ಸಾರಾಂಶ
ಶಿರಹಟ್ಟಿ: ಖಾಸಗಿ ಮೈಕ್ರೊ ಫೈನಾನ್ಸ್ ಕಂಪನಿಯ (ಸಂಸ್ಥೆಯ) ಕಿರುಕುಳಕ್ಕೆ ಬೇಸತ್ತು ತಾಲೂಕಿನ ಖಾನಾಪುರ ಗ್ರಾಮದ ಕುಟುಂಬವೊಂದು ಊರು ತೊರೆದಿದೆ!
ಮಹಮ್ಮದರಫೀ ಗೌಸುಸಾಬ್ ದೊಡ್ಡಮನಿ ಎಂಬುವವರು ಖಾಸಗಿ ಮೈಕ್ರೊ ಫೈನಾನ್ಸ್ ಕಂಪನಿಯಲ್ಲಿ ಮನೆ ನಿರ್ಮಾಣಕ್ಕಾಗಿ ₹ ೩ ಲಕ್ಷ ಸಾಲ ಪಡೆದಿದ್ದು, ಪ್ರತಿ ತಿಂಗಳು ನಿಯಮಾನುಸಾರ ಕಂತು ತುಂಬಿಕೊಂಡು ಬಂದಿದ್ದು, ಎರಡು ತಿಂಗಳ ಕಂತು ಮಾತ್ರ ಬಾಕಿ ಉಳಿದಿದ್ದರಿಂದ ನಿತ್ಯ ಫೈನಾನ್ಸ್ ಸಂಸ್ಥೆಯವರು ಕಿರುಕುಳ ನೀಡುತ್ತಿದ್ದರಂತೆ.ಅಲ್ಲದೆ ಹೆಚ್ಚುವರಿ ಬಡ್ಡಿ ಹಣ ನೀಡುವಂತೆ ಪೀಡಿಸುತ್ತಿದ್ದರಿಂದ ನನ್ನ ಮಗ, ಸೊಸೆ ಹಾಗೂ ಮೊಮ್ಮಕ್ಕಳು ೩ ತಿಂಗಳಿನಿಂದ ಮನೆಗೆ ಬೀಗ ಹಾಕಿಕೊಂಡು ಊರು ತೊರೆದಿದ್ದಾರೆ ಎಂದು ವೃದ್ಧ ತಂದೆ ಗೌಸುಸಾಬ್ ದೊಡ್ಡಮನಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ದುಡಿಮೆ ಇಲ್ಲದೇ ನಿತ್ಯ ಕುಟುಂಬ ನಿರ್ವಹಣೆ ತೊಂದರೆಯಾಗಿದ್ದು, ಇವರ ಕಿರುಕುಳ ತಾಳಲಾಗುತ್ತಿಲ್ಲ ಎಂದಿದ್ದಾರೆ.
ಮೊದಲು ನಮ್ಮ ಮಗ ಮಹಮ್ಮದರಫೀ ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದೆ ಇಲ್ಲಿ ದುಡಿಮೆಯೂ ಇಲ್ಲ ಎಂದು ಹೆದರಿ ಗೋವಾಕ್ಕೆ ದುಡಿಯಲು ಹೋದರು. ಒಂದೂವರೆ ವರ್ಷದಿಂದ ತಪ್ಪದೇ ಸಾಲ ತುಂಬಿಕೊಂಡು ಬಂದಿದ್ದಾನೆ. ದುಡಿಮೆ ಕಡಿಮೆಯಾಗಿದ್ದರಿಂದ ಕಂತು ತುಂಬುವುದು ವಿಳಂಬವಾಗಿದೆ. ಹೆಚ್ಚುವರಿ ಬಡ್ಡಿ ಕಟ್ಟುವಂತೆ ಕಾಟ ಕೊಡುತ್ತಿದ್ದರಿಂದ ಹೆದರಿ ಊರಿಗೆ ಬಂದಿಲ್ಲ ಎಂದು ಹೇಳಿದರು.ಪ್ರತಿ ತಿಂಗಳು ₹೭೦೫೦ ಕಂತು ಕಟ್ಟುವಂತೆ ಸಾಲ ನೀಡಿದ್ದರು. ಕಂತು ಕಟ್ಟುವುದು ತಡವಾದರೆ ಅವರು ಹೇಳಿದಷ್ಟು ಹೆಚ್ಚುವರಿ ಬಡ್ಡಿ ಕಟ್ಟಬೇಕು. ಇಲ್ಲವಾದರೆ ಹೆದರಿಸಿ ಬೆದರಿಸಿ ವಸೂಲು ಮಾಡುತ್ತಿದ್ದರು ಎಂದು ಹೇಳಿದ್ದು, ಶಾಲೆಗೆ ಹೋಗುತ್ತಿದ್ದ ಇಬ್ಬರು ಮೊಮ್ಮಕ್ಕಳು ಊರು ತೊರೆದು ಹೋಗಿದ್ದಾರೆ. ನಮಗೂ ವಯಸ್ಸಾಗಿದ್ದು, ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದಾಗಿದೆ ಎಂದು ವೃದ್ದ ತಂದೆ ನೋವು ತೋಡಿಕೊಂಡರು.
ಮನೆ ಮಾರಿ ಮೊದಲು ಸಾಲ ಕಟ್ಟುವಂತೆ ನನ್ನ ಮಗನಿಗೆ ತಿಳಿಸಿದ್ದೆ. ಅಷ್ಟರಲ್ಲಿಯೇ ಫೈನಾನ್ಸ್‌ನವರು ಮನೆಗೆ ಬಂದು ಮನೆ ಅಡಮಾನ ಇಡಲಾಗಿದೆ ಎಂದು ಬೋರ್ಡ್ ಬರೆದು ಹೋಗಿದ್ದರಿಂದ ಯಾರೂ ಖರೀದಿಗೆ ಮುಂದೆ ಬರುತ್ತಿಲ್ಲ. ನಮ್ಮ ಸೊಸೆ ಗದಗನಲ್ಲಿ ಕಿರಾಣಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಮಕ್ಕಳನ್ನು ಸಾಕುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.ಕಾರಣಾಂತರದಿಂದ ಸಾಲದ ಕಂತು ಕಟ್ಟಲು ಸಮಸ್ಯೆ ಆಗಿದ್ದರಿಂದ ಖಾಸಗಿ ಮೈಕ್ರೊ ಫೈನಾನ್ಸ್ ಕಂಪನಿಯವರ ಬಳಿ ಕಾಲಾವಕಾಶಕ್ಕೆ ಮನವಿ ಮಾಡಿದ್ದಾರೆ. ಆದರೂ ಕಿರುಕುಳ ನಿಂತಿಲ್ಲ. ಮನೆ ಜಪ್ತಿ ಮಾಡುತ್ತೇವೆ. ಊರ ಜನರನ್ನು ಕೂಡಿಸಿ ಅವರ ಸಮ್ಮುಖದಲ್ಲಿಯೇ ಮನೆ ಹರಾಜು ಹಾಕಲಾಗುತ್ತದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮರ್ಯಾದೆಗೆ ಅಂಜಿ ಊರು ತೊರೆದಿದ್ದಾರೆ ಎಂದು ಹೇಳಿದರು.