ಸಾರಾಂಶ
ಶಿರೂರು ಬಳಿಯ ಗುಡ್ಡ ಕುಸಿತದ ದುರಂತದಲ್ಲಿ ನಾಪತ್ತೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ್ ಅವರು ಬದುಕಿದ್ದು, ಆದಷ್ಟು ಬೇಗ ಪತ್ತೆ ಹಚ್ಚುವಂತೆ ಅವರ ಕುಟುಂಬದವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರವಾರ
ಅಂಕೋಲಾ ತಾಲೂಕಿನ ಶಿರೂರು ಬಳಿಯ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ. ಈ ಮಧ್ಯೆ, ಶಿರೂರಿನಲ್ಲಿ ಆಗಾಗ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿರುವುದು ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಗುಡ್ಡ ಕುಸಿತದಿಂದ ಬಂದ್ ಆದ ಹೆದ್ದಾರಿ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.ಇದೇ ವೇಳೆ, ದುರಂತದಲ್ಲಿ ನಾಪತ್ತೆಯಾಗಿರುವ ಕೇರಳದ ಲಾರಿ ಚಾಲಕ ಅರ್ಜುನ್, ಬೆಂಜ್ ಲಾರಿಯಲ್ಲಿ ಮಣ್ಣಿನಡಿ ಹೂತು ಹೋಗಿದ್ದಾರೆ. ಅವರು ಬದುಕಿದ್ದು, ಪತ್ತೆ ಮಾಡಲು ವಿಳಂಬ ಮಾಡಲಾಗುತ್ತಿದೆ. ಆದಷ್ಟು ಬೇಗ ಅರ್ಜುನ್‌ರನ್ನು ಪತ್ತೆ ಹಚ್ಚುವಂತೆ ಅವರ ಕುಟುಂಬದವರು ಶನಿವಾರ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಘಟನೆಯಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆ ಹೆಚ್ಚಿದೆ. ಹೆದ್ದಾರಿ ಕಾಮಗಾರಿ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.ಈ ಮಧ್ಯೆ, ಅರ್ಜುನ್ ಅವರ ಪತ್ತೆಗಾಗಿ ಸ್ಥಳಕ್ಕೆ ರಾಡಾರ್ ತರಿಸಲಾಗಿದೆ. ಸುರತ್ಕಲ್‌ನ ಎನ್.ಐ.ಟಿ.ಕೆ.ಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ ವಿಪತ್ತು ನಿರ್ವಹಣಾ ತಂಡ ಮತ್ತು ಅಗ್ನಿಶಾಮಕ ಇಲಾಖೆ ವತಿಯಿಂದ ಸಮೀಪದ ನದಿಯಲ್ಲಿಯೂ ಪತ್ತೆ ಕಾರ್ಯ ನಡೆಯುತ್ತಿದೆ. ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಲು ಜಿಲ್ಲಾಡಳಿತ ಈಗಾಗಲೇ ಕ್ರಮ ಕೈಗೊಂಡಿದ್ದು ಹವಾಮಾನ ವೈಪರಿತ್ಯದ ಕಾರಣದಿಂದ ವಿಳಂಬವಾಗಿದೆ.