ಸಾರಾಂಶ
- ದಾವಣಗೆರೆ ಶಿವಯೋಗಿ ಮಂದಿರದಲ್ಲಿ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ತೇಜಸ್ವಿ ವಿ. ಪಟೇಲ್ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ-ಮಹಾರಾಜರ ಕಾಲದಲ್ಲಿ ವಂಶಪಾರಂಪರ್ಯವಾಗಿ ಆಡಳಿತ ನಡೆಯುತ್ತಿದ್ದರು. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕುಟುಂಬ ರಾಜಕಾರಣ ತಕ್ಕುದಲ್ಲ. ಸಂವಿಧಾನದ ಆಶಯಗಳಿಗೂ ಅದು ವಿರುದ್ಧವಾದುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ, ರೈತ ಹೋರಾಟಗಾರ ತೇಜಸ್ವಿ ವಿ. ಪಟೇಲ್ ಹೇಳಿದರು.ನಗರದ ಶ್ರೀ ಶಿವಯೋಗಿ ಮಂದಿರದಲ್ಲಿ ಭಾನುವಾರ ಸ್ವಾಭಿಮಾನಿ ಬಳಗ ಹಮ್ಮಿಕೊಂಡಿದ್ದ ಕುಟುಂಬ ರಾಜಕಾರಣ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಗೆ ಮಾರಕವೇ? ವಿಷಯ ಕುರಿತ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಿಚಾರ ಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯಕ್ಕೂ ವಿರುದ್ಧವಾದ ಕುಟುಂಬ ರಾಜಕಾರಣದ ಬಗ್ಗೆ ಮತದಾರರು ಜಾಗೃತರಾಗದ ಹೊರತು, ಪ್ರಜಾಪ್ರಭುತ್ವ ಯಶಸ್ವಿಯಾಗದು. ತತ್ವ, ಸಿದ್ಧಾಂತಗಳು ರಾಜಕಾರಣದಲ್ಲಿ ಮೇಲ್ನೋಟಕ್ಕೆ ಕಂಡರೂ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಪ್ರೈವೇಟ್ ಕಂಪನಿಗಳಂತಾಗಿವೆ. ಅಭಿವೃದ್ಧಿ ವಿಚಾರದ ಬದಲು, ಜಾತಿ, ಧರ್ಮವೇ ಮಾರ್ಕೆಟಿಂಗ್ ವಿಷಯವಾಗಿವೆ. ಈಗಿನ ದಿನಗಳಲ್ಲಿ ರಾಜಕೀಯದಲ್ಲಿ ಸೇವೆ, ಸಾಮಾಜಿಕ ಬದ್ಧತೆ ಉಳಿದಿಲ್ಲ. ಅದೊಂದು ವ್ಯವಹಾರ, ಉದ್ಯಮವಾಗಿ ಪರಿವರ್ತನೆಯಾಗಿದೆ. ಸಾರ್ವಜನಿಕ ಹೋರಾಟಕ್ಕಿಂತ ಪಕ್ಷ ಸೇವೆ, ನಾಯಕರಿಗೆ ಸೇವೆ ಮಾಡುವುದು ಟಿಕೆಟ್ ಪಡೆಯಲು ಮಾನದಂಡವಾಗಿದೆ. ರಾಜಕೀಯ ವ್ಯವಸ್ಥೆಯ ಸದ್ಯದ ದುಸ್ಥಿತಿಗೆ ಮತದಾರರಾದ ನಾವೂ ಸಹ ಕಾರಣ ಎಂದು ವಿಷಾದಿಸಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಜಿ.ಬಿ.ವಿನಯಕುಮಾರ ಪ್ರಯತ್ನಿಸಿದ್ದರು. ಆದರೆ, ಜನರ ಪ್ರೀತಿ, ವಿಶ್ವಾಸ ಗಳಿಸಿದರೂ ಪಕ್ಷದ ಟಿಕೆಟ್ ಗಿಟ್ಟಲಿಲ್ಲ. ರಾಜ್ಯಶಾಸ್ತ್ರದಲ್ಲಿ ಓದಿಕೊಂಡಂತೆ ವಾಸ್ತವ ಸ್ಥಿತಿ ಇಲ್ಲವೆಂಬ ಸಂಗತಿ ಈಗ ವಿನಯ್ ಅವರಿಗೆ ಅರಿವಾದಂತಿದೆ. ಸ್ವಾಭಿಮಾನ ಇದ್ದ ಕಾರಣಕ್ಕೆ ವಿನಯ್‌ಗೆ ಟಿಕೆಟ್ ಸಿಗಲಿಲ್ಲ. ರಾಜಿ ಮನೋಭಾವವಿದ್ದಿದ್ದರೆ ಮಾತ್ರ ಪಕ್ಷದಲ್ಲಿ ಬೆಳೆಯಲು ಸಾಧ್ಯ ಎಂದರು. ಸದ್ಯದ ಸ್ಥಿತಿಯಲ್ಲಿ ಪರ್ಯಾಯ ರಾಜಕೀಯ ಶಕ್ತಿಗೆ ಪೂರಕ ವಾತಾವರಣವಿದೆ. ಸಂವಿಧಾನದ ಆಶಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿರುವ ವಿನಯ್ ಅವರ ವಿಚಾರಗಳು ಯಶಸ್ವಿಯಾಗಲಿ ಎಂದರು.ಬೋಧಕ, ಚಿತ್ರ ನಿರ್ದೇಶಕ ಮಾರುತಿ ಶಾಲೆಮನೆ ಮಾತನಾಡಿ, ಯುವಜನರು ರಾಜಕೀಯದಿಂದ ದೂರವಾಗುತ್ತಿರುವುದು ಸರಿಯಲ್ಲ. ಯುವಜನರು ರಾಜಕೀಯ ವಿಷಯಗಳಲ್ಲಿ ಹೆಚ್ಚು ಸಕ್ರಿಯರಾಗಬೇಕು. ಎಲ್ಲರಲ್ಲೂ ರಾಜಕೀಯ ಪ್ರಜ್ಞೆ ಇರಬೇಕು ಎಂದರು.
ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ ಮಾತನಾಡಿ, ನಮ್ಮದು ಯಾವುದೇ ಕುಟುಂಬವೊಂದರ ವಿರುದ್ಧ ಮಾಡುತ್ತಿರುವ ಆಂದೋಲನವಲ್ಲ. ದೇಶದಲ್ಲಿ 34 ಕುಟುಂಬಗಳು ಬಲಿಷ್ಠವಾಗಿ ಬೆಳೆದು, 140 ಕೋಟಿ ಜನರನ್ನು ನಿಯಂತ್ರಿಸುತ್ತಿವೆ. ಇಂತಹ ಕುಟುಂಬ ರಾಜಕಾರಣದ ವ್ಯವಸ್ಥೆ ಮೊದಲು ಬದಲಾಗಬೇಕು. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾರ್ಯಕ್ರಮ ನಾನು ಮಾಡಿಲ್ಲ. ನನ್ನಂತಹ ನೂರಾರು ಜನರು ಬೆಳೆಯಬೇಕು. ಜಿಲ್ಲೆ, ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕು. ಒಬ್ಬ ವ್ಯಕ್ತಿಯ ಮೇಲೆ ವ್ಯವಸ್ಥೆ ಸೃಷ್ಟಿ ಆಗಬಾರದು. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಅದಕ್ಕಾಗಿ ಸ್ವಾಭಿಮಾನಿ ಬಳಗ ಜನರ ಸ್ವಾಭಿಮಾನಕ್ಕಾಗಿ ಹೋರಾಡಲಿದೆ ಎಂದು ಸ್ಪಷ್ಟಪಡಿಸಿದರು.ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣಕುಮಾರ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್, ವಕೀಲರಾದ ಸಿ.ಪಿ. ಅನಿತಾ, ಎಸ್.ಎಂ. ಕೃಷ್ಣ ಕಾಲೇಜಿನ ಪ್ರಾಚಾರ್ಯ ಕೆ.ಎಸ್. ಗಂಗಾಧರ ಇತರರು ಇದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ 17 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ವಿತರಿಸಲಾಯಿತು. ಇದಕ್ಕೂ ಮುನ್ನ ಸಂವಿಧಾನ ಪೀಠಿಕೆ ಓದಲಾಯಿತು.
- - -(ಬಾಕ್ಸ್)* ಪಟೇಲರ ಆಶಯಕ್ಕೆ ಕೊಡಲಿಪೆಟ್ಟು ಬಿದ್ದ ನೋವಿದೆ
ಮುಂಚೆ ನಾವು ಶಿವಮೊಗ್ಗ ಜಿಲ್ಲೆಗೆ ಸೇರಿದ್ದೆವು. ದೇವರಾಜ ಅರಸು ಕೃಷಿ ಸುಧಾರಣೆ ತಂದಾಗ ಶಿವಮೊಗ್ಗದಲ್ಲಿ ಕ್ರಾಂತಿಕಾರಕ ಬದಲಾವಣೆಯಾಯಿತು. ಜೆ.ಹೆಚ್. ಪಟೇಲರು ತಮ್ಮ ತಂದೆ ಜಮೀನ್ದಾರರಾಗಿದ್ದರೂ ಗೇಣಿದಾರರ ಪರ ಹೋರಾಟ ನಡೆಸಿದ್ದರು. ಶಿವಮೊಗ್ಗದಲ್ಲಿದ್ದ ಹೋರಾಟ ಮನೋಭಾವನೆ ಇಲ್ಲಿ ಈಗ ಕಂಡು ಬರುತ್ತಿಲ್ಲ. ದಾವಣಗೆರೆ ಜಿಲ್ಲೆಯು ಇಂದು ವ್ಯವಹಾರ ಜಿಲ್ಲೆಯಾಗಿದ್ದು, ಪಟೇಲರ ಆಶಯಕ್ಕೆ ಕೊಡಲಿ ಪೆಟ್ಟು ಬಿತ್ತು ಎಂಬ ನೋವು ಸದಾ ಇದ್ದೇ ಇದೆ ಎಂದು ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.- - - -16ಕೆಡಿವಿಜಿ3.ಜೆಪಿಜಿ:
ಸಮಾರಂಭವನ್ನು ತೇಜಸ್ವಿ ವಿ. ಪಟೇಲ್ ಉದ್ಘಾಟಿಸಿದರು. ಜಿ.ಬಿ.ವಿನಯಕುಮಾರ, ಎಲ್.ಎಚ್. ಅರುಣಕುಮಾರ, ನಾಗರಾಜ ಎಸ್. ಬಡದಾಳ್, ಸಿ.ಪಿ. ಅನಿತಾ ಇತರರು ಇದ್ದರು.