- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ
- - -(ಸಾಹಿತ್ಯ ಚಿಂತನ-ಮಂಥನ)
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಿಳೆ ಕುಟುಂಬ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ತನ್ನ ಆರೋಗ್ಯ, ಆಹಾರ, ಪ್ರತಿಭೆ ಹಾಗೂ ಅಭಿವ್ಯಕ್ತಿಯ ಬಗ್ಗೆಯೂ ಸಮಾನ ಕಾಳಜಿ ವಹಿಸಬೇಕು ಎಂದು ಸಾಹಿತ್ಯ ಚಿಂತನ-ಮಂಥನ ಗೋಷ್ಠಿಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ನಡೆದ “ಸಾಹಿತ್ಯ ಚಿಂತನ-ಮಂಥನ” ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವೈದ್ಯ ಸಾಹಿತಿ ಡಾ. ಶಶಿಕಲಾ ಕೃಷ್ಣಮೂರ್ತಿ ಮಾತನಾಡಿ, ನಮ್ಮ ದೈಹಿಕ ಸೌಂದರ್ಯವು ನಮ್ಮ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮ ಜೀವನಶೈಲಿ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ನಮ್ಮಲ್ಲಿರುವ ಕೆಟ್ಟ ಚಟಗಳು ನಮ್ಮ ಅನಾರೋಗ್ಯದ ಸಂಕೇತವಾಗಬಹುದು ಎಂದು ಹೇಳಿದರು.
ಮಹಿಳೆ ಮತ್ತು ಆರೋಗ್ಯ ವಿಷಯದ ಕುರಿತು ಡಾ.ಲತಾ ಶಾಮನೂರು ಉಪನ್ಯಾಸ ನೀಡುತ್ತಾ, ಮಹಿಳೆ ತನ್ನ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಆರೋಗ್ಯವಂತ ತಾಯಿಯಿಂದಲೇ ಆರೋಗ್ಯವಂತ ಮಗುವಿನ ಬೆಳವಣಿಗೆ ಸಾಧ್ಯ. ಮಗುವಿಗೆ ಮೊದಲ ಆರು ತಿಂಗಳು ಕಡ್ಡಾಯವಾಗಿ ತಾಯಿಯ ಎದೆಹಾಲು ನೀಡಬೇಕು. ಇದು ಪ್ರತಿಯೊಂದು ಮಗುವಿನ ಹಕ್ಕಾಗಿದೆ ಎಂದು ತಿಳಿಸಿದರು.ಸಾವಯವ ಆಹಾರ ತಜ್ಞೆ ಸರೋಜಾ ಪಾಟೀಲ ಮಹಿಳೆ ಮತ್ತು ಆರೋಗ್ಯ ವಿಷಯ ಕುರಿತು, ಮಾತನಾಡಿ, ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತಳಲ್ಲ. ಆಕೆಯಲ್ಲಿ ಹಲವಾರು ಪ್ರತಿಭೆಗಳಿದ್ದು, ಅಡುಗೆ ಮನೆಯ ಜವಾಬ್ದಾರಿಯೊಂದಿಗೆ ಆಹಾರ ಮತ್ತು ಆರೋಗ್ಯದ ಕುರಿತು ಹೆಚ್ಚಿನ ಜ್ಞಾನವನ್ನು ಪಡೆದುಕೊಂಡು ಕುಟುಂಬದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಮಾಜಕ್ಕೂ ಆ ಜ್ಞಾನವನ್ನು ಹಂಚಿಕೊಳ್ಳಬಹುದು ಎಂದು ಹೇಳಿದರು.
ಸಾಹಿತಿ ಡಾ.ಅನುರಾಧಾ ಬಕ್ಕಪ್ಪ ಮಹಿಳೆ ಮತ್ತು ಕೌಟುಂಬಿಕ ಸಾಮರಸ್ಯ ಹಾಗೂ ಮಹಿಳೆ ಮತ್ತು ಸಾಹಿತ್ಯ ವಿಷಯ ಕುರಿತು ಮಾತನಾಡಿ, ಅನಾದಿಕಾಲದಿಂದಲೂ ಸಮಾಜದಲ್ಲಿ ಲಿಂಗತಾರತಮ್ಯ ಹಾಗೂ ಲಿಂಗಪಾತ್ರಗಳ ವೈಭವೀಕರಣ ನಡೆದುಕೊಂಡು ಬಂದಿದೆ. ಹೆಣ್ಣಿನ ಬದುಕಿಗೆ ನಿರ್ದಿಷ್ಟ ಚೌಕಟ್ಟು ವಿಧಿಸಿ ಅದರೊಳಗೇ ಆಕೆ ಬದುಕಬೇಕು ಎಂಬ ಮನೋಭಾವದಿಂದ ಹೊರಬರಬೇಕಾಗಿದೆ. ಕೌಟುಂಬಿಕ ಸಾಮರಸ್ಯ ಕಾಪಾಡುವುದು ಕೇವಲ ಮಹಿಳೆಯ ಜವಾಬ್ದಾರಿಯಲ್ಲ. ಪುರುಷರೂ ಸಮಾನ ಬಾಧ್ಯಸ್ಥರು ಎಂದರು.ಗೋಷ್ಠಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ವಿಶ್ರಾಂತ ಪ್ರಾಚಾರ್ಯೆ ಶಕುಂತಲಾ ಗುರುಸಿದ್ದಯ್ಯ, ಸಾಹಿತಿ ಬಿ.ಟಿ.ಜಾಹ್ನವಿ ಉಪಸ್ಥಿತರಿದ್ದರು. ಚಂದ್ರಿಕಾ ಮಂಜುನಾಥ್ ನಿರೂಪಿಸಿದರು. ಡಾ. ಅನಿತಾ ಎಚ್. ದೊಡ್ಡಗೌಡರ್ ಸ್ವಾಗತಿಸಿದರು. ಕೆ.ಗಿರಿಜಮ್ಮ ವಂದಿಸಿದರೆ, ಸುನಂದಾ ವರ್ಣೇಕರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
- - --8ಕೆಡಿವಿಜಿ37:
ದಾವಣಗೆರೆಯಲ್ಲಿ ಶನಿವಾರ ನಡೆದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಡಾ.ಶಶಿಕಲಾ ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಸಾಹಿತ್ಯ ಚಿಂತನ-ಮಂಥನ ನಡೆಯಿತು.