ಕುಟುಂಬ ವ್ಯವಸ್ಥೆಯೇ ಧರ್ಮದ ನಿಜವಾದ ಆಧಾರ: ಸ್ವರ್ಣವಲ್ಲೀ ಶ್ರೀ

| Published : Jun 13 2024, 12:50 AM IST

ಸಾರಾಂಶ

ಹಿಂದು ಧರ್ಮದ ನಿಜವಾದ ಆಧಾರ ಕುಟುಂಬ ವ್ಯವಸ್ಥೆ. ಅದನ್ನು ಉಳಿಸಿಕೊಳ್ಳುವುದು ದಂಪತಿಗಳ ಜವಾಬ್ದಾರಿ ಎಂದು ಸ್ವರ್ಣವಲ್ಲೀ ಶ್ರೀಗಳು ತಿಳಿಸಿದರು.

ಶಿರಸಿ: ಕುಟುಂಬ ವ್ಯವಸ್ಥೆಯೇ ಧರ್ಮದ ನಿಜವಾದ ಆಧಾರ ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಬೆಂಗಳೂರಿನ ಅಭ್ಯುದಯದಲ್ಲಿ ನಡೆದ ಧನ್ಯೋ ಗೃಹಸ್ಥಾಶ್ರಮ ದಂಪತಿ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.ಇತ್ತೀಚಿನ ದಿನಗಳಲ್ಲಿ ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿರುವ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಅವರು, ನವ ದಂಪತಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ಸಕಾಲದಲ್ಲಿ ನೀಡಿದರೆ ಮುಂದೆ ಹುಟ್ಟುವ ಪ್ರಜೆಗಳು ಧರ್ಮಪ್ರಜೆಯಾಗಿ ಹುಟ್ಟುತ್ತಾರೆ ಎಂದರು.

ವಿವಾಹ ವಿಚ್ಛೇದನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯುವ ಅಗತ್ಯತೆಯನ್ನು ಒತ್ತಿ ಹೇಳಿದರು. ದಂಪತಿಗಳು ಹೊಂದಾಣಿಕೆಯಿಂದ ಇದ್ದು ಜೀವನ ನಡೆಸಬೇಕು. ಪರಸ್ಪರ ಸ್ಪಂದಿಸಿ ವಿವೇಚನೆಯಿಂದ ನಡೆದರೆ ವಿವಾಹ ವಿಚ್ಚೇದನವನ್ನು ತಡೆಯಬಹುದು ಎಂದ ಅವರು, ಹಿಂದು ಧರ್ಮದ ನಿಜವಾದ ಆಧಾರ ಕುಟುಂಬ ವ್ಯವಸ್ಥೆ. ಅದನ್ನು ಉಳಿಸಿಕೊಳ್ಳುವುದು ದಂಪತಿಗಳ ಜವಾಬ್ದಾರಿ ಎಂದರು.

ಸ್ವರ್ಣವಲ್ಲೀ ಸೀಮಾ ಪರಿಷತ್ ಅಧ್ಯಕ್ಷ ಶಿವರಾಮ ಹೆಗಡೆ ಕಾಗೇರಿ, ಸಂಚಾಲಕ ವಿ.ಎಂ. ಹೆಗಡೆ ತ್ಯಾಗಲಿ, ಅಖಿಲ ಹವ್ಯಕ ಮಹಾಸಭಾ ಗೌರವ ಕಾರ್ಯದರ್ಶಿ ಪ್ರಶಾಂತ ಭಟ್ಟ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಕೃಷ್ಣಮೂರ್ತಿ ಭಾಯರಿ, ವೇ. ಅನಂತಮೂರ್ತಿ ಭಟ್ಟ ಯಲೂಗಾರ ಹಾಗೂ ಡಾ. ಸಾವಿರ್ತಿ ಸಾಂಭಮೂರ್ತಿ ಭಾಗವಹಿಸಿದ್ದರು. ನರಸಿಂಹ ಹೆಗಡೆ ಅರೇಕಟ್ಟು ಸ್ವಾಗತಿಸಿದರು. ರಮೇಶ ಭಟ್ಟ ಮೆಣಸಿ ಕಾರ್ಯಕ್ರಮ ನಿರ್ವಹಿಸಿದರು. ಸುಮಾರು ೫೦ಕ್ಕೂ ಹೆಚ್ಚು ದಂಪತಿಗಳು ಈ ಶಿಬಿರದ ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು.