ಸಾರಾಂಶ
ಕೋಟ ಖ್ಯಾತ ಉರಗತಜ್ಞ ಸುಧೀಂದ್ರ ಐತಾಳ್ಳ್ ಹಾಗೂ ಅವರ ಮಗ ೭ನೇ ತರಗತಿಯ ಧೀರಜ್ಜ್ ಐತಾಳ್ಳ್ ಅವರಿಂದ ಬೃಹತ್ತ್ ಹೆಬ್ಬಾವು ಹಿಡಿಯುವ ಸಾಹಸ
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಸಾಲಿಗ್ರಾಮದ ದೇವಾಡಿಗರಬೆಟ್ಟು ಎಂಬಲ್ಲಿ ತಂದೆ ಮತ್ತು ಮಗ ಸೇರಿ ಬೃಹತ್ ಹೆಬ್ಬಾವುವನ್ನು ಹಿಡಿಯುವ ಸಾಹಸದ ವಿಡಿಯೋವೊಂದು ಇದೀಗ ವೈರಲ್ ಆಗಿದೆ.ಕೋಟದ ಖ್ಯಾತ ಉರಗತಜ್ಞ ಸುಧೀಂದ್ರ ಐತಾಳ್ ಅವರು ಹಾವುಗಳನ್ನು ಹಿಡಿಯುವುದರಲ್ಲಿ ಪರಿಣತರಾಗಿದ್ದಾರೆ. ಇದೀಗ ಅವರ ಮಗ 7ನೇ ತರಗತಿಯ ವಿದ್ಯಾರ್ಥಿ, ಧೀರಜ್ ಐತಾಳ್ ಕೂಡ ತಂದೆಯ ಜೊತೆ ಕೈಜೋಡಿಸುತ್ತಿದ್ದಾನೆ.
ಇತ್ತೀಚೆಗೆ ದೇವಾಡಿಗಬೆಟ್ಚು ಎಂಬಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡು ಜನರು ಭಯಭೀತರಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಐತಾಳರು ಮಗನ ಜೊತೆ ಸ್ಥಳಕ್ಕೆ ತೆರಳಿದರು. ಸುಧೀಂದ್ರ ಐತಾಳ್ ಬಹಳ ಬಲಯುತವಾಗಿದ್ದ ಹಾವಿನ ಬಾಲವನ್ನು ಹಿಡಿದರೆ, ಧೀರಜ್ ಐತಾಳ್ ಹಾವಿನ ತಲೆಯನ್ನು ಹಿಡಿದಿದ್ದಾನೆ. ಹಾವು ಹಿಡಿಯುವಾಗ ಒಂದು ಬಾರಿ ಹಾವು ಕಚ್ಚುವುದಕ್ಕೆ ಮುಂದಾದಾಗ ಧೀರಜ್ ಚಾಕಚಕ್ಯತೆಯಿಂದ ತಪ್ಪಿಸಿಕೊಂಡು, ಎರಡನೇ ಬಾರಿ ಹಾವಿನ ಕುತ್ತಿಗೆಯನ್ನು ಹಿಡಿಯವಲ್ಲಿ ಸಫಲನಾಗಿದ್ದಾನೆ. ದೃಢಕಾಯವಾಗಿದ್ದ ಈ ಹಾವು ಅವರ ಕೈಗೆ ಸುತ್ತಿಕೊಳ್ಳುವ ಪ್ರಯತ್ನವನ್ನೂ ಮಾಡಿತು. ಕೊನೆಗೆ ತಂದೆ- ಮಗ ಸೇರಿ ಹಾವನ್ನು ಗೋಣಿ ಚೀಲಕ್ಕೆ ತುಂಬಿಸಿದರು.ಈ ಮೈನವಿರೇಳಿಸುವ ದೃಶ್ಯವನ್ನು ಅಲ್ಲಿದ್ದವರು ಮೊಬೈಲಿನಲ್ಲಿ ಸೇರಿ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.