12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ಅಪಾರ ಪ್ರಮಾಣದ ವಚನ ಸಾಹಿತ್ಯವನ್ನು ಸೃಷ್ಟಿಸಿದ್ದರು.
ಬಳ್ಳಾರಿ: 12ನೇ ಶತಮಾನದ ಕಲ್ಯಾಣ ಕ್ರಾಂತಿಯ ನಂತರ ಕಣ್ಮರೆಯಾಗುತ್ತಿದ್ದ ವಚನ ಸಾಹಿತ್ಯವನ್ನು ಮರುಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಮೂಲಕ ಕನ್ನಡ ಜನತೆಗೆ ವಚನಗಳ ಬೆಳಕನ್ನು ನೀಡಿದ ವಚನ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಕೊಡುಗೆ ಅಪಾರ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಡಾ. ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಚಯದ ಹೊಂಗಿರಣ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು.12ನೇ ಶತಮಾನದಲ್ಲಿ ಬಸವಾದಿ ಶರಣರು ಅನುಭವ ಮಂಟಪದಲ್ಲಿ ಅಪಾರ ಪ್ರಮಾಣದ ವಚನ ಸಾಹಿತ್ಯವನ್ನು ಸೃಷ್ಟಿಸಿದ್ದರು. ಆದರೆ ಕಲ್ಯಾಣ ಕ್ರಾಂತಿಯ ನಂತರ, ಶರಣರನ್ನು ಹಿಮ್ಮೆಟ್ಟಿಸುವ ಹಾಗೂ ವಚನಗಳನ್ನು ನಾಶಮಾಡುವ ಸಂಚು ನಡೆದಾಗ ವಚನಗಳನ್ನು ರಕ್ಷಿಸುವ ಕಾರ್ಯವನ್ನು ಫ. ಗು. ಹಳಕಟ್ಟಿ ಅವರು ಕೈಗೆತ್ತಿಕೊಂಡಿದ್ದವರು. 19ನೇ ಶತಮಾನದ ಆರಂಭದಲ್ಲಿ ಕೇವಲ 25 ವಚನಕಾರರ ಬೆರಳೆಣಿಕೆಯಷ್ಟು ವಚನಗಳು ಮಾತ್ರ ಬೆಳಕಿನಲ್ಲಿದ್ದವು. ಅಂತಹ ಸಂದರ್ಭದಲ್ಲಿ ಹಳಕಟ್ಟಿ ಅವರು ಸುಮಾರು 22,000 ವಚನಗಳನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಿದರು ಎಂದರು.1880ರಲ್ಲಿ ಧಾರವಾಡದಲ್ಲಿ ಜನಿಸಿದ ಹಳಕಟ್ಟಿ ಅವರ ಮೂಲ ಊರು ಬೆಳಗಾವಿ ಜಿಲ್ಲೆಯ ಪರಸಗಡ ಹತ್ತಿರದ ಹಳಕಟ್ಟಿ. ಅವರ ತಂದೆ ಗುರುಬಸಪ್ಪ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ಉತ್ತಮ ಲೇಖಕರಾಗಿದ್ದರು. ಅವರ ಸಂಸ್ಕಾರ ಹಳಕಟ್ಟಿ ಅವರಿಗೆ ಬಾಲ್ಯದಲ್ಲೇ ದೊರೆತಿತ್ತು. ಮೂರನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಅವರನ್ನು ಅಜ್ಜಿ ಬಸಮ್ಮನವರು ಸಾಕಿ ಬೆಳೆಸಿದರು ಎಂದರು.
ಧಾರವಾಡದಲ್ಲಿ ಪ್ಲೇಗ್ ರೋಗ ಹರಡಿದಾಗ ಹೆಂಡತಿಯ ಊರಾದ ಬನಹಟ್ಟಿಗೆ ತೆರಳಿದ್ದ ಸಂದರ್ಭದಲ್ಲಿ ಮಾವನವರು ನೀಡಿದ ‘ಷಟ್‌ಸ್ಥಲ’ ಮತ್ತು ‘ಪ್ರಭುದೇವರ ವಚನಗಳು’ ಎಂಬ ತಾಡೋಲೆ ಪುಸ್ತಕಗಳು ಹಳಕಟ್ಟಿ ಅವರ ಜೀವನದ ದಿಕ್ಕನ್ನೇ ಬದಲಿಸಿದವು. ವಚನಗಳ ಮಹತ್ವವನ್ನು ಅರಿತ ಅವರು, ತಮ್ಮ ಇಡೀ ಜೀವನವನ್ನು ವಚನ ಸಾಹಿತ್ಯಕ್ಕಾಗಿ ಮುಡಿಪಾಗಿಡಲು ಸಂಕಲ್ಪಿಸಿದವರು ಎಂದು ಹೇಳಿದರು.ಬಡತನ, ಅನಾರೋಗ್ಯ ಕಾಡುತ್ತಿದ್ದರೂ ಲೆಕ್ಕಿಸದೆ ವಚನಗಳ ಹುಡುಕಾಟಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಶಿಕ್ಷಣ ಕ್ಷೇತ್ರ ಮತ್ತು ಸಾರ್ವಜನಿಕ ಸೇವೆಯಲ್ಲೂ ಅಪಾರವಾಗಿ ಶ್ರಮಿಸಿದ ಅವರ ವ್ಯಕ್ತಿತ್ವವು, ಶರಣರು ಹೇಳಿದಂತೆ “ಎಲ್ಲೇ ಇದ್ದರೂ ಪರಿಮಳ ಬೀರುವ ಗಂಧದ ಮರದಂತೆ” ಇತ್ತು. ಅಂದು ಹಳಕಟ್ಟಿ ಅವರು ಶ್ರಮಿಸದೇ ಹೋಗಿದ್ದರೆ ಇಂದು ನಮಗೆ 250ಕ್ಕೂ ಹೆಚ್ಚು ವಚನಕಾರರ ಅಮೂಲ್ಯ ವಚನಗಳು ಲಭ್ಯವಾಗುತ್ತಿರಲಿಲ್ಲ. ಕತ್ತಲೆಯಲ್ಲಿದ್ದ ವಚನಗಳ ಬೆಳಕನ್ನು ನಾಡಿಗೆ ತಂದ ಈ ಮಹಾನ್ ಚೇತನಕ್ಕೆ ಕನ್ನಡಿಗರು ಸದಾ ಕೃತಜ್ಞರಾಗಿರಬೇಕಾಗಿದೆ ಎಂದರು.
ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂಬಾಷಾ ಅವರು, ವಚನ ಎನ್ನುವ ಮೂರಕ್ಷರದ ಪದದ ಹಿನ್ನೆಲೆ ವಿವರಿಸಿದರು.ಬಳ್ಳಾರಿ ತಾಲೂಕು ಗ್ರೇಡ್-2 ತಹಸೀಲ್ದಾರ್ ವಿನಾಯಕ ಗೋಡ್ಬಾಳೆ ಕಾರ್ಯಕ್ರಮ ಉದ್ಘಾಟಿಸಿದರು. ಬಳ್ಳಾರಿಯ ಎಂ. ನಾಗಭೂಷಣ ಬಾಪುರೆ ತಂಡ ವಚನ ಸಂಗೀತ ಕಾರ್ಯಕ್ರಮ ನೆರವೇರಿಸಿತು. ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಉಪಸ್ಥಿತರಿದ್ದರು.