ಸಾರಾಂಶ
ಶಿವಮೊಗ್ಗ: ರೋಗಿಯ ಸಂಪೂರ್ಣ ಇತಿಹಾಸ ಬಲ್ಲ ಕುಟುಂಬ ವೈದ್ಯರು, ಆಧುನಿಕತೆಯ ಈ ಹೊತ್ತಿನಲ್ಲಿ ದೇಶಕ್ಕೆ ಅನಿವಾರ್ಯವಾಗಿದ್ದು, ಡಾ.ಪಿ.ನಾರಾಯಣ ಅಂತಹ ವ್ಯಕ್ತಿ ಕುಟುಂಬ ವೈದ್ಯ ವ್ಯವಸ್ಥೆಗೆ ಆದರ್ಶವಾಗಿ ಕಾಣುತ್ತಾರೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ ಹೇಳಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಡಾ.ಪಿ.ನಾರಾಯಣ ಅಭಿನಂದನಾ ಸಮಿತಿಯಿಂದ ಶನಿವಾರ ಸಂಜೆ ಏರ್ಪಡಿಸಿದ್ದ ಜನವೈದ್ಯ ನಮನ' ಕಾರ್ಯಕ್ರಮದಲ್ಲಿ ಡಾ.ಪಿ.ನಾರಾಯಣ ಅವರನ್ನು ಅಭಿನಂದಿಸಿ ಮಾತನಾಡಿದರು.
ಪ್ರಸ್ತುತ ಕೌಟುಂಬಿಕ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಅರಿತು ರಾಷ್ಟ್ರೀಯ ವೈದ್ಯಕೀಯ ಆಯೋಗವು ಕುಟುಂಬ ವೈದ್ಯ ವಿಷಯದಲ್ಲಿ ಹೊಸದಾಗಿ ಎಂಡಿ ಕೋರ್ಸ್ ಪ್ರಾರಂಭಿಸುತ್ತಿದೆ. ಅದರೇ 1966ರಲ್ಲಿಯೇ ನಾರಾಯಣ್ ಅವರು ಕುಟುಂಬ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು. ಮಾತು, ನಡೆ, ನುಡಿಯ ಸಂಸ್ಕಾರ ಹೊಂದಿದ ಮೇರು ವ್ಯಕ್ತಿತ್ವ ಅವರದು ಎಂದರು.
ಪೊಲೀಯೊ ನಿರ್ಮೂಲನೆಯಲ್ಲಿ ಬಹುದೊಡ್ಡ ಕೊಡುಗೆ ನೀಡಿದ ನಾರಾಯಣ್ ಅವರು, ನಿಜವಾದ ಸಾಮಾಜಿಕ ರತ್ನ. ರೋಗಿಯನ್ನು ವಾಸಿ ಮಾಡುವ ಉತ್ತಮ ವೈದ್ಯರು ನಮಗೆ ಬೇಕಿದೆ. ಸರ್ಕಾರದ ಪ್ರಶಸ್ತಿಗಿಂತ ಸಾರ್ವಜನಿಕ ಪ್ರಶಸ್ತಿಯೇ ಅತಿ ದೊಡ್ಡದು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಆದರ್ಶದ ವ್ಯಕ್ತಿತ್ವ ಪಿ.ನಾರಾಯಣ್ ಅವರು, ಕ್ರಿಯಾಶೀಲತೆಯ ಅನುರಕ್ತಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸ ಯೋಜನೆಗಳಿಗೆ ಮುಂದಣ ಹೆಜ್ಜೆ ಇಡುತ್ತಿದ್ದು, ಅಂತಹ ಸಮಾಜಮುಖಿ ಚಿಂತನೆಗಳಿಗೆ ನಾರಾಯಣ್ ಅವರಂತಹ ವ್ಯಕ್ತಿತ್ವಗಳು ಪ್ರೇರಣೀಯ ಎಂದರು.
ಇದೇ ವೇಳೆ ಡಾ.ಪಿ.ನಾರಾಯಣ ಅವರ ಅಭಿನಂದನಾ ಗ್ರಂಥ ಯೋಜಕ ದ ಮುಖಪುಟವನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಅಭಿನಂದನೆ ಸ್ವೀಕರಿಸಿದ ಡಾ.ಪಿ.ನಾರಾಯಣ್, ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿದರು.
ಅಭಿನಂದನಾ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯದರ್ಶಿ ಡಾ.ಎಚ್.ಎಸ್.ನಾಗಭೂಷಣ ಸ್ವಾಗತಿಸಿದರು. ಸಿ.ಎಂ.ನೃಪತುಂಗ ವಂದಿಸಿದರು.
ಲಸಿಕೆಯಿಂದ ಹೃದಯಾಘಾತ :
ವಿವಾದವಲ್ಲದ ವಿವಾದ
ಕೋವಿಡ್ ಲಸಿಕೆಯಿಂದ ಹೃದಯಾಘಾತಗಳು ಆಗುತ್ತಿದೆ ಎಂಬುದು ವಿವಾದವಲ್ಲದ ವಿವಾದ. 25 ವರ್ಷಗಳ ವೈದ್ಯಕೀಯ ಅನುಭವದಲ್ಲಿ ಅಂದಿನಿಂದಲೂ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಲೆ ಇದೆ. ಪ್ರತಿ ವರ್ಷ 30 ಲಕ್ಷ ಜನ ಭಾರತದಲ್ಲಿ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಅದರಲ್ಲಿ 45 ವರ್ಷ ವಯೋಮಾನದ ಒಳಗಿನವರೆ ಜಾಸ್ತಿ. ಹಾಗಾಗಿ ಇದು ಹೊಸ ಬೆಳವಣಿಗೆಯಲ್ಲ. ಜನರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಡಾ.ಸಿ.ಎನ್.ಮಂಜುನಾಥ ತಿಳಿಸಿದರು.