ಕನ್ನಡಪ್ರಭ ವಾರ್ತೆ ಹುಕ್ಕೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತ ಬಾಲಕನ ಕುಟುಂಬಸ್ಥರು ಹುಕ್ಕೇರಿಯಲ್ಲಿ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತ ಬಾಲಕನ ಕುಟುಂಬಸ್ಥರು ಹುಕ್ಕೇರಿಯಲ್ಲಿ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಹತ್ತಿರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದ ಕಾರ್ತಿಕ ಗಾಡಿವಡ್ಡರ(14) ಮೃತಪಟ್ಟಿದ್ದು, ಸಾವಿನಲ್ಲಿ ಸಂಶಯವಿದೆ ಎಂದು ಆಕ್ರೋಶಗೊಂಡ ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಮತ್ತು ಸಂಬಂಧಿಕರು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದ ಹುಕ್ಕೇರಿ ಸರ್ಕಾರಿ ಆಸ್ಪತ್ರೆ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಹೊತ್ತು ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯುಂಟಾಯಿತು. ಬಾಲಕನ ಸಾವಿಗೆ ವಸತಿ ನಿಲಯದ ಅಧಿಕಾರಿ-ಸಿಬ್ಬಂದಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯವೇ ಕಾರಣವಾಗಿದೆ. ಬಾಲಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ಯಾವುದೇ ಫೋಟೋಗಳನ್ನು ತೋರಿಸಲಿಲ್ಲ. ನಮಗೆ ಶವ ನೋಡಲು ಅವಕಾಶ ಕಲ್ಪಿಸಲಿಲ್ಲ. ಹಾಗಾಗಿ, ತಮ್ಮ ಬಾಲಕನ ಸಾವಿನಲ್ಲಿ ಅನುಮಾನ ಕಂಡು ಬರುತ್ತಿದ್ದು, ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಕುಟುಂಬಸ್ಥರ ಒತ್ತಾಯಿಸಿದರು.ಅಷ್ಟೇ ಅಲ್ಲದೇ ಮಂಗಳವಾರ ರಾತ್ರಿ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಲು ಅನಾಮಿಕ ವ್ಯಕ್ತಿಯೊಬ್ಬ ಹಣದ ಆಮೀಷ ಒಡ್ಡಿದ್ದ. ಅನಾಮಿಕ ವ್ಯಕ್ತಿಯನ್ನು ಬೆನ್ನಟ್ಟಿ ವಶಕ್ಕೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿದಾಗ ಆತ ಪರಾರಿಯಾಗಿದ್ದಾನೆ. ಹೀಗಾಗಿ, ಇದು ಸಾವಲ್ಲ ಕೊಲೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದರು. ಕೊನೆಗೂ ಕುಟುಂಬಸ್ಥರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸಪಟ್ಟರು. ಬಳಿಕ ಪರಿಸ್ಥಿತಿ ತಿಳಿಗೊಳಿಸಿ ಶವ ಸಂಸ್ಕಾರ ನಡೆಸಲು ಪೊಲೀಸರು ಅನುವು ಮಾಡಿದರು. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮಂಗಳವಾರ ಸಂಜೆ ಮೂವರು ವಿದ್ಯಾರ್ಥಿಗಳೊಂದಿಗೆ ಈಜಲು ಎಡದಂಡೆ ಕಾಲುವೆಗೆ ಹಾರಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಕಾರ್ತಿಕ ಮೃತಪಟ್ಟಿದ್ದರೆ, ಇನ್ನುಳಿದ ಇಬ್ಬರು ಬಾಲಕರು ಈಜಿ ದಡ ಸೇರಿದ್ದಾರೆ ಎಂದು ಹೇಳಲಾಗಿದೆ.