ಅಂಬರೀಶ್‌ ಅಭಿನಯದ ಮಂಡ್ಯದ ಗಂಡು ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ.ರಘು ನಿಧನ

| N/A | Published : Mar 22 2025, 02:06 AM IST / Updated: Mar 22 2025, 12:31 PM IST

ಅಂಬರೀಶ್‌ ಅಭಿನಯದ ಮಂಡ್ಯದ ಗಂಡು ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ.ರಘು ನಿಧನ
Share this Article
  • FB
  • TW
  • Linkdin
  • Email

ಸಾರಾಂಶ

ಅಂಬರೀಶ್‌ ಅಭಿನಯದ ‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ.ರಘು (76) ಅವರು ನಿಧನರಾಗಿದ್ದಾರೆ. ಅವರು ಕಳೆದ ಐದಾರು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

 ಬೆಂಗಳೂರು : ಅಂಬರೀಶ್‌ ಅಭಿನಯದ ‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ.ರಘು (76) ಅವರು ನಿಧನರಾಗಿದ್ದಾರೆ. ಅವರು ಕಳೆದ ಐದಾರು ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

ಗುರುವಾರ ತಡರಾತ್ರಿ ಬೆಂಗಳೂರಿನ ಆರ್‌.ಟಿ.ನಗರದಲ್ಲಿರುವ ಮಠದಹಳ್ಳಿಯ ಮನೆಯಲ್ಲಿ ನಿಧನರಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಕನ್ನಡ, ಹಿಂದಿ, ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎ.ಟಿ.ರಘು ಅವರು 1990ರಲ್ಲಿ ‘ಅಜಯ್‌-ವಿಜಯ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ನಂತರ ‘ಮಿಡಿದ ಹೃದಯಗಳು’, ‘ಬೇಟೆಗಾರ’, ‘ಧರ್ಮ ಯುದ್ಧ’, ‘ಮಂಡ್ಯದ ಗಂಡು’, ‘ಕಾಡಿನ ರಾಜ’, ‘ಮೈಸೂರು ಜಾಣ’, ‘ಇನ್ಸ್‌ಪೆಕ್ಟರ್ ಕ್ರಾಂತಿ ಕುಮಾರ್‌’, ‘ಪುಟ್ಟ ಹೆಂಡ್ತಿ’, ‘ಅಂತಿಮ ತೀರ್ಪು’, ‘ನ್ಯಾಯಕ್ಕಾಗಿ ನಾನು’, ‘ಪದ್ಮವ್ಯೂಹ’, ‘ಸೂರ್ಯೋದಯ’ ಸೇರಿ 55ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಎ.ಟಿ.ರಘು ನಿರ್ದೇಶನದ 55 ಚಿತ್ರಗಳ ಪೈಕಿ ಅಂಬರೀಶ್‌ ನಟನೆಯಲ್ಲೇ 27 ಚಿತ್ರಗಳು ಬಂದಿವೆ. ಹಿಂದಿಯಲ್ಲಿ ಅಂಬರೀಶ್ ಹಾಗೂ ರಜನಿಕಾಂತ್‌ ನಟನೆಯ ‘ಮೇರಿ ಅದಾಲತ್‌’ ಚಿತ್ರ ನಿರ್ದೇಶಿಸುವ ಮೂಲಕ ಬಾಲಿವುಡ್‌ಗೂ ಪ್ರವೇಶಿಸಿದ ಖ್ಯಾತಿ ಎ.ಟಿ.ರಘು ಅವರದ್ದು.

ಕೊಡಗು ಮೂಲದವರಾದ ಎ.ಟಿ.ರಘು (ಅಪಡಾಂಡ ಟಿ.ರಘು) ಅವರು ನಿರ್ದೇಶಕರಾಗಿ, ಬರಹಗಾರ, ನಿರ್ಮಾಪಕ, ನಿರ್ದೇಶಕ ಹಾಗೂ ನಟರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ಇವರ ಸಾಧನೆಗೆ ಕರ್ನಾಟಕ ಸರ್ಕಾರದ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಲಾಸಾಗರ ಸಂಗೀತ ನೃತ್ಯ ನಾಟಕ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.