಪಾಯ ಬಂದಂತೆ ಎಂದರು.
ಮಾಹಿತಿ ತಿಳಿಸಿ:ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಾತನಾಡಿ, ಇತ್ತೀಚೆಗೆ ಸುದ್ದಿ ಮಾಧ್ಯಮಗಳು ಅನಗತ್ಯ ವಿಚಾರಗಳನ್ನಷ್ಟೇ ವರದಿ ಮಾಡುತ್ತಿವೆ. ಇದು ಬೇಸರ ಸಂಗತಿ. ಮಾಧ್ಯಮಗಳು ವಸ್ತುನಿಷ್ಠ, ಪ್ರಸ್ತುತ ಬೆಳವಣಿಗೆ ಬಗ್ಗೆ ಮಾಹಿತಿ ತಿಳಿಸುವಂತಹ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಾಂಸ್ಕೃತಿಕ ಹಿನ್ನೆಲೆ ಇರದ ವ್ಯಕ್ತಿಗಳು ಸಿದ್ದರಾಮಯ್ಯರನ್ನು ಟೀಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಪತ್ರಿಕೋದ್ಯಮ ಮತ್ತು ಮತದಾರರಿಂದ ಮಾತ್ರ ಸಾಧ್ಯ. ಸಂಸ್ಕೃತಿಯ ತಳಹದಿಯ ಮೇಲೆ ಧರ್ಮ ಇದೆ. ಧರ್ಮದ ತಳಹದಿಯಲ್ಲಿ ಸಂಸ್ಕೃತಿ ಇಲ್ಲ. ಇದನ್ನ ನಾವು ಜನರಿಗೆ ತಿಳಿಸಬೇಕಿದೆ. ಇಲ್ಲವಾದಲ್ಲಿ ಸಂವಿಧಾನದ ಆಶಯ ಬುಡಮೇಲಾಗುತ್ತದೆ ಎಂದು ಅವರು ಎಚ್ಚರಿಸಿದರು.ಅಭಿನಂದನೆ- ಪ್ರಶಸ್ತಿ ಪ್ರದಾನ:
ಇದೇ ವೇಳೆ ವರ್ಷದ ಹಿರಿಯ ನಗರ ಪತ್ರಕರ್ತ ಎಂ.ಎನ್. ಕಿರಣ್ ಕುಮಾರ್, ಹಿರಿಯ ಗ್ರಾಮಾಂತರ ಪತ್ರಕರ್ತ ಸಾಲಿಗ್ರಾಮ ಯಶವಂತ್, ಹಿರಿಯ ಸುದ್ಧಿ ಸಂಪಾದಕ ಕೆ.ಎನ್. ನಾಗಸುಂದ್ರಪ್ಪ, ಹಿರಿಯ ಛಾಯಾಗ್ರಾಹಕ ಶ್ರೀರಾಮ್, ದೃಶ್ಯ ಮಾಧ್ಯಮ ಹಿರಿಯ ವರ್ಷದ ವರದಿಗಾರ ಮಹೇಶ್ ಶ್ರವಣಬೆಳಗೋಳ, ಹಿರಿಯ ವಿಡಿಯೋಗ್ರಾಫರ್ ಎಸ್. ನಾಗೇಶ್ ಅವರನ್ನು ಅಭಿನಂದಿಸಲಾಯಿತು.ಹಾಗೆಯೇ, ಈ ಸಾಲಿನ ಉತ್ತಮ ಕನ್ನಡ ವರದಿಗೆ ಎಚ್.ಎಸ್. ಸಚ್ಚಿತ್, ಇಂಗ್ಲಿಷ್ ವರದಿಗೆ ಪಿ. ಶಿಲ್ಪಾ, ಉತ್ತಮ ಫೋಟೋಗ್ರಫಿ ಎಸ್. ಉದಯಶಂಕರ್, ವಿದ್ಯುನ್ಮಾನ ಮಾಧ್ಯಮದ ವರದಿಗೆ ಜಯಂತ್ ಮತ್ತು ರಾಮು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್, ಶಾಸಕರಾದ ತನ್ವೀರ್ ಸೇಠ್, ಡಿ. ರವಿಶಂಕರ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಹಿರಿಯ ಪತ್ರಕರ್ತರಾದ ರವೀಂದ್ರ ಭಟ್, ಡಿ. ರವಿಕುಮಾರ್, ಜಿಎಸ್ಎಸ್ ಸಂಸ್ಥೆಯ ಮುಖ್ಯಸ್ಥ ಶ್ರೀಹರಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಮೊದಲಾದವರು ಇದ್ದರು.ನನ್ನ ವಿರುದ್ಧವೂ ಸುಳ್ಳು ಸುದ್ದಿ
ನಾನು ಸದನದಲ್ಲಿ ಮಾತನಾಡುವಾಗ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಿದ ಮಾತನ್ನು ನಾನು ಉದಾಹರಿಸಿದ್ದೆ. ಸಾಲ ಮನ್ನಾ ಮಾಡೋದಕ್ಕೆ ನಮ್ಮ ಬಳಿ ಪ್ರಿಂಟಿಂಗ್ ಮೆಷಿನ್ ಇದಿಯಾ ಎಂದು ಯಡಿಯೂರಪ್ಪ ಅವರು ಸದನದ ಹೇಳಿದ್ದರು. ಈ ಮಾತನ್ನು ನಾನು ಉದಾಹರಿಸಿದ್ದೆ. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ನಾನೇ ಆ ಮಾತು ಹೇಳಿದ್ದಾಗಿ ನಕಲಿ ಸುದ್ದಿ ಸೃಷ್ಟಿಸಲಾಯಿತು. ಜೊತೆಗೆ ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲೂ ಅದನ್ನೇ ಸೇರಿಸಿ ತಪ್ಪು ಸಂದೇಶ ಹರಡಿದರು. ಇದರಿಂದ ನಷ್ಟ ಆಗಿದ್ದು ಸಮಾಜಕ್ಕೇ ಹೊರತು ನನಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.ಫೇಕ್ ನ್ಯೂಸ್ ಸೃಷ್ಟಿಕರ್ತರಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ನಾವು ಕಾನೂನು ಮಾಡಿದ್ದೇವೆ. ಆದರೆ, ಕೇವಲ ಕಾನೂನಿನಿಂದ ಮಾತ್ರ ಫೇಕ್ ನ್ಯೂಸ್ ತಡೆಯಲು ಸಾಧ್ಯವಿಲ್ಲ. ಇಡೀ ಸಮಾಜ ಇದರ ವಿರುದ್ಧ ಧ್ವನಿ ಎತ್ತಿದರೆ ಮಾತ್ರ ಸುಳ್ಳು ಸುದ್ದಿ ತಡೆಯಲು ಸಾಧ್ಯ.- ಸಿದ್ದರಾಮಯ್ಯ, ಮುಖ್ಯಮಂತ್ರಿ